ರಾಮನಗರ: ಎಸ್ಸಿ- ಎಸ್ಟಿ, ಒಬಿಸಿ, ಮೈನಾರಿಟಿಗೆಲ್ಲ ನಾನೇ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಾಢ್ಯ ಕೋಮುಗಳಿಗೆ ಹೆದರಿಕೊಂಡು ಕಾಂತರಾಜು ಆಯೋಗ ವರದಿ ಜಾರಿ ಮಾಡದೆ ಅವಿತು ಕುಳಿತಿದ್ದಾರೆ. ಅವರು ಯಾವ ಊರ ಚಾಂಪಿಯನ್ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪ್ರಶ್ನಿಸಿದರು.
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಾಗ ಸಿದ್ದರಾಮಯ್ಯ ಅವರಿಗೆ ಬಿಎಸ್ಪಿ ರಾಜಕೀಯ ಜೀವದಾನ ಮಾಡಿತು. ಆದರೀಗ ಅವರು ಎಸ್ಸಿಎಸ್ಟಿ, ಒಬಿಸಿ, ಅಲ್ಪಸಂಖ್ಯಾತರಿಗೆಲ್ಲ ನಾನೇ ಚಾಂಪಿಯನ್ ಎನ್ನುತ್ತಿದ್ದಾರೆ. ಸಿದ್ದರಾಮಯ್ಯಗೆ ಎಸ್ಸಿಎಸ್ಟಿ, ಒಬಿಸಿ, ಮೈನಾರಿಟಿ ವರ್ಗಗಳ ಮತಗಳು ಬೇಕೇ ವಿನಾಃ ಆ ವರ್ಗಗಳ ಅಭಿವೃದ್ಧಿಯಲ್ಲ. ಹೀಗಾಗಿಯೇ ಬಲಾಢ್ಯ ಕೋಮುಗಳಿಗೆ ಹೆದರಿ ಕಾಂತರಾಜು ವರದಿ ಜಾರಿ ಮಾಡುತ್ತಿಲ್ಲ. ಈ ಬಗ್ಗೆ ಎಸ್ಸಿ ಎಸ್ಟಿ ಶಾಸಕರು ಪ್ರಶ್ನಿಸುವ ಧೈರ್ಯ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.36 ಇಲಾಖೆಗಳಲ್ಲಿ ಒಬ್ಬನೇ ಒಬ್ಬ ಎಸ್ಸಿಎಸ್ಟಿಯವರಿಗೆ ಪ್ರಿನ್ಸಿಪಾಲ್ ಸೆಕ್ರೆಟರಿ ಹುದ್ದೆ ನೀಡಿಲ್ಲ. ಡಿಜಿಪಿ, ಐಜಿ, ಎಸ್ಪಿ, ಡಿಸಿಗಳಿಗೂ ಅವಕಾಶ ನೀಡಿಲ್ಲ. ಕಾಂಗ್ರೆಸ್ ಸರ್ಕಾರ 50 ಸಾವಿರ ಕೋಟಿ, ಜೆಡಿಎಸ್ ಮೈತ್ರಿ ಸರ್ಕಾರ 10 ಸಾವಿರ ಕೋಟಿ ಹಾಗೂ ಬಿಜೆಪಿ ಸ್ರಕಾರ 40 ಸಾವಿರ ಕೋಟಿ ರು. ಎಸ್ಸಿಪಿ - ಟಿಎಸ್ಪಿ ಅನುದಾನವನ್ನು ಶ್ರೀಮಂತರಿಗೆ ಉಪಯೋಗವಾಗುವ ಕಾರ್ಯಗಳಿಗೆ ಬಳಕೆ ಮಾಡಿದ್ದಾರೆ. ನಿಮಗೆಲ್ಲ ಎಸ್ಸಿ ಎಸ್ಟಿಯವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಒಳ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೇವಲ ನಾಟಕ ಆಡುತ್ತವೆಯೇ ಹೊರತು ಅದನ್ನು ಜಾರಿ ಮಾಡುವುದಿಲ್ಲ. ಯಾವ ಸಮಾಜದ ಕೈಯಲ್ಲಿ ರಾಜಕೀಯದ ಅಧಿಕಾರ ಇರುವುದಿಲ್ಲವೊ ಆ ಸಮಾಜ ಯಾವತ್ತೂ ಗಟ್ಟಿಯಾಗುವುದಿಲ್ಲ. ಅದು ಯಾವತ್ತೂ ಬೇಡುವ ಸಮಾಜವೇ ಆಗುತ್ತದೆ. ಆದ್ದರಿಂದ ಶೋಷಿತರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಮಾರಸಂದ್ರ ಮುನಿಯಪ್ಪ ಹೇಳಿದರು.ಶ್ರೀ ಶಿವಶರಣ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಇಕ್ಬಾಲ್ ಹುಸೇನ್, ಟ್ರಸ್ಟ್ ಅಧ್ಯಕ್ಷ ಎಂ.ನಾಗೇಶ್, ಬಿಡದಿ ಪುರಸಭೆ ಮಾಜಿ ಸದಸ್ಯ ರಮೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.