ಕ್ರೀಡೆಯಲ್ಲಿ ಸೋಲು ಸ್ವೀಕರಿಸುವ ಗುಣ ಹಾಗೂ ಗೆಲುವಿನ ಹಿಂದೆ ಬೀಳುವಂತಹ ಗುಣ ಕ್ರೀಡಾಪಟುಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ರಾಜ್ಯ ಖೋಖೋ ಫೆಡರೇಷನ್ ಅಧ್ಯಕ್ಷ ನಾಗರಾಜು ವಿ. ಬೈರಿ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಕ್ರೀಡೆಯಲ್ಲಿ ಸೋಲು ಸ್ವೀಕರಿಸುವ ಗುಣ ಹಾಗೂ ಗೆಲುವಿನ ಹಿಂದೆ ಬೀಳುವಂತಹ ಗುಣ ಕ್ರೀಡಾಪಟುಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ರಾಜ್ಯ ಖೋಖೋ ಫೆಡರೇಷನ್ ಅಧ್ಯಕ್ಷ ನಾಗರಾಜು ವಿ. ಬೈರಿ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಖೋಖೋ ಇಂಡಿಯಾ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಡಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ರಾಷ್ಟ್ರೀಯ ಹಿರಿಯ ಪುರುಷ ಮತ್ತು ಮಹಿಳೆಯರ ಖೋಖೋ ಚಾಂಪಿಯನ್‌ಶಿಪ್ ಪಂದ್ಯಾವಳಿಯನ್ನು ಕ್ರೀಡಾಧ್ವಜ ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲಾ ಕ್ರೀಡಾಪಟುಗಳಿಗೂ ಪಂದ್ಯಾವಳಿಯಲ್ಲಿ ಗೆಲ್ಲಬೇಕು ಎಂಬ ಹಠ, ಗುರಿ ಇದ್ದೇ ಇರುತ್ತದೆ. ಆದರೆ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಕ್ರೀಡಾ ಸ್ಫೂರ್ತಿಯಿಂದ ಪ್ರತಿಯೊಬ್ಬರೂ ಆಟವಾಡಬೇಕು ಎಂದು ಸಲಹೆ ನೀಡಿದರು.ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಧೈರ್ಯವಾಗಿ ಆಡುತ್ತಿರುವುದೇ ಮೊದಲ ಗೆಲುವು ಎಂದು ಕ್ರೀಡಾಪಟುಗಳು ತಿಳಿದುಕೊಳ್ಳಬೇಕು. ನಂತರದ ಎಲ್ಲಾ ಫಲಿತಾಂಶಗಳನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಹಿರಿಯ ಖೋಖೋ ಚಾಂಪಿಯನ್‌ಶಿಪ್‌ನಲ್ಲಿ ಕ್ರೀಡಾಪಟುಗಳು ಉತ್ತಮವಾಗಿ ಆಡುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ ಹೆಚ್ಚು ಹೆಚ್ಚು ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕರ್ನಾಟಕಕ್ಕೆ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿ ನಡೆಸಲು ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ. ಅದರಲ್ಲೂ ಈ ರಾಷ್ಟ್ರಮಟ್ಟದ ಪಂದ್ಯಾವಳಿ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತೋಷ ತಂದಿದೆ. ತುಂಬಾ ಅಚ್ಚುಕಟ್ಟಾಗಿ ಪಂದ್ಯಾವಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
24 ರಾಜ್ಯಗಳಿಂದ ಹಿರಿಯ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದು, ಈ ಎಲ್ಲ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ತುಮಕೂರಿನ ಸಂಘಟನಾ ಸಮಿತಿಯವರು ವ್ಯವಸ್ಥೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖೋಖೋ ಇಂಡಿಯಾ ತುಮಕೂರು ಸಂಘಟನಾ ಸಮಿತಿ ಅಧ್ಯಕ್ಷ ಎನ್. ನರಸಿಂಹರಾಜು ಮಾತನಾಡಿ, ನಗರದಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ ಖೋಖೋ ಪಂದ್ಯಾವಳಿ ನಡೆಯುತ್ತಿದ್ದು, ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗೆಲ್ಲುವ ತಂಡಗಳು ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಯಾಗಲಿವೆ. ಭಾರತ ಖೋಖೋ ವಿಶ್ವಕಪ್‌ನಲ್ಲಿ ಗೆದ್ದು ಜಯದ ಪತಾಕೆ ಹಾರಿಸಲಿ ಎಂಬುದು ನನ್ನ ಆಶಯವಾಗಿದೆ ಎಂದರು.
ಇಡೀ ಭಾರತದ ಗ್ರಾಮೀಣ ಕ್ರೀಡಾಕೂಟದ ಅಪ್ರತಿಮ ಪಂದ್ಯಾವಳಿ ಇದಾಗಿದ್ದು, ದೇಶದ ವಿವಿಧ ರಾಜ್ಯಗಳಿಂದ 24 ಪುರುಷ ಹಾಗೂ 23 ಮಹಿಳಾ ತಂಡಗಳು ಪಾಲ್ಗೊಂಡಿವೆ ಎಂದು ಅವರು ತಿಳಿಸಿದರು.ದೆಹಲಿಯಿಂದ ಹಿಡಿದು ಪಾಂಡಿಚೇರಿ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ, ಗುಜರಾತ್, ಮಧ್ಯಪ್ರದೇಶ್, ಉತ್ತರ ಪ್ರದೇಶ ಸೇರಿದಂತೆ ದೇಶದ 24 ರಾಜ್ಯಗಳಿಂದ ಕ್ರೀಡಾಪಟುಗಳು ಕಲ್ಪತರುನಾಡಿಗೆ ಆಗಮಿಸಿದ್ದಾರೆ. ಅವರೆಲ್ಲರಿಗೂ ವಸತಿ, ಊಟದ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಕ್‌ಲೈನ್ ರವಿಕುಮಾರ್, ಸಂಘಟನಾ ಸಮಿತಿ ಕಾರ್ಯದರ್ಶಿ ಚಿನ್ನಮೂರ್ತಿ, ಶಿವಮೂರ್ತಿ, ಕಬಡ್ಡಿ ಅಸೋಸಿಯೇಷನ್‌ನ ಕೃಷ್ಣೇಗೌಡ, ಸುರೇಶ್ ಶರ್ಮ, ವಿನೋದ್‌ಕುಮಾರ್ ಸಿಂಗ್ ತರಬೇತುದಾರರಾದ ಪ್ರಭಾಕರ್, ಗುರುಪ್ರಸಾದ್, ಪ್ರದೀಪ್‌ಕುಮಾರ್, ಎಂ.ಹೆಚ್. ರಾಜು ಮತ್ತಿತರರು ಉಪಸ್ಥಿತರಿದ್ದರು.