ಮುಕ್ತಾಯ ಹಂತದಲ್ಲಿ ದೇಶದ ಎರಡನೇ ಅತೀ ಉದ್ದನೆಯ ಸಿಗಂದೂರು ಸೇತುವೆ: ಲಾಂಚ್ ನೌಕರರಿಗೆ ಅಭದ್ರತೆ !

KannadaprabhaNewsNetwork |  
Published : Feb 06, 2025, 12:17 AM ISTUpdated : Feb 06, 2025, 12:25 PM IST
4 ಬ್ಯಾಕೋಡ್‌ 01 ಸೇವೆಯಲ್ಲಿರುವ ಸಿಗಂದೂರು ಲಾಂಚ್. | Kannada Prabha

ಸಾರಾಂಶ

ದೇಶದ ಎರಡನೇ ಅತೀ ಉದ್ದನೆಯ ಸೇತುವೆ ಎಂದು ಹೆಗ್ಗಳಿಕೆಗೆ ಪಾತ್ರವಾದ ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು, ಸೇತುವೆ ಕಾಮಗಾರಿ ನಂತರ ಇಲ್ಲಿನ ಲಾಂಚ್ ನೌಕರರಿಗೆ ಮುಂದೇನು ಎಂಬ ಅಭದ್ರತೆ ಕಾಡುತ್ತಿದೆ.

ಪ್ರದೀಪ್ ಮಾವಿನ ಕೈ

 ಬ್ಯಾಕೋಡು : ದೇಶದ ಎರಡನೇ ಅತೀ ಉದ್ದನೆಯ ಸೇತುವೆ ಎಂದು ಹೆಗ್ಗಳಿಕೆಗೆ ಪಾತ್ರವಾದ ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು, ಸೇತುವೆ ಕಾಮಗಾರಿ ನಂತರ ಇಲ್ಲಿನ ಲಾಂಚ್ ನೌಕರರಿಗೆ ಮುಂದೇನು ಎಂಬ ಅಭದ್ರತೆ ಕಾಡುತ್ತಿದೆ.ಈಗ ಸೇವೆ ಒದಗಿಸುತ್ತಿರುವ ಲಾಂಚ್‌ಗಳನ್ನು ಬೇರೇಡೆ ಸಾಗಿಸಲಾಗುತ್ತಿದೆಯೇ ಇಲ್ಲ, ಲಾಂಚ್‌ಗಳನ್ನು ಬಳಸಿಕೊಂಡು ಪ್ರವಾಸೋದ್ಯಮದ ಹೊಸ ಆಯಾಮಗಳಿಗೆ ಆವಕಾಶ ಮಾಡಿಕೊಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ. 

ಅಂಬಾರಗೊಡ್ಲು - ಕಳಸವಳ್ಳಿ ಸೇತುವೆಯ ಕಾಮಗಾರಿ ಪೂರ್ಣಗೊಂಡ ಬಳಿಕ ಸದರಿ ಲಾಂಚ್‌ಗಳ ಸೇವೆಯು ಸ್ಥಗಿತಗೊಂಡರೆ ಲಾಂಚಿನಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಸಂಭವವಿದ್ದು, ಎಲ್ಲದಕ್ಕಿಂತ ಹೆಚ್ಚಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾದ ಲಾಂಚಿನ ಪ್ರಯಾಣವು ನಿಲ್ಲುವುದರಿಂದ ಸ್ಥಳೀಯ ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳಲಿದೆ.ಈ ಹಿನ್ನೆಲೆಯಲ್ಲಿ ಲಾಂಚುಗಳ ಸೇವೆಯನ್ನು ಉಳಿಸಿಕೊಳ್ಳುವ ಬಗ್ಗೆ ಪರ್ಯಾಯ ಆಲೋಚನೆಯನ್ನು ಸರ್ಕಾರ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಸೆಯಾಗಿದೆ.

ಈ ನಡುವೆ ದ್ವೀಪದಲ್ಲಿ ತುಮರಿ ಗ್ರಾಮ ಪಂಚಾಯ್ತಿಯಲ್ಲಿ ಈ ಹಿಂದೆ ಸೇವೆಯಲ್ಲಿದ್ದ ಬರುವೆ ದೋಣಿ ಮಾರ್ಗವು ಸ್ಥಗಿತಗೊಂಡಿದ್ದು, ಮುಪ್ಪಾನೆ ಮಾದರಿಯ ಲಾಂಚ್‌ ಸೇವೆ ಅಗತ್ಯವಿದ್ದು, ಗ್ರಾಮ ಪಂಚಾಯಿತಿಗೆ ಅತೀ ಸುಲಭದ ಹತ್ತಿರ ಸಂಪರ್ಕ ಸಾಧ್ಯವಾಗಲಿದೆ. ಲಾಂಚ್‌ಗಳನ್ನು ಈ ಮಾರ್ಗದಲ್ಲಿ ಬಳಸಲು ಯೋಜನೆ ರೂಪಿಸಬಹುದು ಎಂಬ ಅಭಿಪ್ರಾಯ ಇಲ್ಲಿಯ ಜನರದ್ದಾಗಿದೆ.

1964ರಿಂದ 1967 ರವರೆಗೆ ಶರಾವತಿ ನದಿಗೆ ಅಡ್ಡಲಾಗಿ ಎರಡನೇ ಅಣೆಕಟ್ಟಾಗಿ ಸಮುದ್ರ ಮಟ್ಟಕ್ಕಿಂತ 1819 ಆಡಿ ಎತ್ತರದಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಕರೂರು ಬಾರಂಗಿ ಹೋಬಳಿಯ ಹದಿನೈದು ಸಾವಿರಕ್ಕಿಂತ ಹೆಚ್ಚು ಸ್ಥಳೀಯ ಕುಟುಂಬಗಳನ್ನು ಜಿಲ್ಲೆಯ ವಿವಿಧೆಡೆಗೆ ಸ್ಥಳಾಂತರಿಸಲಾಯಿತು.

ದ್ವೀಪದಲ್ಲಿ ಮುಳುಗಡೆಗೊಂಡ ಕೂದರೂರು, ಚನ್ನಗೊಂಡ, ತುಮರಿ ಹಾಗೂ ಎಸ್‌ಎಸ್ ಬೋಗ್ ಗ್ರಾಮ ಪಂಚಾಯ್ತಿ ಜನರಿಗೆ ತಾಲೂಕು ಕೇಂದ್ರವಾದ ಸಾಗರವನ್ನು ತಲುಪಲು 1968ರಲ್ಲಿ ಮೊದಲ ಲಾಂಚ್‌ ಸೇವೆ ಆರಂಭಗೊಂಡಿತು. ಅಂದಿನಿಂದ ಇಂದಿನವರೆಗೆ ಸ್ಥಳೀಯರ ಸಂಖ್ಯೆ ಹೆಚ್ಚಳ ಮತ್ತು ಸಿಗಂದೂರು ಭಕ್ತರ ಸಂಖ್ಯೆ ಹೆಚ್ಚಳ, ಪ್ರವಾಸೋದ್ಯಮದ ಬೆಳವಣಿಗೆ ಹಿನ್ನೆಲೆಯಲ್ಲಿ ಲಾಂಚ್‌ಗಳ ಸಂಖ್ಯೆಯೂ ಹೆಚ್ಚಾಗಿ ಈಗ ಗರಿಷ್ಠ ನಾಲ್ಕು ಲಾಂಚ್‌ಗಳು ಸೇವೆ ನೀಡುತ್ತಿವೆ.

