ಬಡವರ ಮನೆ ತಲುಪಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಅಕ್ಕಿ!

KannadaprabhaNewsNetwork | Updated : Mar 15 2025, 02:04 PM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ''''ಅನ್ನಭಾಗ್ಯ ಅಕ್ಕಿ'''' ಕೊನೆಗೂ ಈಗ ರಾಜ್ಯ ಬಿಪಿಎಲ್‌ ಕಾರ್ಡ್‌ ಫಲಾನುಭವಿಗಳ ಮನೆ ಮನೆಗೆ ತಲುಪುತ್ತಿದ್ದು, ಮಹಿಳೆಯರು ಖುಷಿಯಾಗಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ''''''''ಅನ್ನಭಾಗ್ಯ ಅಕ್ಕಿ'''''''' ಕೊನೆಗೂ ಈಗ ರಾಜ್ಯ ಬಿಪಿಎಲ್‌ ಕಾರ್ಡ್‌ ಫಲಾನುಭವಿಗಳ ಮನೆ ಮನೆಗೆ ತಲುಪುತ್ತಿದ್ದು, ಮಹಿಳೆಯರು ಖುಷಿಯಾಗಿದ್ದಾರೆ.

ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಸರ್ಕಾರ ಹೇಳಿದಂತೆ ಮಾರ್ಚನಲ್ಲೇ ಓರ್ವ ಸದಸ್ಯನಿಗೆ 15 ಕಿಲೋ ಅಕ್ಕಿ ವಿತರಿಸುತ್ತಿದ್ದು, ಫೆಬ್ರವರಿಯ 5 ಕಿಲೋ ಅಕ್ಕಿ ಸಹ ಇದರಲ್ಲಿ ಸೇರಿದೆ.

ರಾಜ್ಯದಲ್ಲಿ 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆಯಲ್ಲಿ ಭರವಸೆ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಅನ್ನಭಾಗ್ಯಕ್ಕೆ ಕೇಂದ್ರದಿಂದ ಅಕ್ಕಿ ಸಿಗದ ಹಿನ್ನೆಲೆಯಲ್ಲಿ ಒಬ್ಬ ಸದಸ್ಯನಿಗೆ ₹170 ಗಳಂತೆ ಕಾರ್ಡನಲ್ಲಿರುವ ಎಲ್ಲ ಸದಸ್ಯರಿಗೆ ಅಂದರೆ ಮನೆ ಒಡತಿಯ ಬ್ಯಾಂಕ್ ಅಕೌಂಟ್‌ಗೆ ಹಣ ಜಮಾ ಮಾಡಲಾಗುತ್ತಿತ್ತು.

ಮಾರ್ಚ್ ಮೊದಲ ವಾರದಲ್ಲೇ ಜನವರಿಯ ಅನ್ನಭಾಗ್ಯದ ಹಣ ಎಲ್ಲ ಫಲಾನುಭವಿಗಳ ಅಕೌಂಟ್‌ಗೆ ಜಮಾ ಮಾಡಲಾಗಿದೆ. ಈಗ ಮಾರ್ಚ್‌ ಅಕ್ಕಿ ಜತೆಗೆ ಫೆಬ್ರವರಿ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಇನ್ನು ಪ್ರತಿ ತಿಂಗಳು ಸದಸ್ಯರಿಗೆ 10 ಕಿಲೋ ಅಕ್ಕಿ ವಿತರಣೆಯಾಗಲಿದೆ.

ಈ ಅನ್ನಭಾಗ್ಯ ಕುರಿತಂತೆ ರಾಜ್ಯದಲ್ಲಿ ತೀವ್ರ ಚರ್ಚೆಗಳು ನಡೆದವು. ಆರೋಪ- ಪ್ರತ್ಯಾರೋಪಗಳು ಕೇಳಿ ಬಂದವು. ಕೊನೆಗೂ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ವಿತರಣೆ ಮಾಡಿ ಕಾಂಗ್ರೆಸ್‌ ಸರ್ಕಾರ ತನ್ನ ಮಾತು ಉಳಿಸಿಕೊಂಡಿದೆ.

