ಕನ್ನಡಪ್ರಭ ವಾರ್ತೆ, ಬೆಂಗಳೂರು
ಅಧಿಕಾರ ಹಂಚಿಕೆ ಗೊಂದಲ ಶುರುವಾದ ಮೇಲೆ ಇಬ್ಬರೂ ನಾಯಕರು ಒಟ್ಟಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರಿನ ಸೇಂಟ್ ಥಾಮಸ್ ಆಂಗ್ಲ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಮಧ್ಯಾಹ್ನ 1.15 ಗಂಟೆಗೆ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಭಾಗಿಯಾಗಲಿದ್ದಾರೆ.ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ದೆಹಲಿಗೆ ವಾಪಸಾಗಲಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.
ಭೇಟಿ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದು ಅಧಿಕಾರ ಹಂಚಿಕೆ ಕುರಿತು ಸಹ ಪ್ರಸ್ತಾಪವಾಗಲಿದೆಯೇ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.ಸಂಕ್ರಾಂತಿ ಮರುದಿನ ಡಿಕೆಶಿ ಡೆಲ್ಲಿಗೆ, ರಾಹುಲ್ ಜತೆ ಮಾತುಕತೆ ಸಂಭವ:ಸಂಕ್ರಾಂತಿ ಹಬ್ಬದ ಮರುದಿನ ಜ.16 ರಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದು, ಈ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
16 ರಂದು ದೆಹಲಿಯಲ್ಲಿ ಅಸ್ಸಾಂ ಚುನಾವಣೆಯ ವೀಕ್ಷಕರ ಸಭೆಯನ್ನು ಎಐಸಿಸಿ ಕರೆದಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದು, ಈ ವೇಳೆ ಅವಕಾಶ ಸಿಕ್ಕರೆ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಜ.22ರಂದು ಎಂಜಿ-ನರೇಗಾ ಯೋಜನೆಯನ್ನು ಬದಲಿಸಿ ಜಿ-ರಾಮ್-ಜಿ ಎಂದು ಮಾಡಿರುವ ಕೇಂದ್ರದ ನಡೆ ವಿರುದ್ಧ ಹೋರಾಟ ರೂಪಿಸುವ ಕುರಿತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸಭೆ ನಡೆಯುವ ಸಾಧ್ಯತೆಯಿದೆ. ಈ ಸಭೆ ನಡೆದರೆ ಡಿ.ಕೆ.ಶಿವಕುಮಾರ್ ಅವರು ಸಹ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಖರ್ಗೆ - ಡಿಕೆ ಮಾತುಕತೆ ಕುತೂಹಲ:ಅಧಿಕಾರ ಹಸ್ತಾಂತರದ ಗೊಂದಲಗಳ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು.ಇಬ್ಬರೂ ನಾಯಕರ ನಡುವೆ ನಡೆದ ಗೌಪ್ಯ ಚರ್ಚೆ ಏನು ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೂ ಅಧಿಕಾರ ಹಸ್ತಾಂತರ ಸೇರಿದಂತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಚರ್ಚೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಒಟ್ಟಿಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿಂದ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಕುಮಾರ್ ಮೂರು ಮಂದಿ ಒಟ್ಟಾಗಿ ಕಲಬುರಗಿ ಜಿಲ್ಲೆ ಜೇವರ್ಗಿ ಮತಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದರು.