ಧಾರವಾಡ:
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಕೊಲೆ ಮಾಡಿದ ಹಂತಕ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಸೋಮವಾರ ಧಾರವಾಡದ ಅಂಜುಮನ್ ಇ-ಇಸ್ಲಾಂ ಸಂಸ್ಥೆಯಿಂದ ಅರ್ಧ ದಿನ ಮುಸ್ಲಿಂ ಬಂಧುಗಳು ವ್ಯಾಪಾರ-ವಹಿವಾಟು ಬಂದ್ ಮಾಡಿ ಮೌನ ಮೆರವಣಿಗೆ ನಡೆಸಿದರು.ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಘಟನೆ ಖಂಡಿಸಿದ ಮುಸ್ಲಿಂ ಬಂಧುಗಳು ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಮೌನ ಮೆರವಣಿಗೆ ನಡೆಸಿದರು. ನೇಹಾ ಭಾವಚಿತ್ರ ಸೇರಿದಂತೆ ಹೆಣ್ಣು ನಮ್ಮ ತಾಯಿ, ವಿದ್ಯಾರ್ಥಿನಿಯರು ನಮ್ಮ ಆಸ್ತಿ, ನೇಹಾ ಕೊಲೆಗೆ ನ್ಯಾಯ ದೊರಕಲಿ, ಆರೋಪಿಗೆ ಗಲ್ಲುಶಿಕ್ಷೆಯಾಗಲಿ ಎಂಬ ಫಲಕ ಹಿಡಿದು ಜಾಗೃತಿ ಮೂಡಿಸಿದರು. ವಿವೇಕಾನಂದ ವೃತ್ತ, ಆಜಾರ್ ಪಾರ್ಕ್, ಸ್ವಾಮಿ ವಿವೇಕಾನಂದ ವೃತ್ತ, ಕೋರ್ಟ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಬಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಸ್ವಯಂಪ್ರೇರಿತರಾಗಿ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ಮೌನ ಪ್ರತಿಭಟನೆಯಲ್ಲಿ ಭಾಗಿಯಾದರು.
ನೇಹಾ ಕೊಲೆಯಿಂದಾಗಿ ಇಡೀ ಮುಸ್ಲಿಂ ಸಮುದಾಯ ತಲೆತಗ್ಗಿಸಿದೆ. ಆರೋಪಿ ಫಯಾಜ್ ಮಾಡಿರುವ ಅಮಾನವೀಯ ಕೃತ್ಯವು ಸಮುದಾಯ ಹಾಗೂ ಧಾರವಾಡ ಜಿಲ್ಲೆಗೂ ಕಪ್ಪುಚುಕ್ಕೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗಬಾರದು ಹಾಗೂ ಇಂತಹ ಕೃತ್ಯಗಳನ್ನು ಮುಸ್ಲಿಂ ಸಮಾಜ ಸಹಿಸುವುದಿಲ್ಲ ಎಂಬ ಉದ್ದೇಶದಿಂದ ಈ ಮೆರವಣಿಗೆ ಮಾಡಲಾಗಿದೆ. ಸಮಾಜಕ್ಕೆ ಇದೊಂದು ಸಂದೇಶವು ಹೌದು ಎಂದು ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹೇಳಿದರು.ಇಸ್ಲಾಂ ಧರ್ಮವು ಪ್ರೀತಿ ಹಾಗೂ ಶಾಂತಿಯ ಸಂಕೇತ. ಇಲ್ಲಿಯ ಯಾವುದೇ ವ್ಯಕ್ತಿ ಹತ್ಯೆಗೆ ಅವಕಾಶವಿಲ್ಲ. ಇಷ್ಟಾಗಿಯೂ ಇತ್ತೀಚೆಗೆ ಇಂತಹ ಕೃತ್ಯಗಳು ನಡೆಯುತ್ತಿರುವುದು ನಮಗೂ ಬೇಸರ ಮೂಡಿಸಿದೆ. ಇದರೊಂದಿಗೆ ಪ್ರತಿ ಶುಕ್ರವಾರದ ಪ್ರಾರ್ಥನೆ ವೇಳೆ ಮಸೀದಿಯಲ್ಲಿ ಮೌಲ್ವಿಗಳಿಂದ ಶಾಂತಿ ಹಾಗೂ ಸೌಹಾರ್ದತೆಯಿಂದ ಬಾಳಲು ಸಂದೇಶ ನೀಡುವಂತೆಯೂ ಅಂಜುಮನ್ ಸಂಸ್ಥೆಯು ಸೂಚಿಸಿದೆ ಎಂದು ತಮಟಗಾರ ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಬಶೀರ ಜಹಗೀರದಾರ, ಪದಾಧಿಕಾರಿಗಳಾದ ರಫೀಕ ಶಿರಹಟ್ಟಿ, ಎಸ್.ಎ. ಸರಗಿರೋ, ರಫೀಕ ಕಳ್ಳಿಮನಿ, ಇಕ್ಬಾಲ್ ಜಮಾದಾರ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಂಧುಗಳಿದ್ದರು.