ವಕೀಲರ ಸಂಘದಿಂದ ಸಹಿ ಸಂಗ್ರಹ ಅಭಿಯಾನ

KannadaprabhaNewsNetwork |  
Published : Jun 16, 2025, 02:00 AM IST
ಫೋಟೋ: ೧೩ಕೆಎಂಟಿ_ಜೆಯುಎನ್_ಕೆಪಿ೧ : ವಕೀಲರ ಸಂಘಟನೆಯಿಂದ ವಿವಿಧ ಬೇಡಿಕೆಗಳ ಮನವಿಯನ್ನು ಗ್ರೇಡ್ ೨ ತಹಸೀಲ್ದಾರ ಸತೀಶ ಗೌಡರಿಗೆ ಸಲ್ಲಿಸಲಾಯಿತು. . ಸಂಘದ ಅಧ್ಯಕ್ಷ ಎಸ್.ಆರ್.ಶಾನಭಾಗ, ಪ್ರಶಾಂತ ನಾಯ್ಕ, ಮಹೇಶ ಶಾನಭಾಗ, ಆರ್.ಜಿ. ನಾಯಕ, ಅಶೋಕ ನಾಯ್ಕ, ಮಮತಾ ನಾಯ್ಕ, ಮೀನಾಕ್ಷಿ ನಾಯ್ಕ, ವಿನಾಯಕ ಪಟಗಾರ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು.

ಕುಮಟಾ: ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಮಿತಿಯ ಕರೆಯ ಅನ್ವಯ ಅಖಿಲ ಭಾರತ ವಕೀಲರ ಒಕ್ಕೂಟದ ತಾಲೂಕು ಸಂಘಟನೆಯ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿ ತಮ್ಮ ೧೩ ಬೇಡಿಕೆಗಳ ಮನವಿಯನ್ನು ತಾಲೂಕಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಸಲ್ಲಿಸಲಾಯಿತು.

ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು. ವಕೀಲರ ಸಂರಕ್ಷಣೆ ಕಾಯ್ದೆ-೨೦೨೪ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕು. ಕಾನೂನು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುವ ಮತ್ತು ಅವರ ಭವಿಷ್ಯವನ್ನು ಅಭದ್ರತೆಯಲ್ಲಿಡುವ ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ ರದ್ದು ಪಡಿಸಬೇಕು. ಕಿರಿಯ ವಕೀಲರ ವೃತ್ತಿ ಆರಂಭದ ಬದುಕಿಗೆ ಪೂರಕವಾಗುವಂತೆ ೨ ವರ್ಷಗಳ ಕಾಲ ಮಾಸಿಕ ₹೧೦ ಸಾವಿರ ಸಹಾಯಧನ ನೀಡಬೇಕು. ರಾಜ್ಯದ ಎಲ್ಲ ತಾಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ₹೫ ಲಕ್ಷ ಅನುದಾನ ಮಂಜೂರು ಮಾಡಬೇಕು. ಜಿಲ್ಲಾ ವಕೀಲರ ಸಂಘಗಳಿಗೆ ₹೧೦ ಲಕ್ಷ ಅನುದಾನ ಮಂಜೂರು ಮಾಡಬೇಕು.

ರಾಜ್ಯ ಸರ್ಕಾರವು ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯ ಒದಗಿಸಬೇಕು. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡಮಿಗಳನ್ನು ಸ್ಥಾಪಿಸಬೇಕು. ರಾಜ್ಯದ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ರಾಜ್ಯದ ಎಲ್ಲ ನ್ಯಾಯಾಲಯಗಳ ಆವರಣದಲ್ಲಿ ವಕೀಲರಿಗೆ ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಕಂದಾಯ, ಎಸಿ, ಡಿಸಿ ನ್ಯಾಯಾಲಯಗಳ ಕಂದಾಯ ಪ್ರಕರಣಗಳಲ್ಲಿ ತೀರ್ಪುಗಳು ವಿಳಂಬವಾಗುತ್ತಿದೆ. ಹಾಗಾಗಿ ಕಂದಾಯ ಪ್ರಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಬೇಕು. ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು.ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಸ್ಥಾಪಿಸಬೇಕು. ಈಗಿರುವ ಅನುದಾನಿತ ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರಕಾರ ನಿಯಂತ್ರಣ ಮಾಡಬೇಕು. ರಾಜ್ಯ ವಕೀಲರ ಪರಿಷತ್ತಿನ ಕಚೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕು. ವಕೀಲರ ಸಂಘದ/ಪರಿಷತ್ತಿನ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.೩೩ರಷ್ಟು ಮೀಸಲಾತಿ ನೀಡಬೇಕು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾತಿನಿತ್ಯ ನೀಡಬೇಕು ಮುಂತಾದ ಬೇಡಿಕೆಯನ್ನು ಮನವಿಯಲ್ಲಿ ಮಂಡಿಸಲಾಗಿದೆ.

ಮನವಿಯನ್ನು ತಾಲೂಕು ಸೌಧದ ಗ್ರೇಡ್ ೨ ತಹಸೀಲ್ದಾರ ಸತೀಶ ಗೌಡ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಎಸ್.ಆರ್.ಶಾನಭಾಗ, ಪ್ರಶಾಂತ ನಾಯ್ಕ, ಮಹೇಶ ಶಾನಭಾಗ, ಆರ್.ಜಿ. ನಾಯಕ, ಅಶೋಕ ನಾಯ್ಕ, ಮಮತಾ ನಾಯ್ಕ, ಮೀನಾಕ್ಷಿ ನಾಯ್ಕ, ವಿನಾಯಕ ಪಟಗಾರ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