ಮಕ್ಕಳಿಗೆ ಸರಳೀಕರಿಸಿ ಪಾಠ ಮಾಡಿ

KannadaprabhaNewsNetwork |  
Published : Dec 18, 2025, 02:15 AM IST
17ಕೆಪಿಎಲ್25ಕೊಪ್ಪಳ ಜಿಲ್ಲಾ ಪಂಚಾಯತ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ದತ್ತು ಶಾಲೆ ಹಾಗೂ ಎಸ್.ಎಸ್.ಎಲ್.ಸಿ ತಾಲ್ಲೂಕು ನೋಡಲ್ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಿಗೆ ಕರೆದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದ ಸುಧಾರಣೆ ಕುರಿತ ಪ್ರಗತಿ ಪರಿಶೀಲನಾ ಸಭೆ | Kannada Prabha

ಸಾರಾಂಶ

ಮಕ್ಕಳಿಗೆ ಸರಿಯಾಗಿ ತಿಳಿಯುವ ರೀತಿಯಲ್ಲಿ ವಿಶೇಷ ಕೌಶಲ್ಯ ಉಪಯೋಗಿಸಿ ಪಾಠ ಮಾಡಿದರೆ ಅವರು ತಮ್ಮ ತರಗತಿಯಲ್ಲಿ ಆಸಕ್ತಿಯಿಂದ ಕುಳಿತು ತಾವು ಹೇಳುವ ಪಾಠ ಕಲಿಯುತ್ತಾರೆ

ಕೊಪ್ಪಳ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಕಠಿಣ ವಿಷಯಗಳನ್ನು ಸರಳೀಕರಿಸಿ ಮಕ್ಕಳಿಗೆ ಸುಲಭವಾಗಿ ತಿಳಿಯುವ ಹಾಗೇ ಪಾಠ ಬೋಧನೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.

ಅವರು ಮಂಗಳವಾರ ಕೊಪ್ಪಳ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ, ದತ್ತು ಶಾಲೆ ಹಾಗೂ ಎಸ್ಸೆಸ್ಸೆಲ್ಸಿ ತಾಲೂಕು ನೋಡಲ್ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಿಗೆ ಕರೆದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದ ಸುಧಾರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳಿಗೆ ಸರಿಯಾಗಿ ತಿಳಿಯುವ ರೀತಿಯಲ್ಲಿ ವಿಶೇಷ ಕೌಶಲ್ಯ ಉಪಯೋಗಿಸಿ ಪಾಠ ಮಾಡಿದರೆ ಅವರು ತಮ್ಮ ತರಗತಿಯಲ್ಲಿ ಆಸಕ್ತಿಯಿಂದ ಕುಳಿತು ತಾವು ಹೇಳುವ ಪಾಠ ಕಲಿಯುತ್ತಾರೆ. ನಾವು ಕಲಿಯುವ ಅಂದಿನ ದಿನಮಾನಗಳಲ್ಲಿ ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆ ತಿಳಿದು ವಿಶೇಷ ಕಾಳಜಿ ವಹಿಸಿ ಅವರಿಗೆ ಪಾಠ ಮಾಡುತ್ತಿದ್ದರು. ಗಣಿತ, ಹಳೆಗನ್ನಡ ಸೇರಿದಂತೆ ಇತರೆ ಕಠಿಣ ವಿಷಯ ಸರಳೀಕರಿಸಿ ಪಾಠ ಮಾಡಿದಾಗ ಆ ವಿಷಯ ಮಕ್ಕಳ ತಲೆಯಲ್ಲಿ ಸುಲಭವಾಗಿ ಹೋಗುತ್ತದೆ ಎಂದರು.

