ಕನ್ನಡಪ್ರಭ ವಾರ್ತೆ ಮದ್ದೂರು
ವಿಶ್ವ ಹಿಂದೂ ಪರಿಷತ್ತು, ಹಿಂದೂ ಜಾಗರಣ ವೇದಿಕೆ, ಧರ್ಮ ಜಾಗರಣ ವೇದಿಕೆ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ನೂರಾರು ಹಿಂದೂ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಪಟ್ಟಣದ ಹಳೇಬಸ್ ನಿಲ್ದಾಣದ ಶ್ರೀಕಾಶಿ ವಿಶ್ವೇಶ್ವರ ಸ್ವಾಮಿ ದೇಗುಲದ ಬಳಿ ಕೆಲಕಾಲ ಮೌನಚರಣೆ ನಡೆಸಿದ ಕಾರ್ಯಕರ್ತರು ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಹತರಾದ ಹಿಂದೂಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ಪ್ರಮುಖ ಬೀದಿಗಳ ಮೂಲಕ ಸಂಜಯ ಚಿತ್ರಮಂದಿರದವರೆಗೆ ಮೇಣದ ಬತ್ತಿಗಳನ್ನು ಹಿಡಿದು ಮೆರವಣಿಗೆ ನಡೆಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭರತಭೂಷಣ್, ಮಧುಸೂದನ್ ಅವರುಗಳ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಹಿಂದೂಪರ ಸಂಘಟನೆಗಳ ಮುಖಂಡರು, ಹಿಂದುಗಳು ಜಾತಿ ವ್ಯವಸ್ಥೆ ಬಿಟ್ಟು ಜಾಗೃತರಾಗುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಕೇಂದ್ರ ಸರ್ಕಾರ ಇಂತಹ ಪೈಶಾಚಿಕ ಕೃತ್ಯಕ್ಕೆ ಕಾರಣರಾದ ಉಗ್ರರನ್ನು ಯಾವುದೇ ಕಾರಣಕ್ಕೂ ಬಿಡದೆ ಸದೆ ಬಡಿಯಲು ಮುಂದಾಗಬೇಕು ಎಂದು ಆಗ್ರಹ ಪಡಿಸಿದರು. ಇದೇ ವೇಳೆ ಸಿಪಿಐ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.