3.5 ಲಕ್ಷ ಬಿಪಿಎಲ್ ಕಾರ್ಡ್

ಧಾರವಾಡ ಜಿಲ್ಲೆಯೊಂದರಲ್ಲಿಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ 3,61,774 ಬಿಪಿಎಲ್ ಕಾರ್ಡಗಳಿವೆ. 29,537 ಅಂತ್ಯೋದಯ ಕಾರ್ಡಗಳಿವೆ. 3,91,311 ಎಪಿಎಲ್ ಕಾರ್ಡಗಳಿವೆ. ಇವುಗಳ ಪೈಕಿ ಕಡು ಬಡವರಿಗೆ ಅಂತ್ಯೋದಯ ಒದಗಿಸಲಾಗಿದ್ದು, ಕುಟುಂಬದಲ್ಲಿ ಎಷ್ಟೇ ಸದಸ್ಯರಿದ್ದರೂ 35 ಕಿಲೋ ಅಕ್ಕಿ ದೊರೆಯುತ್ತದೆ. ಬಿಪಿಎಲ್ ಕಾರ್ಡ್‌ನ ಒಬ್ಬ ಸದಸ್ಯರಿಗೆ ಇಲ್ಲಿವರೆಗೆ 5 ಕಿಲೋ ಅಕ್ಕಿ ಮಾತ್ರ ದೊರೆಯುತ್ತಿತ್ತು, ಮಾರ್ಚ್‌ನಲ್ಲಿ 10 ಕಿಲೋ ಅಕ್ಕಿ ಮನೆ ಮನೆ ಸೇರುತ್ತಿದೆ. ಹುಬ್ಬಳ್ಳಿ ಮಹಾನಗರದಲ್ಲೇ 1,15, 920 ಬಿಪಿಎಲ್‌ ಕಾರ್ಡ್‌ಗಳಿವೆ. 3315 ಅಂತ್ಯೋದಯ ಕಾರ್ಡ್‌, 45 ಸಾವಿರ ಎಪಿಎಲ್‌ ಕಾರ್ಡ್‌ಗಳಿವೆ. 2024ರ ಮಾರ್ಚ್‌ನಿಂದಲೇ ಎಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ನೀಡುವುದನ್ನು ಬಂದ್‌ ಮಾಡಲಾಗಿದೆ. ಈ ಮೊದಲು ಈ ಕಾರ್ಡ್‌ದಾರರಿಗೆ 15 ರು.ನಂತೆ ಕಿಲೋ ಅಕ್ಕಿ ನೀಡಲಾಗುತ್ತಿತ್ತು.

ಗೋಧಿ, ಸಕ್ಕರೆ ಬೇಡಿಕೆ

ಪ್ರತಿ ಸದಸ್ಯರಿಗೆ 10 ಕಿಲೋ ಅಕ್ಕಿ ಕೊಟ್ಟರೆ, ನಾಲ್ಕೈದು ಸದಸ್ಯರಿರುವ ಕುಟುಂಬಕ್ಕೆ 40ರಿಂದ 50 ಕಿಲೋ ಅಕ್ಕಿ ಲಭಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಕ್ಕಿ ಕಡಿಮೆ ಮಾಡಿ ಈ ಹಿಂದೆ ನೀಡುತ್ತಿದ್ದಂತೆ ಎರಡ್ಮೂರು ಕಿಲೋ ಗೋಧಿ, ಸಕ್ಕರೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಮಹಿಳಾ ಫಲಾನುಭವಿಗಳು.

ನ್ಯಾಯಬೆಲೆ ಅಂಗಡಿ ಮೂಲಕ ಫಲಾನುಭವಿಗಳಿಗೆ ಸರಿಯಾಗಿ ಹಂಚಲು ತಹಸೀಲ್ದಾರ್‌ಗಳಿಗೆ ಸೂಚನೆ ಕೊಟ್ಟಿದೇವೆ. ಹೀಗಾಗಿ ಎಲ್ಲ ಫಲಾನುಭವಿಗಳಿಗೆ 15 ಕಿಲೋ ಅಕ್ಕಿ ತಲುಪಲಿದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟದ ದೂರುಗಳ ಬಂದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ ಎನ್ನುತ್ತಾರೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು.

ಕಾರ್ಡ್ ರದ್ದು

ನಾಲ್ಕು ದಿನಗಳಿಂದ ಧಾರವಾಡ ಜಿಲ್ಲೆಯ ಪಡಿತರ ಅಂಗಡಿಗಳಲ್ಲಿ ಪ್ರತಿ ಫಲಾನುಭವಿಗೆ 15 ಕಿಲೋ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಫಲಾನುಭವಿಗಳು ಕಾಳಸಂತೆಯಲ್ಲಿ ಅಕ್ಕಿ ಮಾರಿದರೆ ಕಾರ್ಡು ರದ್ದಾಗುತ್ತವೆ. ದೂರುಗಳು ಬಂದರೆ ತಕ್ಷಣೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.

- ಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಧಾರವಾಡಅಕ್ಕಿ ನೀಡಿದ್ದು ಸಂತೋಷ

ಗುರುವಾರ ಸಂಜೆ ಅಕ್ಕಿ ಪಡೆದಿದ್ದೇವೆ. ನಮ್ಮ ಬಿಪಿಎಲ್ ಕಾರ್ಡ್‌ನಲ್ಲಿ 4 ಸದಸ್ಯರು ಇದ್ದು, ಪ್ರತಿ ಸದಸ್ಯನಿಗೆ 15 ಕಿಲೋದಂತೆ 60 ಕಿಲೋ ಅಕ್ಕಿಯನ್ನು ನೀಡಿದ್ದಾರೆ. ಪ್ರತಿತಿಂಗಳು ಅಕೌಂಟ್‌ಗೆ ಹಾಕುತ್ತಿದ್ದ ಅನ್ನಭಾಗ್ಯದ ಹಣ ಬೇರೆ ಇನ್ಯಾವುದೋ ಕೆಲಸಕ್ಕೆ ಬಳಕೆಯಾಗುತ್ತಿತ್ತು. ಈಗ ಅಕ್ಕಿ ನೀಡಿರುವುದಕ್ಕೆ ಸಂತೋಷವಾಗಿದೆ.

- ಪ್ರಮೋದ ದೊಡ್ಡಮನಿ, ಉಣಕಲ್ ನಿವಾಸಿ

Share this article