ಪ್ರಾಣ ಕಳೆದುಕೊಂಡರ ಮನೆಯಲ್ಲಿ ಮೌನ!

KannadaprabhaNewsNetwork |  
Published : Jan 31, 2025, 12:47 AM IST

ಸಾರಾಂಶ

ಪ್ರಯಾಗರಾಜ್‌ನ ಮಹಾಕುಂಭಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಯಾತ್ರಾರ್ಥಿಗಳು ಗಂಗಾ, ಯಮುನಾ, ಸರಸ್ವತಿ ಸೇರುವ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ಹರಕೆ ಕೊನೆಗೂ ಈಡೇರಲಿಲ್ಲ. ಇನ್ನೇನು ಪುಣ್ಯಸ್ನಾನ ಮಾಡುವ ಗಳಿಗೆ ಬರುತ್ತದೆ ಎಂದುಕೊಂಡಿದ್ದವರಿಗೆ ಕ್ಷಣಾರ್ಧದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಉಸಿರು ನಿಲ್ಲಿಸಿದರು. ಅವರ ಜೀವನದ ಕೊನೆಯ ಹರಕೆ ಮೌನಿ ಅಮಾವಾಸ್ಯೆಯೊಂದಿಗೆ ಕಮರಿ ಹೋಯಿತು.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿಪ್ರಯಾಗರಾಜ್‌ನ ಕುಂಭಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಯಾತ್ರಾರ್ಥಿಗಳು ಗಂಗಾ, ಯಮುನಾ, ಸರಸ್ವತಿ ಸೇರುವ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ಹರಕೆ ಕೊನೆಗೂ ಈಡೇರಲಿಲ್ಲ. ಇನ್ನೇನು ಪುಣ್ಯಸ್ನಾನ ಮಾಡುವ ಗಳಿಗೆ ಬರುತ್ತದೆ ಎಂದುಕೊಂಡಿದ್ದವರಿಗೆ ಕ್ಷಣಾರ್ಧದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಉಸಿರು ನಿಲ್ಲಿಸಿದರು. ಅವರ ಜೀವನದ ಕೊನೆಯ ಹರಕೆ ಮೌನಿ ಅಮಾವಾಸ್ಯೆಯೊಂದಿಗೆ ಕಮರಿ ಹೋಯಿತು.

ಹೌದು, ಪ್ರಯಾಗರಾಜ್‌ ಕುಂಭಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರ ಜೀವನದಲ್ಲಿ ವಿಧಿ ತನ್ನ ಅಟ್ಟಹಾಸ ಮೆರೆದಿದೆ. 144 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳಕ್ಕೆ ತೆರಳಿದವರು ಶವವಾಗಿ ಮರಳಿದರು. ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಸ್ಥಳದಲ್ಲಿ ಪುಣ್ಯಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಅವರು ಕೂಡ ಪುಣ್ಯ ಪ್ರಾಪ್ತಿಗಾಗಿ ತೆರಳಿದ್ದರು. ಆದರೆ, ಅದೃಷ್ಟ ಕೈಗೂಡಲಿಲ್ಲ.

ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಸಾವಿಗೀಡಾಗಿರುವ ಬೆಳಗಾವಿ ನಗರದ ವಡಗಾವಿಯ ತಾಯಿ, ಮಗಳಾದ ಜ್ಯೋತಿ ಹತ್ತರವಾಠ್ (50), ಮೇಘಾ ಹತ್ತರವಾಠ್ (24) ಹಾಗೂ ಶೆಟ್ಟಿಗಲ್ಲಿ ನಿವಾಸಿ ಅರುಣ ಕೋಪರ್ಡೆ ಹಾಗೂ ಶಿವಾಜಿ ನಗರದ ಮಾಹಾದೇವಿ ಭವನೂರ (50) ಅವರ ಶವವಾಗಿ ಬಂದಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಈ ನಾಲ್ವರ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಸ್ಥರ ಮನೆಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಕಣ್ಣೀರು ಹಾಕುತ್ತಿದ್ದಾರೆ. ಬೆಳಗಾವಿ ಶಿವಾಜಿ ನಗರದ ಮಹಾದೇವಿ ಬಾವನೂರ ಅವರನ್ನು ನೆನೆದು ಪತಿ, ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಈ ಘಟನೆ ನಡೆಯುವ ಎರಡು ಗಂಟೆಗಳ ಮೊದಲೇ ತಮ್ಮ ಮನೆಯವರ ಜತೆಗೆ ವಿಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಜನರನ್ನು ತೋರಿಸಿದ್ದರು. ಜಾಸ್ತಿ ಜನ ಇದ್ದಾರೆ. ಜೋಪಾನವಾಗಿರುವಂತೆ ನಾವು ಸಲಹೆ ನೀಡಿದೆವು. ರಾತ್ರಿ 2 ಗಂಟೆಗೆ ಕಾಣೆಯಾದ ಮಾಹಿತಿ ಬಂತು. ಬಳಿಕ ಸಾವಿನ ಸುದ್ದಿಯೂ ಬಂತು ಎಂದು ಮಹಾದೇವಿ ಪತಿ ಹನುಮಂತ ಬಾವನೂರ ಪತ್ನಿಯನ್ನು ನೆನೆದು ಕಣ್ಣೀರು ಹಾಕಿದರು.

