ಕೊಟ್ಟೂರಿನಲ್ಲಿ ಇಂದು ಬೆಳ್ಳಿ ರಥೋತ್ಸವ

KannadaprabhaNewsNetwork | Published : Dec 25, 2023 1:30 AM

ಸಾರಾಂಶ

ಮಹಾಕಾರ್ತೀಕೋತ್ಸವ ನಿಮಿತ್ತದ ಉತ್ಸವ ಬೆಳ್ಳಿ ರಥೋತ್ಸವ ನಡೆಯಲಿದೆ. ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಜಿ. ಸೋಮಶೇಖರ

ಕೊಟ್ಟೂರು: ಪಂಚಗಣಾಧೀಶರಲ್ಲಿ ಒಬ್ಬರಾದ ಕೊಟ್ಟೂರು ಗುರು ಬಸವೇಶ್ವರ (ಕೊಟ್ಟೂರೇಶ್ವರ ಸ್ವಾಮಿ) ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರವೆಂದೇ ಜನಜನಿತವಾಗಿದೆ. ಕೊಟ್ಟೂರೇಶ್ವರ ಸ್ವಾಮಿಯ ಕಾರ್ತೀಕೋತ್ಸವ ಮತ್ತು ಅತ್ಯಾಕರ್ಷಕ ಬೆಳ್ಳಿ ರಥೋತ್ಸವ ಡಿ. ೨೫ರಂದು ರಾತ್ರಿಯಿಡೀ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ಮಧ್ಯೆ ನಡೆಯಲಿದೆ.

ಸ್ವಾಮಿಯ ಕಾರ್ತೀಕೋತ್ಸವದ ಪ್ರಮುಖ ಆಕರ್ಷಣೆ ಬೆಳ್ಳಿ ರಥೋತ್ಸವ ಆಗಿದ್ದು, ನಾಡಿನ ಅಪರೂಪದ ಮಹೋತ್ಸವವೆಂದು ಖ್ಯಾತಿ ಪಡೆದಿದೆ. ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ಬೆಳ್ಳಿ ರಥಗಳು ಮಠಗಳ ಸುತ್ತ ಮಾತ್ರ ಪ್ರದಕ್ಷಿಣೆ ಹಾಕುವುದು ಸಂಪ್ರದಾಯ. ಆದರೆ ಕೊಟ್ಟೂರಿನ ಸ್ವಾಮಿಯ ಬೆಳ್ಳಿ ರಥೋತ್ಸವ ಐದಾರು ನೂರು ಮೀಟರ್‌ಗಳಷ್ಟು ಮುಂದೆ ಸಾಗಲಿದೆ. ಅಲ್ಲದೇ ಮಧ್ಯರಾತ್ರಿಯುದ್ದಕ್ಕೂ ಅಂದಾಜು ಲಕ್ಷಕ್ಕೂ ಹೆಚ್ಚು ಜನಸ್ತೋಮದ ಮಧ್ಯೆ ಸಡಗರದಿಂದ ನೆರವೇರಲಿದೆ. ಮತ್ತೊಂದು ವಿಶೇಷ ಎಂದರೆ ಸ್ವಾಮಿಯ ಮೂಲ ಬಂಗಾರದ ಮೂರ್ತಿಯನ್ನೇ ಬೆಳ್ಳಿ ರಥದಲ್ಲಿ ವಿರಾಜಮಾನಗೊಳಿಸಲಾಗುತ್ತದೆ.

