ಹುಲಿಗಿ ಜಾತ್ರೆಯಲ್ಲಿ ಸರ್ಕಾರಿ ಶಾಲೆ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ

KannadaprabhaNewsNetwork | Published : May 22, 2025 11:55 PM
ರಾಜ್ಯದಲ್ಲಿ ಕಳೆದ ಬಿಜೆಪಿ ಸರ್ಕಾರ ಎನ್ಇಪಿ 2020ರ ಹೆಸರಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನೀಕರಣದ ಹೆಸರಿನಲ್ಲಿ ಮುಚ್ಚಲು ಆದೇಶಿಸಿತು. ಎಐಡಿಎಸ್ಒ ನಾಯಕತ್ವದಡಿ ರಾಜ್ಯದ ವಿದ್ಯಾರ್ಥಿಗಳೆಲ್ಲರೂ ಸೇರಿ 36 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿ, ಬೃಹತ್ ಆಂದೋಲನ ರೂಪಿಸಿತು. ಕೊನೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎನ್ಇಪಿ 2020 ರದ್ದುಪಡಿಸಿ, ಯಾವುದೇ ನೀತಿಗಳ ಹೆಸರಿಲ್ಲದೆ ಸರ್ಕಾರಿ ಶಾಲೆ, ಕಾಲೇಜು ಮತ್ತು ವಿವಿ ಮುಚ್ಚಲು ಮುಂದಾಗಿದೆ.
Follow Us

ಕೊಪ್ಪಳ:

ರಾಜ್ಯದಲ್ಲಿ ಆರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್ಒ ಪದಾಧಿಕಾರಿಗಳು ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ಬುಧವಾರ ಸಹಿ ಸಂಗ್ರಹಿಸಿದರು.

ಈ ವೇಳೆ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಹಯ್ಯಾಳಪ್ಪ ಮಾತನಾಡಿ, ರಾಜ್ಯದಲ್ಲಿ ಕಳೆದ ಬಿಜೆಪಿ ಸರ್ಕಾರ ಎನ್ಇಪಿ 2020ರ ಹೆಸರಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನೀಕರಣದ ಹೆಸರಿನಲ್ಲಿ ಮುಚ್ಚಲು ಆದೇಶಿಸಿತು. ಎಐಡಿಎಸ್ಒ ನಾಯಕತ್ವದಡಿ ರಾಜ್ಯದ ವಿದ್ಯಾರ್ಥಿಗಳೆಲ್ಲರೂ ಸೇರಿ 36 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿ, ಬೃಹತ್ ಆಂದೋಲನ ರೂಪಿಸಿತು. ಕೊನೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎನ್ಇಪಿ 2020 ರದ್ದುಪಡಿಸಿ, ಯಾವುದೇ ನೀತಿಗಳ ಹೆಸರಿಲ್ಲದೆ ಸರ್ಕಾರಿ ಶಾಲೆ, ಕಾಲೇಜು ಮತ್ತು ವಿವಿ ಮುಚ್ಚಲು ಮುಂದಾಗಿದೆ. ಇದರಿಂದ ಸರ್ಕಾರದ ಮೂಲ ಉದ್ದೇಶ, ಶಿಕ್ಷಣದ ಖಾಸಗೀಕರಣವೆಂಬುದು ಸ್ಪಷ್ಟವಾಗಿದೆ. ಸರ್ಕಾರವು ವಿಭಿನ್ನ ಹೆಸರಿನ ಹಬ್ ಆ್ಯಂಡ್‌ ಸ್ಪೋಕ್ ಹೆಸರಿನಲ್ಲಿ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿದೆ ಎಂದು ದೂರಿದರು.

ರಾಜ್ಯದಲ್ಲಿ 23,436 ಕಿರಿಯ ಪ್ರಾಥಮಿಕ ಶಾಲೆ, 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 6 ಸಾವಿರ ಶಾಲೆ, 7,821 ಏಕೋಪಾಧ್ಯಾಯ ಶಾಲೆ, 3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯ ವ್ಯವಸ್ಥೆ ಇಲ್ಲ. ಹಲವು ಶಾಲೆಗಳ ಕಟ್ಟಡಗಳು ದುರಸ್ತಿ ಇಲ್ಲದೆ ಚಾವಣಿ ಸೋರುತ್ತಿದೆ. ರಾಜ್ಯ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಯಾವ ಗಂಭೀರ ಸಮಸ್ಯೆಯನ್ನೂ ಪರಿಹರಿಸದೇ, ಕಡಿಮೆ ದಾಖಲಾತಿ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದು ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣ ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದರು.

ಎಐಡಿಎಸ್ಒ ಸಂಘಟನೆ ರಾಜ್ಯಾದಾದ್ಯಂತ ಹಮ್ಮಿಕೊಂಡಿರುವ 50 ಲಕ್ಷ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಕೊಪ್ಪಳದ ಹುಲಿಗಿಯಲ್ಲಿ ಸಹಿ ಸಂಗ್ರಹಿಸಲಾಯಿತು.

ಕಾರ್ಯಕರ್ತರಾದ ಸದಾಶಿವ, ದಿಲೀಪ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.