ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧದವರೆಗೆ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ರಾಜ್ಯದಲ್ಲಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ಇದೇ ಅದಿವೇಶನದಲ್ಲೇ ಜಾರಿಗೊಳಿಸುವಂತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ದಾವಣಗೆರೆ ಜಿಲ್ಲೆಯಿಂದ ಸುಮಾರು 500ಕ್ಕೂ ಹೆಚ್ಚು ಕುರಿಗಾಹಿಗಳು, ಕುರುಬ ಸಮಾಜ ಬಾಂಧವರು ಭಾಗವಹಿಸುವರು. ಕುರಿಗಳನ್ನೇ ನೆಚ್ಚಿಕೊಂಡು ಬದುಕನ್ನು ಕಟ್ಟಿಕೊಂಡ ಕುರಿಗಾಹಿಗಳು ಆಹಾರಕ್ಕಾಗಿ, ಜೀವನಕ್ಕಾಗಿ ಊರೂರು ಅಲೆದಾಡುತ್ತಾ, ಕಾಡು, ಮೇಡು ಎನ್ನದೇ ಅಲೆಮಾರಿಗಳಾಗಿ ಜೀವಿಸುತ್ತಿದ್ದಾರೆ. ಮಳೆ, ಚಳಿ, ಬಿಸಿಲೆನ್ನದೇ ಊರೂರು ಅಲೆಯುವ ಕುರಿಗಾಹಿಗಳ ಮೇಲೆ ಹಲ್ಲೆ, ಅತ್ಯಾಚಾರ, ಹತ್ಯೆಗಳು, ಕುರಿಗಳ ಕಳವು ಅವ್ಯಾಹತವಾಗಿ ಹೆಚ್ಚುತ್ತಲೇ ಇದೆ ಎಂದು ಅವರು ಆಕ್ರೋಶ ಹೊರ ಹಾಕಿದರು.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಕೆರೂರು ಗ್ರಾಮದಲ್ಲಿ ಕುರಿಗಾಹಿಯೊಬ್ಬರ ಕತ್ತನ್ನು ಕತ್ತರಿಸಿ, ಭೀಕರವಾಗಿ ಕೊಲ್ಲಲಾಗಿದೆ. ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಮಾಡಲಾಗಿದೆ. ಕೊಪ್ಪಳದ ಬುಲ್ಡೋಟಾ ಕಂಪನಿ ನೌಕರರು ಕುರಿಗಾರರಿಗೆ ರಕ್ತ ಬರುವಂತೆ ಹೊಡೆದು, ಓಡಿಸಿದ್ದು ಹೀಗೆ ಸಾವಿರಾರು ಘಟನೆ ನಡೆಯುತ್ತಲೇ ಇದೆ ಎಂದರು.
ಸರ್ಕಾರ ಕುರಿಗಾರರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದರೆ, ಕುರಿಗಾಹಿಗಳಿಗೆ ಭದ್ರತೆ, ಆತ್ಮಸ್ಥೈರ್ಯ ಹೆಚ್ಚಾಗಬಹುದು. ಇದೇ ಕಾರಣಕ್ಕೆ ಕಾಯ್ದೆ ಜಾರಿಗೆ ಅನೇಕ ಮನವಿಗಳನ್ನು ಅರ್ಪಿಸಲಾಗಿದೆ. ಕಳೆದ ಅಧಿವೇಶನದಲ್ಲಿ ಬಜೆಟ್‌ನಲ್ಲಿ ಕುರಿಗಾರರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವ ಉಲ್ಲೇಖವಿತ್ತು. ಆದರೆ, ಕಾಯ್ದೆ ಜಾರಿಗೆ ಸರ್ಕಾರ ಯಾಕೆ ಮೀನ-ಮೇಷ ಎಣಿಸುತ್ತಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದರು.
ಮಹಾಸಭಾ ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಉಪಾಧ್ಯಕ್ಷರಾದ ಜಿ.ಷಣ್ಮುಖಪ್ಪ, ಸಲ್ಲಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಘನರಾಜ, ಅಣ್ಣಪ್ಪ ಕರಗಾರ್, ಮಲ್ಲಪ್ಪ ಬನ್ನಿ ಇತರರು ಇದ್ದರು.