ಬೆಂಬಿಡದೆ ಸುರಿದ ಮಳೆ : ಕುಕನೂರು ತಾಲೂಕಿನ ಜನಜೀವನ ಅಸ್ತವ್ಯಸ್ತ-ಮನೆಗಳಿಗೆ ನುಗ್ಗಿದ ನೀರು

KannadaprabhaNewsNetwork |  
Published : Aug 18, 2024, 01:58 AM ISTUpdated : Aug 18, 2024, 08:05 AM IST
17ಕೆಕೆಆರ್2:ಕುಕನೂರು ತಾಲೂಕಿನ ಕೋನಾಪೂರ ಗ್ರಾಮದಲ್ಲಿ ಅಪಾರ ಮಳೆಯಿಂದ ಹಳ್ಳದ ನೀರು ಗ್ರಾಮದ ಮನೆಗಳಿಗೆ ನುಗ್ಗಿರುವುದು. | Kannada Prabha

ಸಾರಾಂಶ

ತಾಲೂಕಿನಾದ್ಯಂತ ರಾತ್ರಿ ಇಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

  ಕುಕನೂರು :  ತಾಲೂಕಿನಾದ್ಯಂತ ರಾತ್ರಿ ಇಡೀ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಧ್ಯರಾತ್ರಿ 2 ಗಂಟೆಗೆ ಆರಂಭವಾದ ಮಳೆ ಗುಡುಗು, ಸಿಡಿಲು, ಮಿಂಚುಗಳ ಆರ್ಭಟದೊಂದಿಗೆ ಸುರಿದಿದೆ. ಅಪಾರ ಮಳೆಗೆ ಜಮೀನುಗಳ ಬದುವುಗಳು ಒಡೆದು ಹೋಗಿವೆ. ಕೆಲವು ಕಡೆ ಕೆರೆಗಳ ಕೊಡಿಗಳು ಒಡೆದು ಹೋಗಿವೆ. ಹಳ್ಳಗಳು ತುಂಬಿ ಹರಿದಿವೆ. ರಾತ್ರಿ ಆರಂಭವಾದ ಮಳೆ ಶನಿವಾರ ಬೆಳಗ್ಗೆ 9 ಗಂಟೆಯವರೆಗೂ ಒಂದು ನಿಮಿಷ ಸಹ ಬಿಡುವು ನೀಡದೆ ಬೆಂಬಿಡದೆ ಸುರಿದಿದೆ. ಗುಡುಗು, ಮಿಂಚಿನ ಆರ್ಭಟದ ಧಾರಾಕಾರ ಮಳೆ ಜನರ ಎದೆ ನಡುಗಿಸಿತು. ಹಳ್ಳಗಳು ತುಂಬಿ ಹರಿದಿದ್ದರಿಂದ ಜನರು ಸಂಚಾರ ಮಾಡಲು ಪರದಾಡುವಂತಾಯಿತು. ತಾಲೂಕಿನ ಬಳಗೇರಿ, ಬೂದಗುಂಪಾ, ಕದ್ರಳ್ಳಿ ಹಳ್ಳಗಳು ತುಂಬಿ ಹರಿದಿವೆ. ಶನಿವಾರ ಸಂಜೆಯಾದರೂ ಸಹ ಹಳ್ಳದ ಹರಿವು ತಗ್ಗಿಲ್ಲ.

ಮನೆಗಳಿಗೆ ನುಗ್ಗಿದ ನೀರು:

ತಾಲೂಕಿನ ಕೋನಾಪೂರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿಯಿಡಿ ಗುಡುಗು, ಸಿಡಿಲುಗಳ ಆರ್ಭಟದ ಸದ್ದಿನಲ್ಲಿ ಮನೆಗಳಿಗೆ ನುಗ್ಗಿದ ನೀರನ್ನು ಗ್ರಾಮಸ್ಥರು ಹೊರಗಡೆ ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಗ್ರಾಮದ ಪಕ್ಕದಲ್ಲಿ ದೊಡ್ಡದೊಂದು ಹಳ್ಳ ಹರಿಯುತ್ತದೆ. ಗ್ರಾಮದ ಚರಂಡಿ ನೀರು ಆ ಹಳ್ಳಕ್ಕೆ ಹರಿದು ಹೋಗುತ್ತದೆ. ಆದರೆ ಧಾರಾಕಾರ ಮಳೆಗೆ ಚರಂಡಿ ಮೂಲಕ ಹಳ್ಳದ ನೀರು ಗ್ರಾಮ ಪ್ರವೇಶಿಸಿದೆ. ಗ್ರಾಮ ಮಾತ್ರವಲ್ಲದೆ ಗ್ರಾಮದ ಮನೆಯೊಳಗೂ ನೀರು ಹರಿದು ಹೋಗಿದೆ. ಮನೆಯಲ್ಲಿರುವ ಧಾನ್ಯ ಹಾಗೂ ದಿನ ಬಳಕೆ ವಸ್ತುಗಳ ಹಾನಿಯಾಗಿವೆ.

ಕೆರೆಯಂತಾದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನ:

ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಕೆರೆಯಂತಾಗಿದೆ.ಪ್ರತಿವರ್ಷ ಮಳೆಗಾಲ ಬಂದಾಗ ಈ ಶಾಲೆಯ ಮೈದಾನಕ್ಕೆ ನೀರು ಹರಿದು ಬಂದು ಮಕ್ಕಳು ಅನುಭವಿಸುವ ಪಾಡು ಹೇಳತೀರದು. ಇದರಿಂದ ಮಕ್ಕಳ ಕಲಿಕೆ ಜತೆಗೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಶಾಲೆಯ ಹತ್ತಿರ ಸಮರ್ಪಕ ಚರಂಡಿ ನಿರ್ಮಿಸದಿರುವುದೇ ಇದಕ್ಕೆ ಕಾರಣವಾಗಿದೆ. 

ತ್ವರಿತವಾಗಿ ಚರಂಡಿ ನಿರ್ಮಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮವಹಿಸುವಲ್ಲಿ ಅಧಿಕಾರಿಳು, ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಮಳೆ ನೀರು ಶಾಲೆ ಮೈದಾನಕ್ಕೆ ನುಗ್ಗಿ ಕೆರೆಯಂತಾಗಿದೆ. ಶಾಲಾ ಮಕ್ಕಳು ಮಳೆ ನೀರಿನಲ್ಲೇ ಶಾಲೆಗೆ ಬರುವುದು ಅನಿವಾರ್ಯವಾಗಿದೆ. ಇದರಿಂದ ಮಕ್ಕಳು ನೀರಿನಲ್ಲಿ ಜಾರಿಬಿದ್ದು ಏನಾದರೂ ಅಪಾಯವಾದರೆ ಇದಕ್ಕೆ ಯಾರು ಹೊಣೆ? ಇನ್ನಾದರೂ ಗ್ರಾಪಂ ಆಡಳಿತ ಕೂಡಲೇ ಚರಂಡಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಾಲೂಕಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಗಳ ಸಂಘದ ಅಧ್ಯಕ್ಷ ಶರಣಪ್ಪ ಏಳುಗುಡ್ಡದ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