ಶಿರಸಿ: ಜಿಲ್ಲೆಯ ಅಡಕೆ ತೋಟಕ್ಕೆ ಹಂಚಿಕೆ ಮಾಡಲಾದ ಬೆಟ್ಟ ಭೂಮಿಯ ಪಹಣಿಯಲ್ಲಿ ಬ ಖರಾಬ್ ಆಗಿ ಶಿರಸಿ ಉಪ ವಿಭಾಗದ ವ್ಯಾಪ್ತಿಯಲ್ಲಿ ನಮೂದಿಸಿರುವುದನ್ನು ಕೈಬಿಟ್ಟು ಬೆಟ್ಟಭೂಮಿಯ ಪಹಣಿಯಲ್ಲಿ ಪೂರ್ತಿ ಕ್ಷೇತ್ರವನ್ನು ಯಥಾವತ್ತಾಗಿ ದಾಖಲಿಸಲು ಸಹಿ ಸಂಗ್ರಹ ಅಭಿಯಾನ ನಡೆಸಿ, ಶಾಸಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಸಂಚಾಲಕ ಎಸ್.ಕೆ. ಭಾಗ್ವತ್ ಶಿರ್ಸಿಮಕ್ಕಿ ಹೇಳಿದರು.
ಸೊಪ್ಪಿನ ಬೆಟ್ಟವನ್ನು 2012ರ ವರೆಗೂ ಅ ಖರಾಬ್ ಎಂದಾಗಲೀ, ಬ ಖರಾಬ್ ಎಂದು ಪರಿಗಣಿಸಿರಲಿಲ್ಲ. ಆದರೆ, ಒಮ್ಮೆಲೇ ಶಿರಸಿ ಉಪ ವಿಭಾಗದ ಎಲ್ಲ ಸೊಪ್ಪಿನ ಬೆಟ್ಟಗಳೂ ಬ ಖರಾಬ್ ವ್ಯಾಪ್ತಿಗೆ ಸೇರಿಸಲಾಗಿದೆ. ಬ ಖರಾಬ್ ಎಂದರೆ ಅದು ಸಾರ್ವಜನಿಕರ ಬಳಕೆಯ ಜಾಗ ಎಂದು ಉಲ್ಲೇಖವಾಗುತ್ತದೆ. ಆದರೆ, ಬ್ರಿಟಿಷ್ ಸರ್ಕಾರದ ಅವಧಿಯಲ್ಲೇ 1923ರಲ್ಲಿ ರೈತರಿಗೆ 1 ಎಕರೆ ಕೃಷಿ ಭೂಮಿಗೆ 9 ಎಕರೆಯಂತೆ ಸೊಪ್ಪಿನ ಬೆಟ್ಟ ಭೂಮಿಯನ್ನು ಕೆನರಾ ಪ್ರಿವಿಲೇಜ್ ಆಕ್ಟ್ ಮೂಲಕ ನೀಡಲಾಗಿದೆ. ಆದರೆ, ಅಧಿಕಾರಿಗಳು ಆಕಾರ್ ಬಂದ್ ಸರಿಪಡಿಸುವ ವೇಳೆ ದೋಷ ಮಾಡಿದ್ದು, ಉಪವಿಭಾಗದ ಸಂಪೂರ್ಣ ಬೆಟ್ಟಗಳು ಬ ಖರಾಬ್ ಪಟ್ಟಿಗೆ ಸೇರ್ಪಡೆಗೊಂಡಿದೆ. ಸೊಪ್ಪಿನ ಬೆಟ್ಟ ಎಂದಿದ್ದರೂ ರೈತರ ಆಸ್ತಿ. ಆಯಾ ಬೆಟ್ಟ ಭೂಮಿಯನ್ನು ಹಿಂದಿನಿಂದಲೂ ಬಳಕೆ ಮಾಡಿಕೊಂಡು ಬಂದಿರುವ ರೈತರಿಗೆ ವಂಚನೆ ಆಗದಂತೆ ನೋಡಿಕೊಳ್ಳಬೇಕು ಎಂದು ಹಲವು ವರ್ಷಗಳ ಹಿಂದೆಯೇ ಜನಪ್ರತಿನಿಧಿಗಳಿಗೆ, ಉಪ ವಿಭಾಗಾಧಿಕಾರಿಗೆ ಮನವಿ ನೀಡಿದ್ದೆವು. ಆದಾಗ್ಯೂ ಇದುವರೆಗೂ ಯಾವುದೇ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ಈಗ ಮತ್ತೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದೇವೆ ಎಂದರು.
ಆರ್.ವಿ. ದೇಶಪಾಂಡೆ ಯತ್ನದಿಂದಾಗಿ ಸೊಪ್ಪಿನ ಬೆಟ್ಟದಲ್ಲಿ ಹಣ್ಣು ಅಥವಾ ಇನ್ನಿತರ ಬೆಳೆ ಬೆಳೆದರೆ ಅದರ ಆದಾಯದಲ್ಲಿ ಶೇ. 75ರಷ್ಟನ್ನು ರೈತರಿಗೆ ನೀಡುವ ಬಗ್ಗೆಯೇ ಸೌಲಭ್ಯ ಜಾರಿಗೊಳಿಸಲಾಗಿತ್ತು. ಆದರೆ, ಜಿಲ್ಲೆಯ ರೈತರು ಈ ಯೋಜನೆಯ ಲಾಭವನ್ನು ನಿರೀಕ್ಷಿತ ಪ್ರಮಾಣದಲ್ಲಿ ಪಡೆದಿಲ್ಲ. ಹೀಗಾಗಿ, ಸೊಪ್ಪಿನ ಬೆಟ್ಟಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು. ಸೊಪ್ಪಿನ ಬೆಟ್ಟಗಳ ಮೂಲಕ ರೈತರು ಆದಾಯವನ್ನು ಇನ್ನಷ್ಟು ಹೇಗೆ ಜಾಸ್ತಿಗೊಳಿಸಿಕೊಳ್ಳಬಹುದು ಎಂಬ ಬಗ್ಗೆಯೂ ಅಧ್ಯಯನವಾಗಬೇಕು ಎಂಬ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗೆ ಆಗ್ರಹಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ವಕೀಲ ಭರತ ಹೆಗಡೆ ಕೆಂಚಗದ್ದೆ, ಎಂ.ಎನ್. ಹೆಗಡೆ ಬಳಗಂಡಿ, ವಿಶ್ವನಾಥ ಹೆಗಡೆ ಪುಟ್ಟನಮನೆ, ದಿವಾಕರ ಹೆಗಡೆ ತೊಣ್ಣೆಮನೆ, ಸಂತೋಷ ಗೌಡರ, ನಾಗೇಶ ಹೆಗಡೆ ಕೆಂಚಗದ್ದೆ ಮತ್ತಿತರರು ಇದ್ದರು.