ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವ ಗಳಿಸಿದ ಕೀರ್ತಿ ಹಿಂದೂ ಧರ್ಮಕ್ಕಿದೆ. ಇಂದು ಪ್ರಪಂಚದಾದ್ಯಂತ ಹಿಂದೂ ಧರ್ಮದ ಆಚಾರ, ವಿಚಾರಗಳ ಬಗ್ಗೆ ಎಲ್ಲರಲ್ಲೂ ಆಸಕ್ತಿ ಮೂಡುತ್ತಿದೆ. ವಿದೇಶದವರೂ ಇಲ್ಲಿಗೆ ಆಗಮಿಸಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಂತಹ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದು ಹಿಂದೂ ಧರ್ಮದ ವೈಶಿಷ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಬೌದಿಕ್ ಪ್ರಮುಖ್ ಯಾದವಕೃಷ್ಣ ಹೇಳಿದ್ದಾರೆ.
- ಚಳ್ಳಕೆರೆಯ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖಂಡ ಯಾದವಕೃಷ್ಣ ಅಭಿಮತ
- - -ಕನ್ನಡಪ್ರಭ ವಾರ್ತೆ ಚಳ್ಳಕೆರೆ
ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವ ಗಳಿಸಿದ ಕೀರ್ತಿ ಹಿಂದೂ ಧರ್ಮಕ್ಕಿದೆ. ಇಂದು ಪ್ರಪಂಚದಾದ್ಯಂತ ಹಿಂದೂ ಧರ್ಮದ ಆಚಾರ, ವಿಚಾರಗಳ ಬಗ್ಗೆ ಎಲ್ಲರಲ್ಲೂ ಆಸಕ್ತಿ ಮೂಡುತ್ತಿದೆ. ವಿದೇಶದವರೂ ಇಲ್ಲಿಗೆ ಆಗಮಿಸಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಂತಹ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದು ಹಿಂದೂ ಧರ್ಮದ ವೈಶಿಷ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಬೌದಿಕ್ ಪ್ರಮುಖ್ ಯಾದವಕೃಷ್ಣ ಹೇಳಿದರು.ಶನಿವಾರ ಸಂಜೆ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ತಾನು ಹಿಂದೂ ಎಂಬ ಆತ್ಮವಿಶ್ವಾಸವನ್ನು ಗೌರವದಿಂದ ಪ್ರದರ್ಶಿಸಬೇಕಾಗಿದೆ ಎಂದರು.
ಹಲವಾರು ವರ್ಷಗಳಿಂದ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವಂತಹ ಕೃತ್ಯಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಹಿಂದೂ ಸಮಾಜ ಇಂದು ಅತ್ಯಂತ ವಿಶಾಲವಾಗಿ, ಸದೃಢವಾಗಿ ಬೆಳೆದಿದೆ. ತನ್ನ ವಿರುದ್ಧ ನಡೆಯುವ ಎಲ್ಲ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಶಕ್ತಿ ಸಾಮರ್ಥ್ಯ ಹಿಂದೂ ಸಮಾಜಕ್ಕಿದೆ. ಹಿಂದೂ ಸಮಾಜದ ಎಲ್ಲ ರೀತಿಯ ಕಾರ್ಯಚಟುವಟಿಕೆಗಳ ಬಗ್ಗೆ ಸಮಾಜದ ಎಲ್ಲ ವರ್ಗಗಳ ಬೆಂಬಲವಿದೆ ಎಂದರು.ಇಂದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತಾನು ಸಹ ಹಿಂದೂ ಧರ್ಮದವನು ಎಂದು ಹೇಳಿಕೊಳ್ಳುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ. ಇದಕ್ಕೆಲ್ಲಾ ಕಾರಣ, ಈ ನಾಡಿನ ಅನೇಕ ಹಿರಿಯರಾದ ಸ್ವಾಮಿ ವಿವೇಕಾನಂದ, ಸರ್ದಾರ್ ವಲ್ಲಭಭಾಯಿ ಪಟೇಲ್, ರಾಮಕೃಷ್ಣ ಪರಮಹಂಸ ಮುಂತಾದ ಮಹಾನೀಯರು ನಮಗೆ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಹೆಜ್ಜೆ ಇಡುತ್ತಿದ್ದೇವೆ. ಅವರ ಮಾರ್ಗದರ್ಶನ ನಮ್ಮ ಬದುಕನ್ನು ಪುನೀತಗೊಳಿಸುತ್ತಿದೆ. ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಸಮಾಜದ ಸಂಘಟನೆಗಾಗಿ ಸದೃಢರಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಶಾರದಾಶ್ರಮದ ಮಾತಾಜಿ ತ್ಯಾಗಮಯಿ, ಹಿಂದೂ ಧರ್ಮ ಸಮಾನತೆಯನ್ನು ಸಾರು ಧರ್ಮವಾಗಿದೆ. ಸಂಸ್ಕೃತಿ, ಸಂಸ್ಕಾರ, ಸಂವೇದನೆ, ಭ್ರಾತೃತ್ವ, ಗೌರವ, ಗೋಪೂಜೆ ಮುಂತಾದ ಧರ್ಮ ಪ್ರೇರಣೆಯಾಗುವ ಕಾರ್ಯಕ್ರಮಗಳು ಮಾತ್ರ ನಮ್ಮಲ್ಲಿ ನಡೆಯುತ್ತಿವೆ. ನೂರಾರು ವರ್ಷಗಳಿಂದ ನಾವೆಲ್ಲರೂ ಸಹೋದರ ಭಾವನೆಯಿಂದ ಎಲ್ಲರೊಂದಿಗೆ ಸೇರಿ ನಮ್ಮ ಬದುಕನ್ನು ಕಟ್ಟಿಕೊಂಡಿದ್ದೇವೆ. ಕಷ್ಟ-ಸುಖಗಳನ್ನು ಸಮಾನತೆಯಿಂದ ಕಾಣುತ್ತಿವೆ. ಎಲ್ಲರಲ್ಲೂ ಗೌರವ, ವಿಶ್ವಾಸ ಹುಟ್ಟುಹಾಕುವ ಹಿಂದೂ ಧರ್ಮದ ಬಗ್ಗೆ ನಮ್ಮೆಲ್ಲರಲ್ಲೂ ಗೌರವ ಭಾವನೆಇದೆ. ಈ ಭಾವನೆಗಳಿಗೆ ಚ್ಯುತಿಯಾಗದಂತೆ ಜಾಗ್ರತೆ ವಹಿಸಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗಶಿಕ್ಷಣ ಸಮಿತಿ ಅಧ್ಯಕ್ಷ, ಯೋಗಗುರು ಮನೋಹರ ಮಾತನಾಡಿ, ನಮ್ಮಲ್ಲಿ ಎಲ್ಲ ರೀತಿಯ ಸಂಪತ್ತು, ಅಭಿಮಾನವಿದ್ದರೂ ಅದನ್ನು ಸರಿಯಾದ ದಿಕ್ಕಿನಲ್ಲಿ ಸದುಪಯೋಗ ಮಾಡಿಕೊಳ್ಳುವ ವಿಚಾರದಲ್ಲಿ ನಾವು ಹಿನ್ನಡೆ ಅನುಭವಿಸುತ್ತಿದ್ದೇವೆ. ವಿಶಾಲವಾದ ಹಿಂದೂ ಧರ್ಮದ ಮರ್ಮವನ್ನು ಅರಿಯುವ ಕಾರ್ಯ ವ್ಯವಸ್ಥಿತವಾಗಿ ನಡೆದಿಲ್ಲ. ಕೇವಲ ಯಾವುದೋ ಒಂದು ಸಮುದಾಯಕ್ಕೆ ಈ ಧರ್ಮ ಸೀಮಿತವಾಗಿದೆ ಎಂಬ ತಪ್ಪುಭಾವನೆ ಈ ಧರ್ಮದ ಬೆಳವಳಿಗೆಗೆ ಸ್ವಲ್ಪಅಡಚಣೆಯಾಗಿದೆ. ಆದರೆ, ಇಂದಿನ ಕಾರ್ಯಕ್ರಮದಲ್ಲಿ ನಾವ್ಯಾರೂ ತಿಳಿದುಕೊಳ್ಳದ ಅನೇಕ ವಿಷಯದ ಬಗ್ಗೆ ಜಾಗೃತಿ ಮೂಡಿಸಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಸಲಾಯಿತು. ಪೂಜಾ ಕಾರ್ಯದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಮೀನಾಕ್ಷಮ್ಮ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಅನಂತರಾಮ್ ಗೌತಮ್, ಎಸ್.ಎಂ. ಗಂಗಾಧರ, ಡಾ. ಡಿ.ಎನ್. ಮಂಜುನಾಥ, ಕೆ.ಎಂ. ಯತೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಪಾಲಮ್ಮ, ಲಕ್ಷ್ಮೀ ಶ್ರೀವತ್ಸ, ಜಿ.ಕೃಷ್ಣಮೂರ್ತಿ, ಎಂ.ಎಸ್. ಸುಬ್ಬುರಾವ್, ಸಿ.ಎಸ್. ಗೋಪಿನಾಥ, ಎಂ.ಸತ್ಯನಾರಾಯಣ, ಎನ್.ವೈ. ಮುರುಳಿಕೃಷ್ಣ, ಸೀತಾಲಕ್ಷ್ಮೀ, ಜೆ.ಎಸ್.ಶ್ರೀನಾಥ, ಉಮೇಶ್, ಮಹಂತೇಶ್, ಕೃಷ್ಣಮೂರ್ತಿ, ಉಪ್ಪಾರಹಟ್ಟಿ ಈರಣ್ಣ, ಡಿ.ಜಿ.ಪ್ರಕಾಶ್, ಡಾ. ಎಂ.ವಿ. ಕೃಷ್ಣರಾಜ, ಪಿ.ಜಗದೀಶ್ ಮುಂತಾದವರು ಭಾಗವಹಿಸಿದ್ದರು.- - -
-೩೧ಸಿಎಲ್‌ಕೆ೪: ಚಳ್ಳಕೆರೆ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತಾಜಿ ತ್ಯಾಗಮಯಿ ಮಾತನಾಡಿದರು. -೩೧ಸಿಎಲ್‌ಕೆ೦೪: ಚಳ್ಳಕೆರೆ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅಪಾರ ಹಿಂದೂ ಭಕ್ತರು, ಅಭಿಮಾನಿಗಳು ಭಾಗವಹಿಸಿದ್ದರು.