ದೊಡ್ಡಬಳ್ಳಾಪುರ: ರಾಜಧಾನಿಯ ಸೆರಗಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೈಗಾರಿಕಾಭಿವೃದ್ದಿ, ನಗರೀಕರಣ ಮತ್ತು ಕೃಷಿ, ನೇಕಾರಿಕೆಯ ಅಸ್ಥಿರತೆಯ ನಡುವೆ ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದೆ. ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಗ್ರಾಮಾಂತರ ಜಿಲ್ಲೆಗೆ ಅಗತ್ಯ ಮೂಲಸೌಕರ್ಯಗಳನ್ನು ಹೊಂದುವುದು ಸವಾಲಾಗಿದ್ದು, ಇಂದು ಮಂಡನೆಯಾಗಲಿರುವ 2025-26ನೇ ಸಾಲಿನ ಬಜೆಟ್‌ನಲ್ಲಿ ಮಹತ್ತರ ಯೋಜನೆಗಳನ್ನು ಎದುರು ನೋಡುತ್ತಿದೆ.
ಬೆಂಗಳೂರು ಕೇಂದ್ರಿತವಾಗಿದ್ದ ಜಿಲ್ಲಾಡಳಿತ, ಜಿಲ್ಲೆಯ ಭೌಗೋಳಿಕ ವ್ಯಾಪ್ತಿಗೆ ಸ್ಥಳಾಂತರಗೊಂಡು 8 ವರ್ಷಗಳಾಗುತ್ತಾ ಬಂದರೂ ಈವರೆಗೆ ಜಿಲ್ಲಾ ಕೇಂದ್ರ ಘೋಷಣೆ ಆಗಿಲ್ಲ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ನಡುವೆ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆಯೇ ಅನುಮೋದನೆ ನೀಡಿ, ಉದ್ಘಾಟನೆಯನ್ನೂ ಮಾಡಲಾಗಿತ್ತು. ಇದೀಗ ಜಿಲ್ಲಾಡಳಿತ ಕೇಂದ್ರದಿಂದ ಜಿಲ್ಲೆಯ ತಾಲೂಕುಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಸಮರ್ಪಕಗೊಳ್ಳಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಿಲ್ಲೆಯ ಸರ್ವಾಂಗೀಣ ಪ್ರಗತಿಯನ್ನು ಉತ್ತೇಜಿಸುತ್ತದೆ ಎಂಬ ಭರವಸೆಯಲ್ಲಿ ಜನರಿದ್ದಾರೆ.
ಜಿಲ್ಲೆಗೆ ಬೇಕು ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ:ಬೆಂ.ಗ್ರಾ. ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ. ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರವೂ ಇದೆ. ಈ ಬಾರಿಯ ಬಜೆಟ್‌ನಲ್ಲಿ ವೈದ್ಯಕೀಯ ಕಾಲೇಜು ಘೋಷಣೆ ನಿರೀಕ್ಷಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಯಾಗಬೇಕಿದೆ.
ಕುಡಿಯುವ ನೀರಿನ ಅಭಾವ ನೀಗಿಸಲು ಶಾಶ್ವತ ಯೋಜನೆಯೊಂದರ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ. ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ಕೆಲ ವರ್ಷಗಳೇ ಬೇಕಾಗಬಹುದು. ಈ ಮಧ್ಯೆ ನಾಯಂಡಹಳ್ಳಿ-ವೃಷಭಾವತಿ ವ್ಯಾಲಿಯಿಂದ ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕುಗಳ ಕೆರೆಗಳಿಗೆ ನೀರು ಹರಿಸುವ ಯೋಜನೆ ಪ್ರಸ್ತಾಪವಾಗಿದ್ದರೂ, ಕಾರ್ಯರೂಪಕ್ಕೆ ಬಂದಿಲ್ಲ. ಇದರ ಜಾರಿಗೆ ಬಜೆಟ್‌ನಲ್ಲಿ ವ್ಯವಸ್ಥಿತ ಯೋಜನೆ, ಅನುದಾನ ಅಗತ್ಯವಾಗಿದೆ.
ಧಾರ್ಮಿಕ, ಐತಿಹಾಸಿಕ, ಪರಿಸರ ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ. ಘಾಟಿ ಸುಬ್ರಹ್ಮಣ್ಯ, ದಕ್ಷಿಣ ಕಾಶಿ ಶಿವಗಂಗೆ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಮಾಕಳಿ ದುರ್ಗ ನಿಸರ್ಗ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ತಾಣ. ಗಂಗರ ಕಾಲದ ಐತಿಹಾಸಿಕ ಹಾಗೂ ಧಾರ್ಮಿಕ ತಾಣ ಹುಲುಕುಡಿ, ಮಣ್ಣೆ, ದೇವನಹಳ್ಳಿ ಕೋಟೆ ಇತ್ಯಾದಿಗಳನ್ನು ಒಳಗೊಂಡ ಗ್ರಾಮಾಂತರ ಜಿಲ್ಲಾ ಪ್ರವಾಸಿ ಹಬ್ ನಿರ್ಮಾಣಕ್ಕೆ ಯೋಜನೆ ಅಗತ್ಯವಿದೆ.
