ಕನ್ನಡಪ್ರಭ ವಾರ್ತೆ ಮೈಸೂರು
‘ಸಂವಿಧಾನ ವಿರೋಧಿಗಳ ಉದ್ದೇಶವನ್ನು ಸೋಲಿಸಿ, ಬಹುಜನರು ಅಧಿಕಾರಕ್ಕೆ ಏರಬೇಕು ಎಂದು ಚಲನಚಿತ್ರ ನಟ ಅಶೋಕ್ ಹೇಳಿದರು.ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಬಹುಜನ ವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬ ಹಾಗೂ ಸಂವಿಧಾನದ 75ನೇ ವರ್ಷಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಳೆದ 10 ವರ್ಷದಿಂದ ಸಂವಿಧಾನದ ಬುಡವೇ ಅಲುಗಾಡುತ್ತಿದೆ. ಆ ಪಕ್ಷಕ್ಕೆ 400 ಸೀಟು ದೊರೆತಿದ್ದರೆ ಸಂವಿಧಾನವೇ ಬದಲಾಗುತ್ತಿತ್ತು’ ಎಂದರು.
ಶತಮಾನಗಳ ಹಿಂದಿನ ಗುಲಾಮಗಿರಿಗೆ ಮತ್ತೆ ಮರಳದಂತೆ ತಮ್ಮ ಹಕ್ಕನ್ನು ಪಡೆಯಬೇಕು. ಕಾನೂನು ರಚನೆಯಲ್ಲಿ ತೊಡಗಬೇಕು’ ಎಂದು ಅವರು ಹೇಳಿದರು. ‘2014ರ ಚುನಾವಣೆ ಬಳಿಕ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಮೇಲೆಯೇ ನಮಗೆ ಸ್ವಾತಂತ್ರ್ಯ ಬಂತು ಎಂದು ಕೆಲವರು ಹೇಳುತ್ತಾರೆ. ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು, ಮೇಲ್ವರ್ಗದವರೇ ಆಡಳಿತದಲ್ಲಿರಬೇಕು ಎಂಬ ಆರ್‌ಎಸ್ಎಸ್ ಉದ್ದೇಶ, ಅವಿರತ ಶ್ರಮದಿಂದ ಅಧಿಕಾರಕ್ಕೆ ಬಂದಿದ್ದಾರೆ’ ಎಂದು ಅವರು ಹೇಳಿದರು.‘ಬಹುಜನರ ಸಾಮರ್ಥ್ಯ ಚದುರಿ ಹೋಗಿದೆ. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಸಿಕ್ಕಿದೆಯೇ ಎಂಬ ಬಗ್ಗೆ ಸರ್ಕಾರಗಳು ಯಾವುದೇ ಆಲೋಚನೆ ಮಾಡುತ್ತಿಲ್ಲ. ಇನ್ನೂ ಮೌನವಾಗಿದ್ದರೆ ಅವರು ಎಲ್ಲೆಡೆಯೂ ಹುದ್ದೆಗಳನ್ನು ಆಕ್ರಮಿಸುತ್ತಾರೆ. ಎಂದು ಅವರು ಎಚ್ಚರಿಸಿದರು. ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ‘ಸಂವಿಧಾನವನ್ನು ನಾಶ ಮಾಡಲು ಹೊರಟವರು ಹಾಗೂ ಸಂವಿಧಾನ ರಕ್ಷಣೆ ಹೆಸರಿನಲ್ಲಿ ಮೌನವಾಗಿದ್ದವರು, ಈ ಇಬ್ಬರೂ ನಮ್ಮನ್ನು ಆಳುತ್ತಿದ್ದಾರೆ. ತೋರಿಕೆಗೆ ಸೀಮಿತರಾಗಿ ಆಶಯಗಳನ್ನು ಮರೆಮಾಚುವವರು ಹೆಚ್ಚು ಅಪಯಕಾರಿಗಳು’ ಎಂದರು.‘ಕಾನ್ಶಿರಾಮ್ ಅವರಂತೆ ತ್ಯಾಗ ಮಾಡಬೇಕು ಪರ್ಯಾಯ ರಾಜಕಾರಣ ಕಟ್ಟಬೇಕು. ಬೌದ್ಧ ಧರ್ಮವನ್ನು ಅಂಬೇಡ್ಕರ್ ಅವರು ಪುನರ್ ಸ್ಥಾಪಿಸಿದಂತೆ, ಬಿವಿಎಸ್ ಜಾಗೃತಿಗೆ ಮುಂದಾಗಬೇಕು. ಪರ್ಯಾಯ ಆಲೋಚನೆಯನ್ನು ಕಟ್ಟಬೇಕಾದ ಅಗತ್ಯ ನಮಗಿದೆ’ ಎಂದರು.ಕವಿ ಹನಸೋಗೆ ಸೋಮಶೇಖರ್ ಅವರ ಕವಿತೆಗಳ ಪುಸ್ತಕ ‘ಸ್ವಾಭಿಮಾನಕ್ಕಿಲ್ಲ ಸೋಲು’, ಲೇಖಕ ಡಾ. ಕೃಷ್ಣಮೂರ್ತಿ ಚಮರಂ ಅವರ ‘ಬಹಿಷ್ಕೃತ ಭಾರತ’, ‘ಎಲ್ಲಿದೆ ಪ್ರಜಾಪ್ರಭುತ್ವ ?’ ಪುಸ್ತಕಗಳು ಹಾಗೂ ಹ.ರಾ.ಮಹೇಶ್ ಅವರ ಸಾಹಿತ್ಯ, ಸಂಗೀತವುಳ್ಳ ‘ಸಲಾಂ ಸಂವಿಧಾನ’, ಸುರೇಶ್ ಗೌತಮ್ ಅವರ ರಚನೆ, ಹ.ರಾ.ಮಹೇಶ್ ರಾಗ ಸಂಯೋಜನೆ, ಗಾಯನದ ‘ಅಂಬೇಡ್ಕರಾ ಎಂದರೆ’ ಧ್ವನಿಮುದ್ರಿಕೆಗಳು ಬಿಡುಗಡೆಗೊಂಡವು.ತುಮಕೂರು ವಿಶ್ವವಿದ್ಯಾಲಯದ ಪ್ರೊ.ಬಿ.ರಮೇಶ್, ಮಾಜಿ ಮೇಯರ್ ಪುರುಷೋತ್ತಮ್, ‘ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಕೆ.ನರಸಿಂಹಮೂರ್ತಿ, ಲೇಖಕ ವಡ್ಡಗೆರೆ ನಾಗರಾಜಯ್ಯ, ಚಿಂತಕ ಬಿ. ಶಿವಣ್ಣ ಕನಕಪುರ, ಚಂದ್ರಹಾಸ್, ಲೇಖಕ ಕೃಷ್ಣಮೂರ್ತಿ ಚಮರಂ, ಲೇಖಕಿ ಎಂ.ಪ್ರೇಮಾ ಬೋಧಿ ಮೊದಲಾದವರು ಇದ್ದರು.