ಇಲ್ಲಿನ ಚನ್ನಗೊಂಡ ಗ್ರಾಮದಲ್ಲಿ ಈ ಹಿಂದೆ ಸಂಪರ್ಕ ಹೊಂದಿದ್ದ ಶಿಗ್ಗಲು - ಕೋಗಾರು ಮರ್ಗದಲ್ಲಿ ಪುನಃ ಲಾಂಚ್ ಸೇವೆ ಇಂದಿಗೂ ಅಗತ್ಯವಿದೆ. ಆದರೆ ಈ ಹಿಂದೆ ಲಾಂಚ್ ಸೇವೆ ನಿರ್ವಹಣೆಯಲ್ಲಿ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಧ್ಯೆ ನಿರ್ವಹಣೆಯ ಬಗ್ಗೆ ಸಮನ್ವಯ ಇರದ ಕಾರಣ ಈಗಾಗಲೇ ಒಂದು ಲಾಂಚ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಮಾರ್ಗದಲ್ಲಿ ಪುನಃ ಸೇವೆ ಆರಂಭಿಸಲು ಒಳನಾಡು ಇಲಾಖೆ ಮುಂದಾಗಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.

ಈಗಾಗಲೇ ಹಲ್ಕೆ -ಮುಪ್ಪಾನೆ ಲಾಂಚ್ ಮಾರ್ಗದಲ್ಲಿ ಒಂದು ಚಿಕ್ಕ ಲಾಂಚ್ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಪ್ರವಾಸಿಗರಿಗೆ ಜೋಗವನ್ನು ಅತೀ ತ್ವರಿತವಾಗಿ ತಲುಪಲು ಅನುಕೂಲವಾಗುವ ನಿಟ್ಟಿನಲ್ಲಿ ಇನ್ನೊಂದು ಲಾಂಚ್ ಸ್ಥಳಾಂತರ ಮಾಡುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂಬುದು ಜನಾಭಿಪ್ರಾಯವಾಗಿದೆ.

ದ್ವೀಪ ಭಾಗದ ದಿನನಿತ್ಯದ ಸಂಪರ್ಕ ಕೊಂಡಿಯಾಗಿರುವ ಲಾಂಚ್‌ಗಳನ್ನು ಅಗತ್ಯ ಇರುವ ಕಡೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ತೆಗೆದುಕೊಂಡು ಹೋಗಿ ಸೇವೆ ನೀಡಲಿ ಎಂಬುದು ಜನರ ಮನವಿಯಾಗಿದೆ. ದ್ವೀಪದ ಲಾಂಚ್‌ಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಬಗ್ಗೆ ಸಮಗ್ರ ಯೋಜನೆ ರೂಪಿಸಬೇಕು. ಮಡೆನೂರು ಡ್ಯಾಂ ಬೇಸಿಗೆಯಲ್ಲಿ ದರ್ಶನ ನೀಡುವ ಕಾರಣ ಲಾಂಚ್ ಮೂಲಕ ಸಂಪರ್ಕ ಕಲ್ಪಿಸಿ ಪ್ರವಾಸಿ ಕೇಂದ್ರವಾಗಿ ರೂಪಿಸಿ ಲಾಂಚ್ ಪ್ರಯಾಣ ಕುಷಿ ಕಳೆಯದ ಹಾಗೆ ನೋಡಿಕೊಳ್ಳಬೇಕು. ಭಾಗವಾಗಿ ಲಾಂಚ್ ಖಾಸಗೀಕರಣಕ್ಕೂ ಅವಕಾಶ ಮಾಡಬಹುದು.

- ಜಿ.ಟಿ.ಸತ್ಯನಾರಾಯಣ, ಕೆಡಿಪಿ ಸದಸ್ಯರು.

ಸೇತುವೆ ನಿರ್ಮಾಣ ನಂತರ ಲಾಂಚ್ ಬೇರೇಡೆ ಸ್ಥಳಾಂತರ ಬಗ್ಗೆ ಜಲ ಸಾರಿಗೆ ಇಲಾಖೆಯಲ್ಲಿ ಇನ್ನು ಚರ್ಚೆಯ ಹಂತದಲ್ಲಿದೆ. ಲಾಂಚ್ ಅಗತ್ಯ ಇರುವ ಕಡೆ ಬೇಡಿಕೆ ಬಂದರೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.

- ಧನೇಂದ್ರ ಕುಮಾರ್, ಕಡವು ನಿರೀಕ್ಷಕ ಸಾಗರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