ಸಬ್ ಅರ್ಬನ್ ರೈಲು ಯೋಜನೆಯನ್ನು ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ವಿಸ್ತರಿಸಲಾಗಿದ್ದು, ರಾಜಾನುಕುಂಟೆವರೆಗೆ ಬಂದಿರುವ ಮಾರ್ಗವನ್ನು ದೊಡ್ಡಬಳ್ಳಾಪುರದವರೆಗೆ ವಿಸ್ತರಿಸುವ ಅಗತ್ಯವಿದೆ. ಅದೇ ರೀತಿ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಪಟ್ಟಣಗಳಿಗೆ ಮೆಮು ರೈಲು ಸಂಪರ್ಕ ನೀಡುವುದರಿಂದ ಕೈಗಾರಿಕಾಭಿವೃದ್ಧಿಗೆ ಪೂರಕವಾಗಲಿದೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಪ್ರಸ್ತಾವನೆ ಕಾರ್ಯಗತಗೊಳ್ಳುವ ಹಂತದಲ್ಲಿದ್ದು, ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ದೊರೆಯಬೇಕಿದೆ.
ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆ ಪಟ್ಟಣಗಳನ್ನು ಉಪನಗರಗಳಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಣೆಯಾಗಿದೆ. ಈ ನಗರಗಳನ್ನು ಸ್ಯಾಟಲೈಟ್ ಟೌನ್‌ಗಳಾಗಿ ಅಭಿವೃದ್ಧಿ ಪಡಿಸಿ, ಮೂಲಸೌಕರ್ಯಗಳನ್ನು ಹೆಚ್ಚಿಸಲು ವಿಶೇಷ ಅನುದಾನ ಮೀಸಲಿಡಬೇಕು.
ಕೋವಿಡ್ ನಂತರದ ಕಾಲಘಟ್ಟದಲ್ಲಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವ ನೇಕಾರರನ್ನು ಅಸಂಘಟಿತ ಕಾರ್ಮಿಕರಾಗಿ ಪರಿಗಣಿಸಬೇಕು. ಜಿಲ್ಲೆಯಲ್ಲಿ ಹೂವು, ತರಕಾರಿ ಬೆಳೆಗಾರ ರೈತರಿಗೆ ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿದ್ದಾರೆ.
ಉಳಿದಂತೆ ವಿಜಯಪುರ ತಾಲೂಕು ಘೊಷಣೆ, ಬೆಂಗಳೂರಿನಲ್ಲಿರುವ ಎಸ್ಪಿ ಕಚೇರಿ ಸ್ಥಳಾಂತರ, ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನ, ಸಾಸಲು ಹೋಬಳಿಯಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆ, ದೊಡ್ಡಬಳ್ಳಾಪುರ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ನಿವೇಶನ, ಬಿಬಿಎಂಪಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಳಾಂತರ, ಮಧುರೆ ಕೆರೆ ನಿಸರ್ಗಧಾಮ ಯೋಜನೆ, ಜಾಲಗೆರೆ-ಹುಲುಕುಡಿ-ಮಾಕಳಿ-ಘಾಟಿ ಸುಬ್ರಹ್ಮಣ್ಯ ವನ್ಯಜೀವಿ ತಾಣ ಘೋಷಣೆ ಸೇರಿದಂತೆ ಹಲವು ಯೋಜನೆಗಳ ಸಾಕಾರಕ್ಕೆ ಪುಷ್ಠಿ ಸಿಗಬೇಕು ಎಂಬುದು ಜನಾಗ್ರಹವಾಗಿದೆ.
ಫೋಟೋ-6ಕೆಡಿಬಿಪಿ1- ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ.
6ಕೆಡಿಬಿಪಿ2- ರಾಜ್ಯದ ಮೊದಲ ಜವಳಿ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದಿರುವ ದೊಡ್ಡಬಳ್ಳಾಪುರ ಜವಳಿ ಪಾರ್ಕ್.6ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ದುರ್ಗ ಪ್ರವಾಸಿ ತಾಣ.
6ಕೆಡಿಬಿಪಿ4- ವನ್ಯಜೀವಿ ತಾಣ ಹುಲುಕುಡಿ ಬೆಟ್ಟ.