ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಅನಿವಾರ್ಯ: ಶೆಟ್ಟರ್‌

KannadaprabhaNewsNetwork |  
Published : Aug 18, 2024, 01:58 AM ISTUpdated : Aug 18, 2024, 08:02 AM IST
Jagadish shettar

ಸಾರಾಂಶ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾಂಗ್ರೆಸ್‌ ಮುಖಂಡರಿಗೆ ಖುಷಿ ನೀಡಿದೆ. ಅರ್ಕಾವತಿ ಪ್ರಕರಣದಲ್ಲಿ ಪಾರಾಗಿದ್ದ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ ಪಾರಾಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ಹುಬ್ಬಳ್ಳಿ:  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ‌ ನೀಡಿದ್ದಾರೆ‌. ಸಿದ್ದರಾಮಯ್ಯ ರಾಜೀನಾಮೆ‌ ನೀಡುವುದು ಅನಿವಾರ್ಯವಾಗಿದೆ. ಈಗಲಾದರೂ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಂಸದ ಜಗದೀಶ‌ ಶೆಟ್ಟರ್‌ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ 14 ನಿವೇಶನ ಪಡೆದಿದ್ದು ಕಾನೂನು ಬಾಹಿರ. ಅವರು ತನಿಖೆ‌ ಆರಂಭವಾದ ನಂತರ ರಾಜೀನಾಮೆ‌ ಕೊಡುತ್ತಾರೆಯೋ? ಈಗಲೇ ರಾಜೀನಾಮೆ ನೀಡುತ್ತಾರೆಯೋ ಎಂಬುದನ್ನು ನೋಡಬೇಕು. ರಾಜೀನಾಮೆ ನೀಡುವುದು ಅನಿವಾರ್ಯ ಎಂದರು.

ಪ್ರಾಸಿಕ್ಯೂಷನ್‌ಗೆ ಅನುಮತಿ‌ ನೀಡಿದ್ದರಿಂದ ಬಹಳಷ್ಟು ಜನ ಕಾಂಗ್ರೆಸ್ ನಾಯಕರು ಒಳಗೊಳಗೆ ಖುಷಿ ಪಡುತ್ತಿದ್ದಾರೆ. ಅರ್ಕಾವತಿ‌ ಪ್ರಕರಣದಲ್ಲಿ ಅವರು ಪಾರಾಗಿದ್ದರು. ಈ ಬಾರಿ ಸಿದ್ದರಾಮಯ್ಯ ಪಾರಾಗಲು ಸಾಧ್ಯವಿಲ್ಲ. ಅವರು ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಅಲ್ಲಿನ‌ ತೀರ್ಪು ಆಧರಿಸಿ ಮುಂದಿನ‌ ಹೋರಾಟ ಮಾಡುತ್ತೇವೆ ಎಂದರು.

ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಕ್ರಮ‌ಕೈಗೊಂಡಿದ್ದಾರೆ. ಶಶಿಕಲಾ‌ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕಾನೂನು ತಿಳಿದುಕೊಂಡಿದ್ದೇನೆ ಎಂದು ಹೇಳುವ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಅವರು ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.

ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಕ್ಕೆ ಜಾತಿ‌ ಬಣ್ಣ ಬಳಿಯಬಾರದು. ಅಹಿಂದ ನಾಯಕರಾದರೆ ಈ ರೀತಿ ಮಾಡಬಹುದಾ? ಅವರು ತಪ್ಪು ಮಾಡಿಲ್ಲ ಎಂದಾದರೆ ಏಕೆ ಹೆದರಬೇಕು? ಪ್ರಧಾನಿ ನರೇಂದ್ರ ಮೋದಿ ಸಹ‌ ಹಿಂದುಳಿದ ವರ್ಗಗಳ ನಾಯಕ. ಪ್ರಧಾ‌ನಿಯಾಗಿ ಹತ್ತು ವರ್ಷ ಆಡಳಿತ ನಡೆಸಿದ್ದಾರೆ‌. ಅವರ ಮೇಲೆ ಹಗರಣಗಳ ಅರೋಪವಿದೆಯೇ? ನೀವು ಅವರ ರೀತಿ ಪ್ರಾಮಾಣಿಕ ಆಡಳಿತ ನಡೆಸಬಹುದಿತ್ತು ಎಂದರು.

ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಅತೃಪ್ತರು ಪಾದಯಾತ್ರೆಗೆ ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು