ಕೊಟ್ಟೂರು: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಗುರುಕೊಟ್ಟೂರೇಶ್ವರ ಸ್ವಾಮಿಯ ವೈಭವದ ಬೆಳ್ಳಿ ರಥೋತ್ಸವವು ಸೋಮವಾರ ರಾತ್ರಿ ಭಾರಿ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಈ ಕೈಂಕರ್ಯದ ಮೂಲಕ ಕಾರ್ತೀಕ ಮಾಸವಿಡೀ ನಡೆದ ಸ್ವಾಮಿಯ ಉತ್ಸವಕ್ಕೆ ತೆರೆ ಬಿತ್ತು. ಅಹೋರಾತ್ರಿ ನಡೆಯುವ ಏಕೈಕ ಬೆಳ್ಳಿ ರಥೋತ್ಸವ ಎಂಬ ಹೆಗ್ಗಳಿಕೆ ಹೊಂದಿದೆ. ಈ ಅಪರೂಪದ ಸ್ವಾಮಿಯ ಬೆಳ್ಳಿ ರಥೋತ್ಸವವನ್ನು ವೀಕ್ಷಿಸಲು ನಾಡಿನೆಲ್ಲೆಡೆಯಿಂದ ಅಸಂಖ್ಯಾತ ಭಕ್ತರು ಜಮಾವಣೆಗೊಂಡಿದ್ದರು.ಕಾರ್ತೀಕ ಉತ್ಸವ ದೀಪಾವಳಿ ಪಾಡ್ಯದಿಂದ ಆರಂಭಗೊಂಡಿದ್ದು, ಈ ಅವಧಿಯ ಸೋಮವಾರ ಮತ್ತು ಗುರುವಾರದ ರಾತ್ರಿ ಬೆಳ್ಳಿ ಪಲ್ಲಕ್ಕಿ ಉತ್ಸವ ನೆರವೇರುತ್ತಾ ಬಂದಿತ್ತು. ೧೩ ಪಲ್ಲಕ್ಕಿ ಉತ್ಸವಗಳು ನಡೆದಿದ್ದವು. ೧೪ ಹಾಗೂ ಕೊನೆಯ ಉತ್ಸವವಾಗಿ ಬೆಳ್ಳಿ ರಥೋತ್ಸವ ಸೋಮವಾರ ರಾತ್ರಿ ನಡೆಯಿತು. ಈ ಉತ್ಸವದುದ್ದಕ್ಕೂ ಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಲಾಗಿತ್ತು.
ಗುರುಕೊಟ್ಟೂರೇಶ್ವರ ಸ್ವಾಮಿಗೆ ಸೋಮವಾರ ರಾತ್ರಿ 11.45ರ ವೇಳೆಗೆ ಪೂಜೆ ನೆರವೇರಿಸಿದ ನಂತರ ಸ್ವಾಮಿಯನ್ನು ಸಕಲ ಬಿರುದಾಳಿಗಳೊಂದಿಗೆ ಹಿರೇಮಠದಿಂದ ಹೊರಗೆ ತಂದ ಧರ್ಮಕರ್ತ ಮತ್ತು ಪೂಜಾ ಬಳಗದವರು ವಿವಿಧ ಹೂವುಗಳಿಂದ ಅಲಂಕೃತಗೊಂಡ ಬೆಳ್ಳಿ ರಥದಲ್ಲಿ ವಿರಾಜಮಾನಗೊಳಿಸಿದರು. ಸ್ವಾಮಿಯ ಕ್ರಿಯಾಮೂರ್ತಿ ಶಿವಪ್ರಕಾಶ್ ಕೊಟ್ಟೂರುದೇವರು ರಥದಲ್ಲಿ ಆಸೀನರಾಗುತ್ತಿದ್ದಂತೆ ಬೆಳ್ಳಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ಆಗ ನೆರೆದಿದ್ದ ಭಕ್ತರು ಬಾಳೆಹಣ್ಣುಗಳನ್ನು ರಥಕ್ಕೆ ತೂರಿ ಸ್ವಾಮಿಯ ಜಯಘೋಷಗಳನ್ನು ಕೂಗಿ ಭಕ್ತಿ ಸಮರ್ಪಿಸಿದರು.ಆಕರ್ಷಕ ಸಮಾಳದ ನಿನಾದ, ನಂದಿಕೋಲು ಕುಣಿತ, ಶಹನಾಯಿ ವಾದ್ಯದವರ ನಾದದೊಂದಿಗೆ ಬೆಳ್ಳಿ ರಥೋತ್ಸವ ತೊಟ್ಟಿಲು ಮಠ, ಊರಮ್ಮನ ಬಯಲು ಮುಖಾಂತರ ಗಚ್ಚಿನ ಮಠಕ್ಕೆ ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ತಲುಪಿತು. ಅಲ್ಲಿ ಕೆಲಹೊತ್ತು ಸ್ವಾಮಿಯನ್ನು ಅಕ್ಬರ್ ಬಾದಶಹ ಸ್ವಾಮಿಗೆ ಕೊಡುಗೆಯಾಗಿ ನೀಡಿದ ಮಣಿಮಂಚದ ಮೇಲೆ ವಿರಾಜಮಾನಗೊಳಿಸಲಾಯಿತು. ಅಲ್ಲಿಂದ ವಾಪಸಾಗಿ ರಥೋತ್ಸವ ಮಂಗಳವಾರ ಬೆಳಗಿನ ಜಾವ ೩ರ ಸುಮಾರಿಗೆ ಮೂಲ ಹಿರೇಮಠ ತಲುಪಿತು. ಭಕ್ತರು ರಥೋತ್ಸವವನ್ನು ಎಳೆಯಲು ಉತ್ಸವದುದ್ದಕ್ಕೂ ತಾ ಮುಂದು, ನಾ ಮುಂದು ಎಂದು ಮುಗಿಬಿದ್ದರು.