ಮಂಗಳೂರು: ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಕೈಗೆತ್ತಿಕೊಂಡಿರುವ ಮತಗಳ್ಳತನ ಹೋರಾಟಕ್ಕೆ ಬೆಂಬಲವಾಗಿ ದ.ಕ. ಜಿಲ್ಲೆಯಲ್ಲಿ ಬೃಹತ್ ಅಭಿಯಾನ ನಡೆಸಿ, ಕನಿಷ್ಠ 1.80 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ದ.ಕ.ದಲ್ಲೂ ಮತಗಳ್ಳತನ ನಮ್ಮ ಅರಿವಿಗೆ ಬಂದಿದೆ. ಕೆಲವೆಡೆ ಒಂದೇ ಮನೆ ನಂಬ್ರದಲ್ಲಿ ಹೊರ ಜಿಲ್ಲೆ- ರಾಜ್ಯಗಳ 30-35ರಷ್ಟು ಮತದಾರರ ನೋಂದಣಿ ಆಗಿದೆ. ಕೆಲವು ಅಂಗಡಿ ಡೋರ್ ನಂಬ್ರದಲ್ಲೂ ಇಂಥದ್ದು ನಡೆದಿರುವುದು ಗಮನಕ್ಕೆ ಬಂದಿದೆ ಎಂದ ಅವರು, ಶೀಘ್ರದಲ್ಲೇ ಈ ಕುರಿತು ದಾಖಲೆಯೊಂದಿಗೆ ಬಹಿರಂಗಪಡಿಸುತ್ತೇನೆ ಎಂದರು.ಸಾಮಾಜಿಕ ನ್ಯಾಯ ವಿರೋಧಿಗಳು: ರಾಜ್ಯದ ಜನರ ನೈಜ ಪರಿಸ್ಥಿತಿ ಅರಿತು ಅದಕ್ಕೆ ಪೂರಕವಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ನಡೆಯುತ್ತಿರುವ ಸಮೀಕ್ಷೆಯನ್ನು ಯಶಸ್ವಿಗೊಳಿಸುವುದು ಎಲ್ಲ ಜನಪ್ರತಿನಿಧಿಗಳ ಕರ್ತವ್ಯ. ಇದಕ್ಕೆ ವಿರೋಧ ಮಾಡುವವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ದ.ಕ.ದಲ್ಲಿ ಈಗಾಗಲೇ ಶೇ.80ರಷ್ಟು ಸಮೀಕ್ಷೆ ನಡೆದಿದೆ. ಜನರು ವಿರೋಧ ಮಾಡದೆ, ಕೇವಲ ರಾಜಕೀಯಕ್ಕಾಗಿ ವಿರೋಧ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ಭಾಸ್ಕರ್, ಪ್ರೇಮ್ ಬಳ್ಳಾಲ್‌ಬಾಗ್, ಮೀನಾ ಟೆಲ್ಲಿಸ್, ಚಂದ್ರಹಾಸ್, ಇಮ್ರಾನ್, ಗಣೇಶ್ ಇದ್ದರು.