ತನ್ನ ಸ್ನೇಹಿತೆ ಜೊತೆಗೆ ಕುಂಭಮೇಳಕ್ಕೆ ತೆರಳಿದ ಪತ್ನಿ ಮಹಾದೇವಿ, ಮುಂದಿನ ವರ್ಷ ಇಬ್ಬರು ಮಕ್ಕಳಿಗೆ ಮದುವೆ ಮಾಡಲು ನಿರ್ಧರಿಸಿದ್ದೇವು. ಆದರೆ, ಈಗ ಆಕೆಯೇ ಇಲ್ಲವಾಗಿದೆ ಎಂದು ಹನುಮಂತ ಅವರು ಕಣ್ಣೀರು ಸುರಿಸಿದರು.

ಎಲ್ಲರೂ ಜೋಪಾನಾಗಿರುವಂತೆ ಹೇಳಿದ್ದ ಮೇಘಾ: ನಾವು ಪ್ರಯಾಗರಾಜ್‌ಕ್ಕೆ ಬಂದಿದ್ದೇವೆ. ಇಲ್ಲಿ ಬಹಳ ಜನ ಸೇರಿದ್ದಾರೆ. ಎಲ್ಲರೂ ಜೋಪಾನವಾಗಿ ಬರುವಂತೆ ಕಾಲ್ತುಳಿತಕ್ಕೂ ಮುನ್ನ ವಡಗಾವಿ ನಿವಾಸಿ ಮೇಘಾ ಹತ್ತರವಾಠ (24) ತನ್ನ ಕೊನೆಯ ಫೇಸ್ಬುಕ್‌ ಲೈವ್‌ನಲ್ಲಿ ರೀಲ್ಸ್‌ ಮಾಡುವ ಮೂಲಕ ಎಲ್ಲರಿಗೂ ಎಚ್ಚರಿಕೆ ಸಂದೇಶ ನೀಡಿದ್ದರು. ಈ ವಿಡಿಯೋ ಮಾಡಿದ ಕೆಲವೇ ನಿಮಿಷಗಳಲ್ಲಿ ಅವರು ಕಾಲ್ತುಳಿತಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಪ್ರಯಾಗರಾಜ್‌ನ ಕುಂಭಮೇಳಕ್ಕೆ ತೆರಳಿದ್ದ ಮೇಘಾ ತಮ್ಮ ಭೇಟಿಯ ಕ್ಷಣಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋದಲ್ಲಿ ಅವರೊಂದಿಗೆ ಇರುವ ಅರುಣ ಕೋಪರ್ಡೆ ಕೂಡ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಇವರು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದರು.

ಹಠ ಮಾಡಿ ಹೋಗಿದ್ದಳು: ಪ್ರಯಾಗರಾಜ್‌ ಕುಂಭಮೇಳ ಮತ್ತೊಮ್ಮೆ ಜೀವನದಲ್ಲಿ ಬರದು. ನಾನು ಅಲ್ಲಿಗೆ ಹೋಗಲೇಬೇಕು ಎಂದು ಹಠಮಾಡಿ ಮೇಘಾ ತಾಯಿ ಜ್ಯೋತಿ ಜತೆಗೆ ಪ್ರಯಾಗರಾಜ್‌ಕ್ಕೆ ತೆರಳಿದ್ದಳು. ಮಗಳಿಗೆ ಬರುವ ಮಾರ್ಚ್‌ನಲ್ಲಿ ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ಮಾತುಕತೆ ಕೂಡ ನಡೆದಿತ್ತು. ಆದರೆ, ಹಸೆಮಣೆ ಏರಬೇಕಿದ್ದವಳು ಶವವಾಗಿ ಬಂದಿದ್ದಾಳೆ ಎಂದು ಮೇಘಾ ತಂದೆ ದೀಪಕ ಹತ್ತರವಾಡ ಪುತ್ರಿ, ಪತ್ನಿಯನ್ನು ನೆನೆದು ಕಣ್ಣೀರು ಹಾಕಿದರು.

ಮನೆ ಮಂದಿಯೆಲ್ಲರೂ ಖುಷಿಯಿಂದಲೇ ಅವರನ್ನು ಮಹಾಕುಂಭಮೇಳಕ್ಕೆ ಬೀಳ್ಕೊಟ್ಟಿದ್ದೆವು. ಆದರೆ, ಈಗ ಶವವಾಗಿ ಬರುತ್ತಿದ್ದಾರೆ. ಮದುವೆ ಮಾಡಿಕೊಡಬೇಕಿದ್ದ ಮಗಳ ಅಂತ್ಯಕ್ರಿಯೆ ಮಾಡುವ ಸ್ಥಿತಿ ಯಾವ ತಂದೆ, ತಾಯಿಗೂ ಬರಬಾರದು ಎಂದು ದುಃಖಿತರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!