ಸ್ವಾಮಿಯ ಮಾಲಾಧಾರಿಗಳು: ಕಾರ್ತಿಕೋತ್ಸವದ ಪ್ರಯುಕ್ತ ಕೊಟ್ಟೂರೇಶ್ವರ ಸ್ವಾಮಿಯ ಭಕ್ತರು ಮಾಲಾ ವ್ರತ ಆಚರಿಸುತ್ತಿದ್ದಾರೆ. ದೀಪಾವಳಿ ಪಾಡ್ಯದಿಂದ ಭಕ್ತರು ವ್ರತವನ್ನು ಕೈಗೊಂಡಿದ್ದಾರೆ. ಈ ವ್ರತಧಾರಿಗಳು ನಿತ್ಯ ಬೆಳಗ್ಗೆ ಹಾಗೂ ಸಂಜೆ ಲಿಂಗಪೂಜೆ ಮಾಡುತ್ತಾರೆ. ಅದೇ ರೀತಿ ಕಾರ್ತೀಕೋತ್ಸವದಂದು ಭಕ್ತರು ಮಾಲೆಯನ್ನು ವಿಸರ್ಜನೆ ಮಾಡುತ್ತಾರೆ.

ಅಗತ್ಯ ಸಿದ್ಧತೆ: ಕಾರ್ತೀಕೋತ್ಸವಕ್ಕೆ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ಹಿನ್ನೆಲೆ ಮಠದ ವತಿಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಅಲ್ಲದೇ ಪೊಲೀಸ್‌ ಇಲಾಖೆಯಿಂದ ಬಂದೋಬಸ್ತ್‌ಗಾಗಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ. ಮದ್ಯಮಾರಾಟ ನಿಷೇಧ: ಜಿಲ್ಲೆಯ ಕೊಟ್ಟೂರು ತಾಲೂಕಿನ ಗುರು ಕೊಟ್ಟೂರು ಬಸವೇಶ್ವರ ಕಾರ್ತೀಕೋತ್ಸವ ಹಾಗೂ ಬೆಳ್ಳಿ ರಥೋತ್ಸವದ ನಿಮಿತ್ತ ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿ. 24 ಹಾಗೂ 25ರಂದು ಮದ್ಯ ಮಾರಾಟ ಹಾಗೂ ಸಾಗಾಣಿಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ. ಗುರು ಕೊಟ್ಟೂರು ಬಸವೇಶ್ವರ ಕಾರ್ತೀಕೋತ್ಸವ ಹಾಗೂ ಬೆಳ್ಳಿ ರಥೋತ್ಸವದ ಪ್ರಯುಕ್ತ ಕೊಟ್ಟೂರು ಪಟ್ಟಣದ ಮುಖ್ಯ ಬೀದಿಯ ಎರಡು ಬದಿಯಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಗದಗ, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿ ರಾಜ್ಯಾದ್ಯಂತ ಲಕ್ಷಾಂತರ ಭಕ್ತರು ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಟ್ಟೂರು ಪಪಂ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಾಣಿಕೆ ನಿಷೇಧ ಮಾಡಿದ್ದು, ಬಾರ್ ಆ್ಯಂಡ್ ರೆಸ್ಟೋರೆಂಟ್ ಇತರೆ ಸ್ಥಳಗಳಲ್ಲಿ ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.ಬಂದೋಬಸ್ತ್‌: ಕಾರ್ತೀಕೋತ್ಸವ ಮತ್ತು ಬೆಳ್ಳಿ ರಥೋತ್ಸವ ಸುಗಮವಾಗಿ ಜರುಗಲು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೂಡ್ಲಿಗಿ ಡಿವೈಎಸ್‌ಪಿ ನೇತೃತ್ವದಲ್ಲಿ 4 ಸಿಪಿಐ ೧೫ ಪಿಎಸ್‌ಐ, ೩೯ ಎಎಸ್ಐ, ೧೦೦ಕ್ಕೂ ಹೆಚ್ಚು ಪೊಲೀಸ್ ಪೇದೆಗಳನ್ನು ಬಂದೋಬಸ್ತ್‌ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಒಂದು ಡಿಎಆರ್ ಮತ್ತು ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ಸಹ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಸಬ್‌ಇನ್‌ಸ್ಪೆಕ್ಟರ್ ಗೀತಾಂಜಲಿ ಸಿಂಧೆ ತಿಳಿಸಿದರು.

Share this article