- ಅತ್ಯಾಚಾರ ಖಂಡಿಸಿ ಹುಣಸಗಿಯಲ್ಲಿ ಆಯುಷ್ ಫೆಡರೇಷನ್ ತಹಸೀಲ್ದಾರರಿಗೆ ಮನವಿ
----ಕನ್ನಡಪ್ರಭ ವಾರ್ತೆ ಹುಣಸಗಿ
ಕೋಲ್ಕತ್ತಾದ ಯುವ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಆಯುಷ್ ಫೆಡರೆಷನ್ ವತಿಯಿಂದ ಶನಿವಾರ ಪಟ್ಟಣದಲ್ಲಿ ಮಹಾಂತಸ್ವಾಮಿ ವೃತ್ತದಿಂದ ಬಸ್ ನಿಲ್ದಾಣ, ಬಸವೇಶ್ವರ ವೃತ್ತದ ಮೂಲಕ ತಹಸೀಲ್ ಕಚೇರಿಯವರೆಗೆ ಮೌನ ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಟ್ಟಣದಲ್ಲಿ ತಾಲೂಕು ಆಯುಷ್ ವೈದ್ಯರ ಸಂಘ ಹಾಗೂ ಅಖಿಲ ಭಾರತ ವೈದ್ಯರ ಮುಷ್ಕರ ಕರೆಯ ಮೇರೆಗೆ ನಡೆದ ಬಹಿರಂಗ ಸಭೆಯಲ್ಲಿ ತಾಲೂಕು ಆಯುಷ್ ಫೆಡರೆಷನ್ ಕರ್ನಾಟಕ ಸಂಘದ ಅದ್ಯಕ್ಷ ಡಾ.ವಿನೋದ ಮಠ ಅವರು, ವೈದ್ಯೊ ನಾರಾಯಣೋ ಹರಿ ಎನ್ನವ ನಾವು, ಇನ್ನೊಂದು ಕಡೆ, ಹಗಲು ರಾತ್ರಿ ಜನ ಸೇವೆ ಮಾಡುವ ಸಂದರ್ಭದಲ್ಲಿ ಇಂತಹ ಅತ್ಯಾಚಾರದಂತಹ ಅಮಾನವೀಯ ಘಟನೆ ವೈದ್ಯರ ಮನೋಸ್ಥೈರ್ಯ ಕುಸಿಯುವಂತೆ ಮಾಡಿದೆ ಎಂದರು.
ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ವೈದ್ಯರ ಮೇಲಿನ ಹಲ್ಲೆ, ಇವೆಲ್ಲವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.ಡಾ. ಬಸನಗೌಡ ಪಾಟೀಲ್ ಮಾತನಾಡಿ, ಕಾನೂನನ್ನು ಸರಿಯಾಗಿ ಪಾಲಿಸದ ಪ್ರಜಾಪ್ರಭುತ್ವ ಸರಕಾರಗಳ ವರ್ತನೆಯನ್ನು ಖಂಡಿಸಿದ ಅವರು, ಕೊಲ್ಕತ್ತಾದಲ್ಲಿ ನಡೆದ ಅನ್ಯಾಯಕ್ಕೆ ಸ್ಪಂದನೆ ಮಾಡದ ಜನಪ್ರತಿನಿಧಿಗಳನ್ನು ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.
ಡಾ. ಸಂಜಯ ಚಂದಾ ಮತ್ತು ಡಾ. ವೀರಭದ್ರಗೌಡ ಮಾತನಾಡಿ, ಈ ದುಷ್ಕೃತ್ಯ ಎಸಗಿದ ಪಾಪಿಗಳಿಗೆ ತಕ್ಷಣವೆ ಗಲ್ಲು ಶಿಕ್ಷೆ ನೀಡಬೇಕು. ಕೋರೊನಾ ಸಂದರ್ಭದಲ್ಲಿ ಸೇವೆಯಲ್ಲಿ ಅನೇಕ ವೈದ್ಯ ಯುವ ಮಿತ್ರರು ತಮ್ಮ ಪ್ರಾಣವನ್ನೆ ನೀಡಿದ್ದಾರೆ. ಆರೋಗ್ಯ ಸೇವೆಯಲ್ಲಿ ತೊಡಗಿದ ವೈದ್ಯರಿಗೆ ಅಗತ್ಯ ರಕ್ಷಣೆ ನೀಡಬೇಕು. ಅಖಿಲ ಭಾರತ ವೈದ್ಯರ ಸಂಘಟನೆಯ ಕರೆಯ ಮೇರೆಗೆ ಇಂದು ಪ್ರತಿಭಟನೆ ನಡೆಸಲಾಗಿದೆ ಎಂದರು.ಉಪಾದ್ಯಕ್ಷ ಡಾ. ಜಿ.ಎಸ್. ಪಂಜಗಲ್, ಡಾ. ಪ್ರಕಾಶ ಚವ್ಹಾಣ, ಡಾ. ನಿಂಗನಗೌಡ ಬಿರಾದಾರ್, ಡಾ. ಸುರೇಶ ಹಯ್ಯಾಳ ಸೇರಿದಂತೆ ಇತರರು ಮಾತನಾಡಿದರು.
ಮೇಡಿಕಲ್ ಅಸೋಷಿಯೇಶನ್, ಪ್ರಯೋಗಾಲಯ ಸೇರಿ ಅನೇಕ ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು.ಡಾ. ಆಶಾ, ಡಾ. ಅಶ್ವಿನಿ, ಡಾ. ಶಬಾನಾ, ಡಾ. ಭಾಗ್ಯಶ್ರೀ, ಡಾ. ಜಯಶ್ರೀ ಕಣ್ಣೂರು, ಡಾ. ಪ್ರವೀಣ ಕುಂಬಾರ, ಡಾ. ಐ.ಎಸ್. ಕಟ್ಟಿ ಸೇರಿ ಹುಣಸಗಿ ತಾಲೂಕಿನ 80ಕ್ಕೂ ಹೆಚ್ಚು ವೈದ್ಯರು ವಿವಿಧೆಡೆಯಿಂದ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಒದಗಿಸಲಾಗಿತ್ತು.
-----17ವೈಡಿಆರ್10: ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರ ಖಂಡಿಸಿ ಹುಣಸಗಿ ಪಟ್ಟಣದಲ್ಲಿ ಆಯುಷ್ ಫೆಡರೇಷನ್ ವತಿಯಿಂದ ಶನಿವಾರ ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
---000---