ಸೆಸ್ಕ್ ವತಿಯಿಂದ ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆ

KannadaprabhaNewsNetwork |  
Published : Aug 16, 2025, 02:01 AM IST
17 | Kannada Prabha

ಸಾರಾಂಶ

ವಿದ್ಯುತ್ ಬಿಲ್ ಸಂಗ್ರಹಣೆಯನ್ನು ಸರಳೀಕರಿಸಲು ಪಾಯಿಂಟ್- ಆಫ್- ಸೇಲ್ (ಪಿಒಎಸ್‌) ಪಾವತಿ ಸೌಲಭ್ಯವನ್ನು ಅನುಷ್ಠಾನಗೊಳಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಉತ್ತಮ ಕೆಲಸ ಮಾಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವ ಸಲ್ಲಿಕೆ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಪಿಒಎಸ್‌ ಸೌಲಭ್ಯ ಉದ್ಘಾಟಿಸುವ ಮೂಲಕ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಿಂದ (ಸೆಸ್ಕ್‌) 79ನೇ ಸ್ವಾತಂತ್ರ್ಯ ದಿನವನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಇದೇ ವೇಳೆ ನಿಗಮ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ವಿದ್ಯುತ್‌ ಮಾರ್ಗಗಳ ನಿರ್ವಹಣಾ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಕಿರಿಯ ಎಂಜಿನಿಯರ್‌ ಗಳು, ಪವರ್‌ ಮ್ಯಾನ್‌ ಗಳು, ಕುಸುಮ್‌-ಸಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಶ್ರಮಿಸಿದ ಕಿರಿಯ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌ ಗಳು ಮತ್ತು ಹೆಚ್ಚುವರಿ ಜಿಎಸ್ಟಿ ತೆರಿಗೆಯನ್ನು ತಡೆಯುವಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ತೆರಿಗೆ ಶಾಖೆಯ ಅಧಿಕಾರಿಗಳು ಮತ್ತು ಎಂಟಿ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗೆ ಬೆಳ್ಳಿ ಪದಕ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಸೆಸ್ಕ್‌ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಆಡಳಿತ ಮತ್ತು ಮಾನವ ಸಂಪನ್ಮೂಲ ಶಾಖೆಯ ಪ್ರಧಾನ ವ್ಯವಸ್ಥಾಪಕಿ ಡಾ.ಬಿ.ಆರ್. ರೂಪಾ, ಆಂತರಿಕ ಲೆಕ್ಕ ಪರಿಶೋಧನೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಲಿಂಗರಾಜಮ್ಮ, ಸೆಸ್ಕ್ ಜಾಗೃತ ದಳದ ಇನ್ಸ್ ಪೆಕ್ಟರ್ ಗಳಾದ ರಾಮಕುಮಾರ್, ಜಯರತ್ನಾ ಮೊದಲಾದವರು ಇದ್ದರು.

----

ಬಾಕ್ಸ್...

ವಿದ್ಯುತ್‌ ಬಿಲ್‌ ಸಂಗ್ರಹಕ್ಕೆ ಪಿಒಎಸ್‌ ಸೌಲಭ್ಯ

ವಿದ್ಯುತ್ ಬಿಲ್ ಸಂಗ್ರಹಣೆಯನ್ನು ಸರಳೀಕರಿಸಲು ಪಾಯಿಂಟ್- ಆಫ್- ಸೇಲ್ (ಪಿಒಎಸ್‌) ಪಾವತಿ ಸೌಲಭ್ಯವನ್ನು ಅನುಷ್ಠಾನಗೊಳಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸೆಸ್ಕ್‌ ತನ್ನ ಪಿಒಎಸ್‌ ಯಂತ್ರದ ಮೂಲಕ ವಿದ್ಯುತ್ ಬಿಲ್ ಸಂಗ್ರಹಣೆ ಯೋಜನೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಚಾಲನೆ ನೀಡಿದರು.

ಸೆಸ್ಕ್‌ ಅನುಷ್ಠಾನಗೊಳಿಸಿರುವ ಪಿಒಎಸ್‌ ಯೋಜನೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ದೊರೆಯಲಿದೆ. ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಲು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಕ್ಯೂ-ಆರ್‌ ಕೋಡ್‌ ಹಾಗೂ ನಗದು ರೂಪದಲ್ಲಿ ವಿದ್ಯುತ್‌ ಬಿಲ್‌ ಪಾವತಿಸಬಹುದು. ಗ್ರಾಹಕರು ತಮ್ಮ ಮನೆ ಬಾಗಿಲಲ್ಲಿ ಅಥವಾ ಸೆಸ್ಕ್‌ ನಗದು ಪಾವತಿ ಕೌಂಟರ್‌ ಗಳಲ್ಲಿಯೂ ಬಿಲ್ ಪಾವತಿಸಬಹುದಾಗಿದೆ.

ಕೆನರಾ ಬ್ಯಾಂಕ್‌ನ ಸಹಕಾರದೊಂದಿಗೆ ಈ ಯೋಜನೆ ಅನುಷ್ಠಾನಕ್ಕೆ ತರಲಾಗಿದ್ದು, ಕೆನರಾ ಬ್ಯಾಂಕ್‌ ವತಿಯಿಂದ 500 ಪಿಒಎಸ್ ಯಂತ್ರಗಳನ್ನು ಸೆಸ್ಕ್‌ ಗೆ ಉಚಿತವಾಗಿ ನೀಡುವ ಜತೆಗೆ ಪಿಒಎಸ್‌ ಯಂತ್ರದ ಬಳಕೆಯ ತರಬೇತಿ ನೀಡಲಾಗಿದೆ. ಈ ಯೋಜನೆಯ ಮೂಲಕ ವಿದ್ಯುತ್ ಬಿಲ್ ಸಂಗ್ರಹವನ್ನು ಸುಲಭಗೊಳಿಸಿ, ಸೆಸ್ಕ್‌ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿಸುವುದಲ್ಲದೆ, ಡಿಜಿಟಲ್ ಇಂಡಿಯಾ ಉದ್ದೇಶದೊಂದಿಗೆ ಗ್ರಾಹಕರಿಗೆ ಬಿಲ್‌ ಪಾವತಿ ಸೌಲಭ್ಯ ಒದಗಿಸುವುದರಲ್ಲಿ ಸೆಸ್ಕ್‌ ಮಹತ್ವದ ಹೆಜ್ಜೆ ಇರಿಸಿದೆ.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಚಂದನ್ ಕುಮಾರ್, ಮೈಸೂರು ವಲಯದ ಪ್ರಧಾನ ವ್ಯವಸ್ಥಾಪಕ ಎಸ್‌. ರಾಜಶೇಖರ್‌, ಪೇ-ಸ್ವಿಫ್‌ ಸಂಸ್ಥೆಯ ಕ್ಲಸ್ಟರ್ ವ್ಯವಸ್ಥಾಪಕ ಶ್ರೀನಿವಾಸ್ ಮೂರ್ತಿ, ಸಂಪರ್ಕ ವಿಭಾಗದ ವ್ಯವಸ್ಥಾಪಕ ನರೇಶ್‌ ಬಾಬು ಇದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