ಜಾತಿ ವ್ಯವಸ್ಥೆ ಇರುವಲ್ಲಿವರೆಗೆ ಮೀಸಲಾತಿ ಅಗತ್ಯ

KannadaprabhaNewsNetwork |  
Published : Oct 19, 2025, 01:00 AM IST
2 | Kannada Prabha

ಸಾರಾಂಶ

ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆ ಬರಲು ಸಾಧ್ಯವಿಲ್ಲ. ಆದ್ದರಿಂದ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ರಜತ ಮಹೋತ್ಸವ ಹಾಗೂ ನೂತನ ಜ್ಞಾನದರ್ಶನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಇರುವವರೆಗೆ ಸಮಾನತೆ ಬರಲು ಸಾಧ್ಯವಿಲ್ಲ. ಆದ್ದರಿಂದ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕು. ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಅದಕ್ಕೆ ಚಲನೆ ಇಲ್ಲ. ಇದು ಆಳವಾಗಿ ಬೇರು ಬಿಟ್ಟಿದೆ ಎಂದರು.ಬಸವಣ್ಣ ಅವರು ಜಾತಿ ವ್ಯವಸ್ಥೆ ತೊಡೆದು ಹಾಕುವಂತೆ 850 ವರ್ಷಗಳ ಹಿಂದೆಯೇ ಹೇಳಿದ್ದರು. ಆದರೆ ಇನ್ನೂ ಸಾಧ್ಯವಾಗಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಹ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ್ದರು. ಇನ್ನೂ ಮೇಲು ಕೀಳು ಬಡವ ಬಲ್ಲಿದ ಎಂಬ ಅಸಮಾನತೆ ಹಾಗೇ ಇದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವ ಜಾತಿ ವ್ಯವಸ್ಥೆ ಇದೆ. ಇದು ತಲೆ ತಗ್ಗಿಸುವಂತಹ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.ನಾನು ಅಂಬೇಡ್ಕರ್ ವಾದದಲ್ಲಿ, ಬಸವಣ್ಣನವರ ತತ್ವದಲ್ಲಿ, ಗೌತಮ ಬುದ್ಧ ಅವರ ವಿಚಾರಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ನಾವು ಸ್ವಾಭಿಮಾನಿಗಳು ಆಗಬೇಕು. ಗುಲಾಮಗಿರಿಯನ್ನು ತೊಡೆದು ಹಾಕಬೇಕು ಎಂದು ಅವರು ಕರೆ ನೀಡಿದರು. ಅಂಬೇಡ್ಕರ್ ಅವರು ವಿಶ್ವಜ್ಞಾನಿಗಳು. ಅವರು ಸಮಾಜವನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡಿದ್ದರು. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇರಲಿಲ್ಲ. ಆದ್ದರಿಂದ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಯಿತು. ಅಂಬೇಡ್ಕರ್ ಅವರು ತಾವು ಕಲಿತ ವಿದ್ಯೆಯನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಿದ್ದಾರೆ ಎಂದರು.ನಾವು ವೈರುಧ್ಯತೆ ಇರುವ ಸಮಾಜಕ್ಕೆ ಕಾಲು ಇಡುತ್ತೇವೆ ಎಂದು ಸಂವಿಧಾನ ಅಂಗೀಕಾರ ಸಭೆಯಲ್ಲಿ ಅಂಬೇಡ್ಕರ್ ತಿಳಿಸಿದ್ದರು. ಇಂದು ಸಹ ಸಮಾಜದಲ್ಲಿ ವೈರುಧ್ಯತೆ ಇದೆ. ಆದರೆ, ಇಂದು ಸ್ವಲ್ಪ ಕಡಿಮೆ ಆಗಿದೆ. 10 ಸಂಪುಟಗಳಲ್ಲಿ ಇರುವ ಭಾರತ ಸಂವಿಧಾನವನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದೇನೆ. ಎಲ್ಲರೂ ಅದನ್ನು ಓದಬೇಕು. ಡಾ. ಅಂಬೇಡ್ಕರ್ ಅವರು ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನವನ್ನು ಓದಿ ನಮ್ಮ ದೇಶಕ್ಕೆ ಅಗತ್ಯವಾದ ಸಂವಿಧಾನವನ್ನು ರಚನೆ ಮಾಡಿ ನೀಡಿದ್ದಾರೆ. ನಮ್ಮದು ಶ್ರೇಷ್ಠ ಸಂವಿಧಾನ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದರು.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ನಾನು ಸ್ಥಾಪಿಸಿದ್ದು. ಏಕೆಂದರೆ ಅವರನ್ನು ಓದಿಕೊಂಡವರು ಅವರ ಮಾರ್ಗದಲ್ಲಿ ನಡೆಯಲಿ ಉದ್ದೇಶದಿಂದ. ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಅವರೇ ಸಾಟಿ. ಮತ್ತೊಬ್ಬ ಅಂಬೇಡ್ಕರ್ ಬರಲು ಸಾಧ್ಯವಿಲ್ಲ. ಆದರೆ, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಿ ಅವರ ಹಾದಿಯಲ್ಲಿ ನಡೆಯಬೇಕು ಎಂದು ಅವರು ಕರೆ ನೀಡಿದರು. ವಿವಿಗಳು ಜ್ಞಾನ ಕಣಜಗಳಾಗಬೇಕುಇದೇ ವೇಳೆ ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆ ಗುರುತುಗಳು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ವಿಶ್ವವಿದ್ಯಾನಿಲಯ ಚಿಂತನೆಗಳ ಚಿಲುಮೆ. ಕುವೆಂಪು ಅವರು ಮೈಸೂರು ವಿವಿ ಕುಲಪತಿಗಳು ಆಗಿದ್ದ ಕಾಲದಲ್ಲಿ ಸಂಧರ್ಭದಲ್ಲಿ ವಿವಿ ಅನೇಕ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಿದ್ದರು. ವಿವಿಗಳು ಸಮ ಸಮಾಜದ ನಿರ್ಮಾಣ ಮಾಡುವ ಜ್ಞಾನ ಕಣಜಗಳಾಗಿ ಬೆಳೆಯಬೇಕು ಎಂದು ತಿಳಿಸಿದರು.ಬೆಂಗಳೂರಿನಲ್ಲಿ ಆಂಧ್ರಪ್ರದೇಶದ ಮಾದರಿಯಲ್ಲಿ ಅಂಬೇಡ್ಕರ್ ಉದ್ಯಾನವನವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು 25 ಎಕರೆ ಜಾಗವನ್ನು ಗುರುತಿಸಲಾಗಿದೆ. ಇದರಲ್ಲಿ ಅಂಬೇಡ್ಕರ್ ಬಾಲ್ಯದಿಂದ ಅವರ ಕೊನೆಯವರೆಗೆ ನಡೆದುಬಂದ ಹಾದಿಯನ್ನು ಚಿತ್ರಿಸಲಾಗುವುದು ಎಂದರು.ಶಾಸಕರಾದ ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷೆ ಡಿ. ಭಾಗ್ಯಲಕ್ಷ್ಮಿ ಶ್ರೀನಿವಾಸಪ್ರಸಾದ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರಕುಮಾರ್, ಹಿರಿಯ ಪ್ರಾಧ್ಯಾಪಕ ಡಾ.ಜೆ. ಸೋಮಶೇಖರ್ ಮೊದಲಾದವರು ಇದ್ದರು.----ಕೋಟ್...ಎಲ್ಲರಿಗೂ ಸಮಾನ ಅವಕಾಶಗಳು ಸಿಗದೇ ಇದ್ದುದರಿಂದ ಅಸಮಾನತೆ ಸೃಷ್ಟಿಯಾಗಿದೆ. ವಿದ್ಯೆ ಯಾರಪ್ಪನ ಮನೆ ಆಸ್ತಿ ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೆ. ಅವಕಾಶ ಸಿಕ್ಕಾಗ ವಿದ್ವಾಂಸರಾಗುತ್ತಾರೆ, ಜ್ಞಾನಿ ಆಗುತ್ತಾರೆ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ. - ಸಿದ್ದರಾಮಯ್ಯ, ಮುಖ್ಯಮಂತ್ರಿ----ಡಾ.ಬಿ.ಆರ್. ಅಂಬೇಡ್ಕರ್ ಕೇಂದ್ರಕ್ಕೆ ಮುಖ್ಯಮಂತ್ರಿಗಳು 50 ಲಕ್ಷ ನೀಡಿದ್ದರು. ಆ ನಂತರ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಅವರು 3 ಕೋಟಿ ನೀಡಿದ್ದರು. ಈಗ ಸಾಂವಿಧಾನಿಕ ಅಧ್ಯಯನ ಪೀಠಕ್ಕೆ 10 ಕೋಟಿ ರೂ. ಅನುದಾನ ನೀಡಿದ್ದಾರೆ. ಜ್ಞಾನದರ್ಶನ ಕೇಂದ್ರದಲ್ಲಿ ಅಂಬೇಡ್ಕರ್ ಮ್ಯೂಸಿಯಂ, ಕಂಪ್ಯೂಟರ್ ತರಬೇತಿ ಕೇಂದ್ರ, ದಲಿತ ಡಾಕ್ಯುಮೆಂಟ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ. ಕೇಂದ್ರವನ್ನು ಇನ್ನೂ ಅಭಿವೃದ್ಧಿ ಪಡಿಸಲು 15 ಕೋಟಿ ಅನುದಾನ ನೀಡಬೇಕು.- ಡಾ.ಜೆ. ಸೋಮಶೇಖರ್, ಹಿರಿಯ ಪ್ರಾಧ್ಯಾಪಕ, ಡಾ.ಬಿ.ಆರ್. ಅಂಬೇಡ್ಕರ್ ಕೇಂದ್ರ-----------------eom/mys/shekar/

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