ದಾವಣಗೆರೆ: ವಿಕಲಚೇನತರಿಗೆ ಅನುಕಂಪದ ಬದಲಿಗೆ ಸ್ವಾವಲಂಬಿಯಾಗಿ ಬಾಳಲು ಪೂರಕ ವಾತಾವರಣ, ಪ್ರೋತ್ಸಾಹ ನೀಡುವ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾ.ಮಹಾವೀರ ಮ.ಕರೆಣ್ಣವರ ಕರೆ ನೀಡಿದರು.
ನ್ಯಾಯಾಧೀಶರನ್ನು ಒಳಗೊಂಡ ಜಿಲ್ಲಾ ಸಮಿತಿಯು ವಿಶೇಷ ಚೇತನರ ಬಗ್ಗೆ ಗಮನ ಹರಿಸುತ್ತದೆ. ವಿಶೇಷ ಚೇತನರನ್ನು ಆರ್ಥಿಕವಾಗಿ ಸಬಲರಾಗಿಸುವ ಕೆಲಸ ಆಗಬೇಕು. ಸ್ವಾವಲಂಬಿಯಾಗಿ ಬದುಕಲು ಅನುವು ಮಾಡಿಕೊಡಬೇಕು ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ಬಿ.ಮಲ್ಲಾನಾಯ್ಕ ಮಾತನಾಡಿ, ಯಾವುದೇ ಯೋಜನೆಗಳನ್ನು ರೂಪಿಸುವಾಗ ಶೇ.5ರಷ್ಟು ಅನುದಾನ ಮೀಸಲಿಡಲಾಗುತ್ತದೆ. ಶೇ.5ರಷ್ಟು ಅನುದಾನವೆಂದರೆ ಅಷ್ಟೇ ಹಣ ಮೀಸಲು ಇಡಬೇಕೆಂದಲ್ಲ. ಅವಶ್ಯಕತೆ ನೋಡಿಕೊಂಡು, ಶೇ.5ರ ಪ್ರಮಾಣ ಹೆಚ್ಚಿಸುವುದಕ್ಕೂ ಅವಕಾಶವಿದೆ. ವಿಶೇಷ ಚೇತನರಿಗೆ ವಿಶೇಷ ಆದ್ಯತೆ ನೀಡುವ ಪಿಡಬ್ಲ್ಯೂಡಿ ಕಾಯ್ದೆ, ಅನುದಾನದ ಬಗ್ಗೆ ಎಲ್ಲಾ ತಾಪಂ, ಗ್ರಾಪಂಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜಿಲ್ಲೆಯ ಕೆಲವು ಗ್ರಾಪಂಗಳು ಡಿಜಿಟಲ್ ಗ್ರಂಥಾಲಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಹೊಂದಿದ್ದು, ಅದೇ ಮಾದರಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದರು.ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಮಭೋವಿ ಮಾತನಾಡಿ, ಯಾವುದೇ ಸೌಲಭ್ಯ ಕಲ್ಪಿಸುವಾಗ ಅದನ್ನು ನಿರಂತರವಾಗಿ ಬೆನ್ನು ಹತ್ತಿ, ಫಲಾನುಭವಿ ವಿಶೇಷ ಚೇತನರಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದರು.