ಕನ್ನಡಪ್ರಭ ವಾರ್ತೆ ಬೆಳಗಾವಿ
ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಸ್ತೆ ಅಪಘಾತದಲ್ಲಿ ಬದುಕಿ ಬಂದಿದ್ದು ನನಗೆ ಪುನರ್ಜನ್ಮ ಬಂದಂತಾಗಿದೆ. ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ, ಸಚಿವೆಯಾಗಿ ನನಗೂ ಜವಾಬ್ದಾರಿ ಇದೆ. ಮಾರ್ಚ್ ತಿಂಗಳಲ್ಲಿ ಬಜೆಟ್ ಕೂಡ ಇದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಕೂಡ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಆದಷ್ಟು ಬೇಗ ಸಾರ್ವಜನಿಕ ಜೀವನಕ್ಕೆ ಮರಳುತ್ತೇನೆ ಎಂದು ಸಚಿವರು ತಿಳಿಸಿದರು.
13 ದಿನಗಳಿಂದ ಚಿಕಿತ್ಸೆ ನೀಡಿದ ಆಸ್ಪತ್ರೆ ವೈದ್ಯ ಡಾ.ರವಿ ಪಾಟೀಲ್ ಅವರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದ ಸಚಿವರು, ನನಗೆ ಆಸ್ಪತ್ರೆಗಿಂತ ಮನೆಯಂತೆ ಭಾಸವಾಯಿತು. ನನ್ನ ಕುಟುಂಬಕ್ಕಿಂತ ಹೆಚ್ಚಾಗಿ ನೋಡಿಕೊಂಡರು. ಕಷ್ಟದ ಸಮಯದಲ್ಲಿ ವೈದ್ಯರು ಪಕ್ಕದಲ್ಲಿ ನಿಂತು, ಬೆಂಬಲ ಮತ್ತು ಕಾಳಜಿ ತೋರಿದರು. ವೈದ್ಯರ ದಯೆ, ತಾಳ್ಮೆ ಮತ್ತು ಸಮರ್ಪಣೆ ಹೃದಯಸ್ಪರ್ಶಿಯಾಗಿತ್ತು. ಧೈರ್ಯ ಕಳೆದುಕೊಳ್ಳದಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ನನ್ನ ಜತೆಗೆ ನಿಂತರು. ವೈದ್ಯರ ಕಾಳಜಿಯಿಂದ ಬೇಗ ಗುಣಮುಖ ಆದೆ. ಅಪಘಾತದ ಭಾವನೆ, ಆತಂಕ ಬಾರದಂತೆ ನೋಡಿಕೊಂಡರು, ಧೈರ್ಯ ತುಂಬಿದರು. ತಾಯಿ, ತಮ್ಮ, ಸೊಸೆ, ಮಗ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳುವೆ ಎಂದು ಹೇಳಿದರು.ಕಾರ್ಯಕರ್ತರು, ಕ್ಷೇತ್ರದ ಜನರಿಗೆ ಋಣಿ: ಆಸ್ಪತ್ರೆಯಲ್ಲಿದ್ದ ವೇಳೆ ನನ್ನ ಚೇತರಿಕೆಗೆ ಹಾರೈಸಿದ ನಾಡಿನ ಮಠಾಧೀಶರು, ಕಾರ್ಯಕರ್ತರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆ, ಬೆಳಗಾವಿ ಜಿಲ್ಲೆಯ ಜನರಿಗೆ ಋಣಿಯಾಗಿದ್ದೇನೆ. ಪೂಜೆ ಪುನಸ್ಕಾರ ಮಾಡುವ ಮೂಲಕ ನನ್ನ ಚೇತರಿಕೆಗೆ ಹಾರೈಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಸಚಿವ ಸಂಪುಟದ ಸಹೋದ್ಯೋಗಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು ಭೇಟಿಯಾಗಿ ಧೈರ್ಯ ತುಂಬಿದರು. ಅವರಿಗೆ ಎಂದಿಗೂ ಕೃತಜ್ಞಳಾಗಿರುತ್ತೇನೆ ಎಂದು ಹೆಬ್ಬಾಳಕರ್ ತಿಳಿಸಿದರು.
ಕಲ್ಲು ಹೃದಯದವರ ಆರೋಪಕ್ಕೆ ಉತ್ತರವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಹಣವಿತ್ತು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಲ್ಲು ಹೃದಯದವರು, ಹೃದಯ ಇಲ್ಲದವತಗೆ ಉತ್ತರ ಕೊಡಲ್ಲ. ಸಾವಿನಲ್ಲೂ ರಾಜಕೀಯ ಮಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.
ಬಿಜೆಪಿ ನಾಯಕರ ಆರೋಪಕ್ಕೆ ಉತ್ತರ ಕೊಡಲ್ಲ. ಆರೋಪ ಮಾಡಿದವರಿಗೆ ಬುದ್ಧಿ ಭ್ರಮಣೆ ಆಗಿರಬೇಕು. ಅಪಘಾತದ ಬಳಿಕ ಪ್ರಾಣಾಪಾಯದಿಂದ ಗೆದ್ದು ಬಂದಿರುವೆ. ಚೇತರಿಕೆ ಬಳಿಕ ಸಂಪೂರ್ಣ ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಸಂಬಂಧ ಕಾರ್ಯಪ್ರವೃತ್ತನಾಗಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.