ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ ಮೂಕಮಾಟಿ: ಪ್ರೊ.ಬಿ.ಪಿ. ನ್ಯಾಮಗೌಡ

KannadaprabhaNewsNetwork | Published : Apr 28, 2025 11:48 PM

ಸಾರಾಂಶ

ಮಹಾಕಾವ್ಯ ಮೂಕಮಾಟಿ ಇಪ್ಪತ್ತನೆಯ ಶತಮಾನದ ಕಡೆಯ ದಶಕಗಳಲ್ಲಿ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ ಮಹತ್ವದ ಕಾವ್ಯ. ಇದರ ಕೇಂದ್ರಬಿಂದು ಮತ್ತು ಕೇಂದ್ರಪ್ರಜ್ಞೆ ಮಣ್ಣು. ಉತ್ಕೃಷ್ಟ ಭೂಮಿಗೀತವೂ ಆಗಿರುವ ಈ ಮೂಕಮಾಟಿ ಮಣ್ಣಿನ ಇತಿಹಾಸ, ಮಣ್ಣಿನ ಮೌನ ಸ್ಪಂದನ ಎಂದು ಪ್ರೊ.ಬಿ.ಪಿ. ನ್ಯಾಮಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟಿ

ಮಹಾಕಾವ್ಯ ಮೂಕಮಾಟಿ ಇಪ್ಪತ್ತನೆಯ ಶತಮಾನದ ಕಡೆಯ ದಶಕಗಳಲ್ಲಿ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ ಮಹತ್ವದ ಕಾವ್ಯ. ಇದರ ಕೇಂದ್ರಬಿಂದು ಮತ್ತು ಕೇಂದ್ರಪ್ರಜ್ಞೆ ಮಣ್ಣು. ಉತ್ಕೃಷ್ಟ ಭೂಮಿಗೀತವೂ ಆಗಿರುವ ಈ ಮೂಕಮಾಟಿ ಮಣ್ಣಿನ ಇತಿಹಾಸ, ಮಣ್ಣಿನ ಮೌನ ಸ್ಪಂದನ ಎಂದು ಪ್ರೊ.ಬಿ.ಪಿ. ನ್ಯಾಮಗೌಡ ಹೇಳಿದರು.

ಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ಚರಂತಿಮಠ ಬಾಗಲಕೋಟೆ ಇವರ ಸಹಯೋಗದಲ್ಲಿ ತಿಂಗಳ ವಿಶೇಷ ಉಪನ್ಯಾಸ ಮಾಲಿಕೆ ಐದರಲ್ಲಿ ವಿಶೇಷ ಉಪನ್ಯಾಸಕರಾಗಿ ಜಮಖಂಡಿಯ ಹಿರಿಯ ಸಾಹಿತಿ, ಮೂಕಮಾಟಿ ಮಹಾಕಾವ್ಯದ ಕನ್ನಡ ಅನುವಾದಕರೂ ಆದ ಪ್ರೊ.ಬಿ.ಪಿ.ನ್ಯಾಮಗೌಡರು ಆಚಾರ್ಯ ವಿದ್ಯಾ ಸಾಗರಜೀ ವಿರಚಿತ ಮೂಕಮಾಟಿ ಕಾವ್ಯಾವಲೋಕನ ಕುರಿತು ಉಪನ್ಯಾಸ ನೀಡಿದರು.

ಮೂಕಮಾಟಿ ಮಹಾಕಾವ್ಯದ ಕವಿ ಒಬ್ಬ ಯೋಗಿಯಾದರೂ ಅವರು ರಸತಪಸ್ವಿ, ಭಾವಲೋಕವಿಹಾರಿ. ಇದೊಂದು ವರ್ಣನಾ ಪ್ರಧಾನ ಕಾವ್ಯ. ಪ್ರಕೃತಿಯೇ ಮುಖ್ಯ ಪಾತ್ರಗಾರ. ಅನುಭವವನ್ನು ಅನುಭಾವವಾಗಿಸಿರುವುದು ಮೂಕಮಾಟಿ ಮಹಾಕಾವ್ಯದ ದೊಡ್ಡ ಸಾಧನೆ. ಕವಿ ಆ. ವಿದ್ಯಾಸಾಗರರಿಗೆ ಭಾಷೆಯೊಡನೆ ಸರಸವಾಡುವುದೆಂದರೆ ಹರ್ಷ... ಭಾಷೆಯ ಲಯ, ಲಾಸ್ಯ ವಿಲಾಸವನ್ನು ಸೂರೆ ಮಾಡುತ್ತ, ಸೊಗಸಾದ ಕಲ್ಪನೆಗಳ ಸೋನೆಮಳೆಗರೆಯುತ್ತ ಹೃದ್ಯವಾದ ಕಾಮನಬಿಲ್ಲನ್ನು ಸೃಷ್ಟಿಸುತ್ತ ಮೂಕಮಾಟಿ ಒಂದು ಮಹೋನ್ನತ ಕಾವ್ಯದ ಹಿತಾನುಭವ ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆ ಮೇಲೆ ಎ.ಎಸ್. ಪಾವಟಿ ಹಾಗೂ ಎಸ್.ಆರ್. ಮನಹಳ್ಳಿ ವೇದಿಕೆ ಮೇಲಿದ್ದರು. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಪ್ರಭುಸ್ವಾಮಿಗಳಿಗೆ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ವತಿಯಿಂದ ಭಕ್ತಪೂರ್ವಕ ಗೌರವ ಸನ್ಮಾನ ಮಾಡಲಾಯಿತು.

ಡಾ. ಸಿದ್ದರಾಮಯ್ಯ ಮಠಪತಿ ಅವರ ಪ್ರಾರ್ಥನೆ ಎಲ್ಲರ ಗಮನ ಸೇಳೆಯಿತು. ಬಸವರಾಜ ಭಗವತಿ, ಡಾ.ಜಗನ್ನಾಥ ಚವ್ಹಾಣ, ಡಾ.ಎಸ್.ಡಿ. ಕೆಂಗಲಗುತ್ತಿ, ಪ್ರೊ. ಕಿತ್ತೂರ ಸೇರಿದಂತೆ ಬಾಗಲಕೋಟೆ ಜೈನ ಸಮಾಜದ ಎಲ್ಲ ಗುರುಹಿರಿಯರು ಅಕ್ಕನ ಬಳಗದ ಮಾತೆಯರು ಭಾಗವಹಿಸಿದ್ದರು.ಡಾ.ಎಂ.ನಂಜುಂಡಸ್ವಾಮಿ ಸ್ವಾಗತಿಸಿದರು. ಡಾ.ಬಸವರಾಜ ಖೋತ ಪರಿಚಯಿಸಿದರು. ನಂದಿನಿ ದೊಡಮನಿ ವಂದಿಸಿದರು, ಡಾ.ಐ.ಕೆ.ಮಠದ ನಿರೂಪಿಸಿದರು.ಮೂಕಮಾಟೆಯಲ್ಲಿ ಮಣ್ಣಿನ ಮೂಲಕ ಮುಕ್ತಿ ಕಾಣುವ ಬಗೆಯನ್ನು ವಿದ್ಯಾ ಸಾಗರಜೀ ನಿರೂಪಿಸಿದ್ದಾರೆ. ಇಳೆ, ಮಣ್ಣು, ಕುಂಭ, ಕುಂಭಕಾರ, ನೀರು, ಹಗ್ಗ, ಮೀನು, ಗಿಡ-ಮರ, ಪಕ್ಷಿ, ಕಲ್ಲು, ಪಂಚಭೂತಗಳು ಎಲ್ಲವೂ ಇಲ್ಲಿ ವಸ್ತುವಾಗಿವೆ. ಇವುಗಳ ಅರ್ಥ ವಲಯ ನೆಲದಗಲ, ಜಗದಗಲ, ಮುಗಿಲಗಲ ವ್ಯಾಪ್ತಿಗೊಳ್ಳುವ ಪರಿ ಪರಿಭಾವನೀಯ. ಇಂದ್ರೀಯ ಗೋಚರ ಹಾಗೂ ಇಂದ್ರೀಯ ಗ್ರಾಹ್ಯ ವಸ್ತುಗಳನ್ನು ಶಾಬ್ದಿಕವಾಗಿ ಪರಿಚಯಿಸುವುದರೊಂದಿಗೆ ಅದೇ ಉಸಿರಿಗೆ ಅತೀಂದ್ರೀಯ ಎತ್ತರಗಳ ದಾಟಿಸುವ ಲಘಿಮಾ ಕೌಶಲ ಕವಿ ವಿದ್ಯಾಸಾಗರರಿಗೆ ಸಿದ್ಧಿಸಿದೆ.ಸಾನ್ನಿಧ್ಯ - ಡಾ.ಪ್ರಭುಸ್ವಾಮೀಜಿ ಚರಂತಿಮಠ

Share this article