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ವಿಶೇಷ ಒತ್ತು ನೀಡಬೇಕು. ಕಳೆದ ಸಲದಂತೆ ಈ ಸಲ ನಮ್ಮ ಜಿಲ್ಲೆಯ ಫಲಿತಾಂಶ ಕಡಿಮೆಯಾಗಬಾರದು. ಜಿಲ್ಲೆಯಲ್ಲಿ ಈ ಹಿಂದೆ ಒಳ್ಳೆಯ ಫಲಿತಾಂಶ ಬಂದ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಬೋಧನೆ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕಲಿಕೆ ನಿರಂತರ ಪ್ರಕ್ರಿಯೆ ಇಲ್ಲಿ ಎಲ್ಲರೂ ದಿನಾಲೂ ಒಂದಿಲ್ಲ ಒಂದು ಹೊಸದನ್ನು ಕಲಿಯುತ್ತಲೆ ಇರಬೇಕು. ಶಿಕ್ಷಕರು ಅಹಂ ಬಿಟ್ಟು ಕೆಲಸ ಮಾಡಿದಾಗ ತಮ್ಮ ಗುರಿ ತಲುಪಲು ಸಾಧ್ಯವಿದೆ ಎಂದರು.

ಫಲಿತಾಂಶ ಕಡಿಮೆಯಾದ ಶಾಲೆಗಳನ್ನು ದತ್ತು ಪಡೆದು ಅವುಗಳ ಸುಧಾರಣೆಗೆ ಒತ್ತು ನೀಡಬೇಕು. ಅನುದಾನಿತ ಶಾಲೆಗಳಿಗೂ ವಿಶೇಷ ಒತ್ತು ನೀಡಬೇಕು. ಅಲ್ಲಿ ಸರಿಯಾದ ಶಿಕ್ಷಕರು ಇರುವುದಿಲ್ಲ. ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿಸುವುದರ ಜತೆಗೆ ಶಿಕ್ಷಕರು ವಿದ್ಯಾರ್ಥಿಗಳ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಮೂಲಕ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಒತ್ತು ನೀಡಬೇಕು. ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ ಹಾಗೂ ಅನಧಿಕೃತ ಗೈರಾಗುತ್ತಾರೆ ಎನ್ನುವ ದೂರುಗಳಿಗೆ. ಅವು ಮರುಕಳಿಸದಂತೆ ಎಚ್ಚರ ವಹಿಸಬೇಕು. ಕಡಿಮೆ ಫಲಿತಾಂಶ ಬಂದ ಶಾಲೆಯ ಸುಧಾರಣೆಗೆ ಏನು ಕ್ರಮ ವಹಿಸಲಾಗಿದೆ ಎಂದು ಸಂಬಂಧಿಸಿದ ಶಾಲೆಯ ಶಿಕ್ಷಕರಿಗೆ ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಎಸ್ಸೆಸ್ಸೆಲ್ಸಿಯಲ್ಲಿ ಶೂನ್ಯ ಫಲಿತಾಂಶ ಬಂದ ಶಾಲೆಗಳಿಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಚಟುವಟಿಕೆ ವೀಕ್ಷಣೆ ಮಾಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳಿಗೆ ಇನ್ನೂ ಮೂರು ತಿಂಗಳು ಮಾತ್ರ ಉಳಿದಿದ್ದು, ಎಲ್ಲ ಮುಖ್ಯೋಪಾಧ್ಯಾಯರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬೆಳಗ್ಗೆ ಮತ್ತು ಸಂಜೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಾಗ ಶಾಲೆಯ ಎಲ್ಲ ಶಿಕ್ಷಕರ ಉಪಸ್ಥಿತಿ ಬಹಳ ಮುಖ್ಯವಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೆಳಗ್ಗೆ ಹಾಗೂ ಸಂಜೆ ವಿಶೇಷ ತರಗತಿ ತೆಗೆದುಕೊಳ್ಳುವ ಮೂಲಕ ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ಒತ್ತು ನೀಡಬೇಕು. ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಈ ಸಲ ಎಲ್ಲರೂ ಒಟ್ಟಿಗೆ ಶ್ರಮಿಸೋಣ ಎಂದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯ ವಿಷಯ ಪರಿವೀಕ್ಷರು, ದತ್ತು ಶಾಲೆ ಹಾಗೂ ಎಸ್ಸೆಸ್ಸೆಲ್ಸಿ ತಾಲೂಕು ನೋಡಲ್ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಮೌಳೇಶ್ವರ ಸನ್ನಿಧಾನದಲ್ಲಿ ಪ್ರದೋಷ ಸಪ್ತರ್ಷಿ ಪೂಜೆ
ಪರಮೇಶ್ವರ್ ಸಿಎಂ ಆಗಲಿ: ಮಠಾಧೀಶರ ಒತ್ತಾಯ