ಹೂವಿನಹಡಗಲಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಮೂಕ ಹಕ್ಕಿಗಳು

ಮಾತು ಬಾರದ, ಕಿವಿಯೂ ಕೇಳಿಸದ ವಧು-ವರರಿಬ್ಬರೂ ನವಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಮದುವೆ ಜರುಗಿದೆ.

KannadaprabhaNewsNetwork | Published : Apr 27, 2024 7:52 PM IST / Updated: Apr 28 2024, 01:08 PM IST

ಹೂವಿನಹಡಗಲಿ :  ಮದುವೆ ಯಾರ ಜತೆಗೆ ಆಗಬೇಕೆಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಹಿರಿಯ ಮಾತು ಶನಿವಾರ ತಾಲೂಕಿನ ಭೀತ್ಯಾನತಾಂಡದಲ್ಲಿ ನಡೆದ ಮದುವೆ ಸಾಬೀತು ಮಾಡಿತು!

ಹೌದು! ಮಾತು ಬಾರದ, ಕಿವಿಯೂ ಕೇಳಿಸದ ವಧು-ವರರಿಬ್ಬರೂ ನವಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಮದುವೆ ಜರುಗಿದೆ. ಭೀಮಾನಾಯ್ಕ ಮೀರಾಬಾಯಿ ಅವರ ಪುತ್ರಿ ನಿರ್ಮಲ (ಭಾರ್ಗವಿ) ಮತ್ತು ಮುಂಡರಗಿ ತಾಲೂಕಿನ ಸೇವಾನಗರದ ನಿವಾಸಿ ಲಕ್ಕವ್ವ ಶಂಕ್ರಪ್ಪ ಲಮಾಣಿ ಪುತ್ರ ಧನಸಿಂಗ್ ನಾಯ್ಕ ಅವರು ಪರಸ್ಪರ ಒಪ್ಪಿಗೆಯಿಂದ ಮದುವೆಯಾದರು.

ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ, ಬದುಕಿನಲ್ಲಿ ಛಲ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಈ ಮೂಗ ಜೋಡಿ ಹಕ್ಕಿಗಳೇ ಸಾಕ್ಷಿ. ಹುಟ್ಟು ಮೂಗ, ಕಿವುಡರಾಗಿರುವ ಈ ಜೋಡಿ ತಮಗಿರುವ ಅಂಗವೈಕಲ್ಯ ಮೀರಿ ಶಿಕ್ಷಣ ಪಡೆದಿದ್ದಾರೆ. ಆ ಮೂಲಕ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ.

ವಧು ನಿರ್ಮಲ ಮೈಸೂರಿನ ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಶಿಕ್ಷಣ ಪೂರೈಸಿ, ಮೈಸೂರು ತಾಲೂಕಿನ ಕಡಕೋಳದಲ್ಲಿರುವ ಟಿವಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇತ್ತ ವರ ಧನಸಿಂಗ್ ನಾಯ್ಕ ಬೆಂಗಳೂರು ಏರ್‌ಪೋರ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾತು ಬಾರದ ಈ ಜೋಡಿ ಮೌನವಾಗಿಯೇ ತಮ್ಮ ಬದುಕನ್ನು ತಮ್ಮದೇ ರೀತಿಯಲ್ಲಿ ರೂಪಿಸಿಕೊಂಡಿದ್ದಾರೆ. ಇವರಿಬ್ಬರ ಮಾಹಿತಿ ಸಂಗ್ರಹಿಸಿದ ಕುಟುಂಬದ ಹಿರಿಯರು, ಅಪರೂಪದ ಜೋಡಿಗೆ ಮದುವೆ ಬಂಧ ಏರ್ಪಡಿಸುವ ಮೂಲಕ ಸಾರ್ಥಕತೆ ಮರೆದಿದ್ದಾರೆ.

ನೂತನ ವಧು-ವರರನ್ನು ಅವರದೇ ಆದ ಸಂಜ್ಞೆಯ ಮೂಲಕ ಮಾತನಾಡಿಸಿದಾಗ, ಈ ಮದುವೆ ನಮಗೆ ಸಂತೋಷ, ಸಂಭ್ರಮ ಮನೆ ಮಾಡಿದೆ. ಭವಿಷ್ಯದ ಬದುಕು ಮತ್ತಷ್ಟು ಸುಂದರವಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ತಮ್ಮ ಭಾವನೆಯನ್ನು ನಗುಮುಖದೊಂದಿಗೆ ವ್ಯಕ್ತಪಡಿಸಿದರು.

ಇಂತಹ ಅಪರೂಪದ ಮದುವೆಗೆ ಸಾಕ್ಷಿಯಾದ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರು, ಅಪರೂಪದ ಜೋಡಿಯೊಂದಿಗೆ ಪೋಟೋ ತೆಗೆಯಿಸಿಕೊಳ್ಳುವ ಮೂಲಕ ನೂತನ ಜೋಡಿಗೆ ಶುಭ ಹಾರೈಸಿದರು.

ವಧುವಿನ ತಂದೆ ಭೀಮಾನಾಯ್ಕ ಮದುವೆ ಕುರಿತು ಮಾತನಾಡಿ, ಅಂಗವಿಕಲರನ್ನು ಯಾವ ಕಾರಣಕ್ಕೂ ಕೀಳಾಗಿ ಕಾಣಬಾರದು. ಅಂಗವಿಕಲ ಮಕ್ಕಳಿಗೆ ಪಾಲಕರು ಸೂಕ್ತ ಮಾರ್ಗದರ್ಶನ ನೀಡಿ, ಪ್ರೋತ್ಸಾಹ ನೀಡಿದರೆ ಅವರು ಏನನ್ನಾದರೂ ಸಾಧಿಸಬಲ್ಲರು ಎಂಬುದಕ್ಕೆ ನನ್ನ ಮಗಳು, ಅಳಿಯ ಸಾಕ್ಷಿ ಎಂದು ಸಂತಸ ಹಂಚಿಕೊಂಡರು.

Share this article