ಸಿದ್ದು ಸರ್ಕಾರದಿಂದ ರಾಜ್ಯ ಆರ್ಥಿಕತೆ ದಿವಾಳಿ: ಬಿ.ಶ್ರೀರಾಮಲು

KannadaprabhaNewsNetwork | Published : Jul 2, 2025 12:25 AM
ಪೋಟೊ:1 ಜಿಎಲ್ಡಿ3ಗುಳೇದಗುಡ್ಡ ಪಟ್ಟಣಕ್ಕೆ ಆಗಮಿಸಿದ ಮಾಜಿ ಸಚಿವ ಬಿ.ಶ್ರೀರಾಮುಲು   ಮಾಡಿದರು.  | Kannada Prabha

ಸುಭಿಕ್ಷವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಆರ್ಥಿಕ ತಜ್ಞ ಎಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಮಣ್ಣುಪಾಲು ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸುಭಿಕ್ಷವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಆರ್ಥಿಕ ತಜ್ಞ ಎಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಮಣ್ಣುಪಾಲು ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರದಲ್ಲಿ ಕರ್ನಾಟಕವೇ ಅಗ್ರಗಣ್ಯ ಸ್ಥಾನ ಪಡೆದಿದೆ. ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕ ದಿವಾಳಿಯಾಗಲಿದೆ ಎಂಬ ಸತ್ಯವನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಮ್ಮ ಅಭಿಪ್ರಾಯ ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಣ ವಸೂಲಿ ಆಗಲಿ, ಆ ಮೇಲೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತೀವಿ ಎನ್ನುವ ಅಹಂಕಾರದ ಮಾತನ್ನು ಹೇಳುವ ಮೂಲಕ ರಾಜ್ಯದ ಆರ್ಥಿಕತೆ ಅಧಃಪತನದಲ್ಲಿರುವುದನ್ನು ಸ್ಪಷ್ಟಪಡಿಸಿದ್ದರು ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ಆಪ್ತ ಹಾಗೂ ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್‌ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳಿದ್ದರು. ಇವರ ಖಾತೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಕಾಂಗ್ರೆಸ್ ಸರ್ಕಾರವನ್ನು ಬೆತ್ತಲೆ ಮಾಡಿತು. ಇವರಿಗೆ ಸಾಥ್ ನೀಡುವಂತೆ ಅನುದಾನ ವಿಚಾರವಾಗಿ ಶಾಸಕ ರಾಜು ಕಾಗೆ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದು, ಒಂದು ಚರಂಡಿ ನಿರ್ಮಿಸಲು ಅನುದಾನ ಸಿಗುತ್ತಿಲ್ಲ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳುತ್ತಿರುವುದು ಸರ್ಕಾರ ಎಷ್ಟು ಆರ್ಥಿಕತೆ ಕೆಳಗೆ ಇಳಿದಿದೆ ಎಂಬುವುದನ್ನು ತೋರಿಸುತ್ತದೆ ಎಂದು ಹೇಳಿದರು.

ಗೃಹ ಸಚಿವ ಜಿ.ಪರಮೇಶ್ವರ್‌ ಅವರೇ ಸಿದ್ದರಾಮಯ್ಯನವರ ಹತ್ತಿರ ಅಭಿವೃದ್ಧಿಗೆ ದುಡ್ಡು ಇಲ್ಲ ಎಂದು ಹೇಳುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಹಣ ಇಲ್ಲ. ಕರ್ನಾಟಕ ರಾಜ್ಯದ ಬೊಕ್ಕಸ ಖಾಲಿ ಖಾಲಿಯಾಗಿರುವುದು ಸ್ಪಷ್ಟವಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕೋಟಿ ಕೋಟಿ ಹಣ ಸುರಿದು, ಅವೈಜ್ಞಾನಿಕ ಗ್ಯಾರಂಟಿಗಳು, ಬೃಹತ್ ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಂದಾ ದರ್ಬಾರ್ ರಾಜ್ಯದ ಜನರಿಗೆ ಶಾಪವಾಗಿದೆ ಎಂದು ಟೀಕಿಸಿದರು.

ನಂತರ ಮರಡಿ ಮಠದಲ್ಲಿನ ಅಮ್ಮನವರು ನಿಧನರಾದ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ಮುಖಂಡರಾದ ಕಮಲಕಿಶೋರ ಮಾಲಪಾಣಿ, ಮಧುಸೂಧನ ರಾಂಡದ, ಭುವನೇಶ ಪೂಜಾರ, ಬಾಲಕೃಷ್ಣ ನಿರಂಜನ, ಶಿವು ಗೋತಗಿ, ಮಹೇಶ ಸೂಳಿಭಾವಿ, ಪ್ರಕಾಶ ರೋಜಿ, ಶಿವು ತುಪ್ಪದ, ತಿಮಣ್ಣ ಬಂಡಿವಡ್ಡರ, ಪ್ರಭು ಕಳ್ಳಿಗುಡ್ಡ, ಪ್ರವೀಣ ದೇವಗಿರಿಕರ, ಸುರೇಶ ಗೌಡರ, ರಮೇಶ ಗೌಡರ, ಕೃಷ್ಣಾ ಬೀಳಗಿ, ಸಾಗರ ಅಥಣಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.