ಹಾನಗಲ್ಲ: ಹಾನಗಲ್ಲ ತಾಲೂಕಿನಲ್ಲಿ ಹಾಡು ಹಗಲೇ ಕೊಲೆ ಸೇರಿದಂತೆ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ತಾಲೂಕು ಆಡಳಿತ ಸಂಪೂರ್ಣವಾಗಿ ಕುಸಿದು, ಸಾರ್ವಜನಿಕರು ಆತಂಕ ಭಯದಲ್ಲಿ ಜೀವನ ನಡೆಸುವ ದುಸ್ಥಿತಿ ನಿರ್ಮಾಣವಾಗಿ, ಮಾನವ ಕುಲ ತಲೆ ತಗ್ಗಿಸುವ ಹಾಗಾಗಿರುವುದನ್ನು ಪ್ರತಿಭಟಿಸಿ ಮೌನ ಮೆರವಣಿಗೆ ಮೂಲಕ ಮಹಾತ್ಮಾಗಾಂಧಿ ವೃತ್ತದಲ್ಲಿ ತಾಲೂಕು ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಕೊಲೆ ಪ್ರಕರಣಗಳನ್ನು ಮುಚ್ಚಿ ಹಾಕುವ ಹುನ್ನಾರಗಳೂ ನಡೆದಿದ್ದು ಅಪರಾಧಿಗಳಿಗೆ ಶಿಕ್ಷೆಯಾಗುತಿಲ್ಲ. ಅಮಾನವೀಯ ಕೃತ್ಯಗಳನ್ನು ತಡೆಯುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಹಲವು ವೈಷಮ್ಯಗಳು ಕೊಲೆಗೆ ಕಾರಣವಾಗುತ್ತಿವೆ. ಕಾನೂನು ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಇಡೀ ತಾಲೂಕಿನಲ್ಲಿ ಸಭ್ಯವಾಗಿ ಬದುಕದಂತಹ ಸ್ಥಿತಿ ನಿರ್ಮಾಣವಾಗುವ ಪರಿಸ್ಥಿತಿ ಇದೆ. ಇನ್ನೊಂದೆಡೆ ನೈತಿಕ ಪೊಲೀಸಗಿರಿ ಹೆಸರಿನಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ಇದಕ್ಕೆಲ್ಲ ಪ್ರೇರಣೆಯಂತಿರುವ ಗಾಂಜಾ ಮಾರಾಟ, ದ್ವಿಚಕ್ರವಾಹನಗಳ ಯದ್ವತದ್ವಾ ಓಡಾಟ, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಕಿರುಕುಳ, ಸಾರ್ವಜನಿಕ ಪಾರ್ಕಗಳು ಹಾಗೂ ಕ್ರೀಡಾಂಗಣ ಮದ್ಯಪಾನದ ಅಡ್ಡೆಗಳಾಗಿರುವುದು, ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಹುಟ್ಟು ಹಬ್ಬದ ನೆಪದಲ್ಲಿ ಕುಡಿದ ದಾಂಧಲೆ ಮಾಡುವ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿವೆ. ಇವೆಲ್ಲ ಸಾರ್ವಜನಿಕರಿಗೆ ತೀರ ಕಳವಳಕಾರಿಯಾಗಿದ್ದು ಪೊಲೀಸ್ ಹಾಗೂ ತಾಲೂಕು ಆಡಳಿತ ವ್ಯವಸ್ಥೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರುವ ಸ್ಥಿತಿಯಲ್ಲಿದೆ. ಇಂತಹ ಕೃತ್ಯಗಳನ್ನು ತಡೆಗಟ್ಟುವಲ್ಲಿ ಸಂಬಂಧಿಸಿದ ಇಲಾಖೆಗಳು ಕಾನೂನು ಕ್ರಮಕ್ಕೆ ಮುಂದಾಗದಿದ್ದರೆ ಸಾರ್ವಜನಿಕರು ಅನಿವಾರ್ಯವಾಗಿ ಬೀದಿಗಿಳಿದು ಉಗ್ರ ಹೋರಾಟಕ್ಕೆ ಸಜ್ಜಾಗಬೇಕಾದೀತು ಎಂಬ ಎಚ್ಚರಿಕೆಯನ್ನು ಸಂಘನೆಗಳು ನೀಡಿವೆ.