ಕನ್ನಡಪ್ರಭ ವಾರ್ತೆ ಹಾವೇರಿಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಓಬಿಸಿ ಮೀಸಲಿಗೆ ಒತ್ತಾಯಿಸಿ ಸಮಾಜ ಬಾಂಧವರು, ವಕೀಲರಿಂದ ಡಿ. ೧೦ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಆದ್ದರಿಂದ ಜಿಲ್ಲೆಯ ಪ್ರತಿ ಹಳ್ಳಿಯಿಂದಲೂ ಸಮಾಜದವರು ಆಗಮಿಸಬೇಕು ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯಕ್ಕಾಗಿ ಪಂಚಮಸಾಲಿ ಸಮಾಜದಿಂದ ಏಳನೇ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ. ಸುಮಾರು ೫ ಸಾವಿರ ರೈತರಿಂದ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವ ಮೂಲಕ ಮುತ್ತಿಗೆ ಹಾಕಲಾಗುವುದು. ಸಮಾಜದ ಮೀಸಲಾತಿಗೆ ಆಗ್ರಹಿಸಿ ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಧಿಕಾರಾವಧಿಯಲ್ಲಿ ನಿರಂತರ ಹೋರಾಟ ಮಾಡಲಾಗಿದೆ. ಆದರೂ ಕೂಡ ಮೀಸಲಾತಿ ನೀಡದೆ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರಸ್ತುತ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಬಳಿಕ ಮುತ್ತಿಗೆ ಹಾಕಿದಾಗ ಕಾಲಾವಕಾಶ ಕೇಳಿದ್ದರು. ಕಾಲಾವಕಾಶ ನೀಡಿದರೂ ಕೂಡ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪಂಚಮಸಾಲಿಗಳ ಮತಗಳು ನಿರ್ಣಾಯಕವಾಗಿದ್ದವು. ಇವುಗಳನ್ನು ಪರಿಗಣಿಸದೆ, ಸೌಜನ್ಯಕ್ಕೂ ಕರೆದು ಮಾತನಾಡಿ ಭರವಸೆ ನೀಡಲಿಲ್ಲ ಎಂದು ಹೇಳಿದರು.ಅದಕ್ಕಾಗಿ ಬೆಳಗಾವಿಯ ಅಧಿವೇಶನದ ವೇಳೆ ವಕೀಲರಿಗೆ ಮುಂದಾಳತ್ವ ನೀಡಲಾಗುತ್ತಿದ್ದು, ೫ ಸಾವಿರ ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧ ಮುತ್ತಿಗೆ ಹಾಕುವ ತೀರ್ಮಾನ ಕೈಗೊಳ್ಳಲಾಗಿದೆ. ಡಿ. ೧೦ರಂದು ಲಕ್ಷಾಂತರ ಪಂಚಮಸಾಲಿ ಮುಖಂಡರು, ಕಾರ್ಯಕರ್ತರು, ವಕೀಲರ ಸಂಘದವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.ಸಮಾಜದ ಪ್ರಮುಖರಾದ ಬಸವರಾಜ ಹಾಲಪ್ಪನವರ, ನಿಂಗಪ್ಪ ಚಳಗೇರಿ, ಸಿದ್ದನಗೌಡ ಪಾಟೀಲ, ಶಿವಾನಂದ ಬಾಗೂರ, ಡಾ.ವೀರಾಪುರ, ಮಲ್ಲೇಶಪ್ಪ, ಪರಮೇಶ್ವರಪ್ಪ, ವೀರನಗೌಡ್ರ ಇತರರು ಉಪಸ್ಥಿತರಿದ್ದರು.