ಅಪರಾಧ ಪ್ರಕರಣ ತಡೆಯಲು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವುದು, ಅರಿವು ಕಾರ್ಯಕ್ರಮ ನೆರವೇರಿಸುವುದು, ಮೃತಪಟ್ಟ ಪ್ರಕಾಶ ವಾಲೀಕಾರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವುದು, ಇಂತಹ ಕೃತ್ಯಕ್ಕೆ ಮುಂದಾದವರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸುವುದು, ಬೀಟ್ ಪೊಲೀಸರಿಗೆ ತಮ್ಮ ಕರ್ತವ್ಯಕ್ಕೆ ಹೆಚ್ಚು ಚುರುಕು ನೀಡುವುದು, ವರದಿ ಪಡೆಯುವುದು, ಅಪರಾಧ ಕೃತ್ಯಗಳಲ್ಲಿ ತೊಡಗಿದ ವಿಷಯ ತಿಳಿಯುತ್ತಿದ್ದಂತೆ ವಿಳಂಬವಿಲ್ಲದೆ ಅಪರಾಧಿಗಳ ಮೇಲೆ ಕ್ರಮ ಜರುಗಿಸುವುದು, ವಿವಿಧ ಖಾನಾವಳಿ, ದಾಬಾ, ಗೂಡಂಗಡಿಗಳಲ್ಲಿ ಪರವಾನಿಗೆ ಇಲ್ಲದೆ ಸಾರಾಯಿ ಮಾರಾಟ ತಡೆಯಲು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳನ್ನು ತಹಸೀಲ್ದಾರರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಪುರಸಭಾ ಅಧ್ಯಕ್ಷೆ ಮಮತಾ ಆರೆಗೊಪ್ಪ, ಅನಿತಾ ಡಿಸೋಜ, ಜರಾಲ್ಡ ಡಿಸೋಜಾ, ಜೇಸನ್, ಮಂಜುನಾಥ ಕರ್ಜಗಿ, ಫೈರೋಜ ಶಿರಬಡಗಿ, ಭೋಜರಾಜ ಕರೂದಿ, ಬಿ.ಆರ್. ಶೆಟ್ಟರ, ಡಾ.ಎನ್.ಎಫ್. ಕಮ್ಮಾರ, ಎನ್.ಎಂ. ಪೂಜಾರ, ಕಲ್ಲಪ್ಪ, ಶಾಂತಾ ಡಿಸೋಜ, ಮಹಲಿಂಗಪ್ಪ ಅಕ್ಕಿವಳ್ಳಿ, ಅಡಿವೆಪ್ಪ ಆಲದಕಟ್ಟಿ, ಎಸ್.ಎಂ.ಕೋತಂಬರಿ, ವಿನಾಯಕ ಕುರುಬರ, ಎಂ.ಎ.ನೆಗಳೂರು, ಸಿದ್ದು ಕಾಳಪ್ಪನವರ, ಸಿಕಂದರ ವಾಲಿಕಾರ, ರಾಮಚಂದ್ರ ಕಲ್ಲೇರ, ಮಂಜು ಯಳ್ಳೂರ, ಆರ್.ಬಿ. ಪಾಟೀಲ, ನೇತ್ರಾವತಿ ಮಂಡಿಗನಾಳ, ಎನ್.ಎಂ. ಯಶೋಧ, ಶಂಭು ಲೆಕ್ಕದ, ಮಾರುತಿ ಹರಗಿ, ನಸರುಲ್ಲಾ ಉಪ್ಪಣಸಿ, ಖ್ವಾಜಾಮೊಹಿದ್ದೀನ ಅಣ್ಣೀಗೇರಿ ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿಭಟನೆ ಹಾಗೂ ಮನವಿ ಅರ್ಪಣೆಯಲ್ಲಿ ಪಾಲ್ಗೊಂಡಿದ್ದರು.