ಗುಣಾತ್ಮಕ ಶಿಕ್ಷಣಕ್ಕಾಗಿ ರಾಜ್ಯಾದ್ಯಂತ ಏಕ ಕಾಲದಲ್ಲಿ ಪೋಷಕ ಶಿಕ್ಷಕರ ಮಹಾ ಸಭೆ: ಜುಬೇದಾ

KannadaprabhaNewsNetwork |  
Published : Nov 16, 2025, 02:00 AM IST
ನರಸಿಂಹರಾಜಪುರ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ನಡೆದ ಪೋಷಕ ಶಿಕ್ಷಕರ ಮಹಾ ಸಭೆ ಹಾಗೂ ಮಕ್ಕಳ ದಿನಾಚರಣೆ ಸಮಾರಂಭವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಗುಣಾತ್ಮಕ, ಹೆಚ್ಚು ಮೌಲ್ಯಯುತ ಶಿಕ್ಷಣಕ್ಕಾಗಿ ಮಕ್ಕಳ ದಿನಾಚರಣೆ ದಿನದಂದೇ ರಾಜ್ಯ ಸರ್ಕಾರ ಏಕ ಕಾಲದಲ್ಲಿ ಎಲ್ಲಾ ಶಾಲೆಗಳಲ್ಲೂ ಪೋಷಕ ಶಿಕ್ಷಕರ ಮಹಾ ಸಭೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ತಿಳಿಸಿದರು.

- ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಪೋಷಕ ಶಿಕ್ಷಕರ ಮಹಾ ಸಭೆ ಹಾಗೂ ಮಕ್ಕಳ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಗುಣಾತ್ಮಕ, ಹೆಚ್ಚು ಮೌಲ್ಯಯುತ ಶಿಕ್ಷಣಕ್ಕಾಗಿ ಮಕ್ಕಳ ದಿನಾಚರಣೆ ದಿನದಂದೇ ರಾಜ್ಯ ಸರ್ಕಾರ ಏಕ ಕಾಲದಲ್ಲಿ ಎಲ್ಲಾ ಶಾಲೆಗಳಲ್ಲೂ ಪೋಷಕ ಶಿಕ್ಷಕರ ಮಹಾ ಸಭೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ತಿಳಿಸಿದರು.

ಶುಕ್ರವಾರ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಇಲಾಖೆ, ಕೆಪಿಎಸ್ ನ ಪ್ರೌಢ ಶಾಲೆ, ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಷಕ ಶಿಕ್ಷಕರ ಮಹಾ ಸಭೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಶಾಲೆ ಎಸ್‌.ಡಿಎಂಸಿ, ಪೋಷಕರು, ಶಿಕ್ಷಕರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಸರ್ಕಾರ ಮಕ್ಕಳಿಗೆ ಉಚಿತವಾಗಿ ಯೂನಿಫಾರ್ಮ್, ಬಿಸಿಯೂಟ, ಪಠ್ಯ ಪುಸ್ತಕ, ಶೂ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಎಂಬ ಉದ್ಯೋಗ ಎಂಬ ಕಾನೂನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಮಾತನಾಡಿ, ಭಾರತ ದೇಶದ ಪ್ರಥಮ ಪ್ರಧಾನಿ ನೆಹರೂ ಅವರ ಜನ್ಮ ದಿನ ದಂದು ಅವರ ಆಶಯದಂತೆ ಕಳೆದ 61 ವರ್ಷದಿಂದ ಮಕ್ಕಳ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಶಿಕ್ಷಣದಿಂದ ಮಕ್ಕಳಲ್ಲಿ ಸೃಜನಶೀಲತೆ, ನಾಯಕತ್ವ ಗುಣ, ಉತ್ತಮ ಸಂಸ್ಕಾರ ಬೆಳೆಯಬೇಕು ಎಂದು ಶಿಕ್ಷಣ ಇಲಾಖೆಯಿಂದ ಹೊಸ ಯೋಜನೆಗಳನ್ನು ಆಗಾಗ್ಗೆ ರೂಪಿಸಿಲಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯಲಾಗಿದೆ. 35 ಮಕ್ಕಳಿಗೆ ಒಬ್ಬ ಶಿಕ್ಷಕರಿದ್ದಾರೆ. ಶಿಕ್ಷಕರ ಸಂಖ್ಯೆ ಹೆಚ್ಚಿಸಬೇಕು. ಎಲ್ಲಾ ಮೂಲಭೂತ ಸೌಕರ್ಯ ಮಾಡಿಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈಗ ಡಿಸಿಟಲ್ ಯುಗವಾಗಿದ್ದು ಕಾಲಕ್ಕೆ ತಕ್ಕ ಹಾಗೆ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ. ಉತ್ತಮ ಶಿಕ್ಷಣ ನೀಡಲು ಶಿಕ್ಷಕರ ಜೊತೆಗೆ ಪೋಷಕರು, ಎಸ್‌.ಡಿ.ಎಂ.ಸಿ ಹಾಗೂ ಜನಪ್ರತಿನಿಧಿಗಳೂ ಸಹ ಕೈ ಜೋಡಿಸಬೇಕು ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಕ್ಷ್ಮಣಶೆಟ್ಟರು ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡರು ಕರ್ನಾಟಕ ಪಬ್ಲಿಕ್ ಸ್ಕೂಲಿನ ರಂಗಮಂದಿರದ ಇಂಟರ್ ಲಾಕ್ ಹಾಕಿಸಲು ₹40 ಲಕ್ಷ ರು. ಮಂಜೂರು ಮಾಡಿದ್ದಾರೆ. ಹೊಸ ಕೊಠಡಿಗೆ ₹1.50 ಕೋಟಿ ರು. ಶೀಘ್ರದಲ್ಲೇ ಮಂಜೂರು ಮಾಡಲಿದ್ದಾರೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಶಾಲೆಗೆ ಕಳಿಸಿದ ಮಕ್ಕಳ ಬಗ್ಗೆ ಪೋಷಕರು ಗಮನ ನೀಡುತ್ತಿರಬೇಕು. ಜೊತೆಗೆ ಶಿಕ್ಷಕರು ಸಹ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಕರೆ ನೀಡಿದರು.

ಅತಿಥಿಗಳಾಗಿ ಕೆಪಿಎಸ್ ಆಡಳಿತ ಮಂಡಳಿ ಉಪಾಧ್ಯಕ್ಷ ಪುರುಷೋತ್ತಮ್, ಶಿಕ್ಷಣ ಗುಣಮಟ್ಟ ಖಾತರಿ ಸಮಿತಿ ಅಧ್ಯಕ್ಷ ಕೆ.ಎ.ಅಬೂಬಕರ್, ಪಪಂ ಸದಸ್ಯ ವಾಸೀಂ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಉಪ ಪ್ರಾಂಶುಪಾಲ ರುದ್ರಪ್ಪ, ಉಪ ತಹಸೀಲ್ದಾರ್ ವೇಣುಗೋಪಾಲ್, ಕೊಪ್ಪ ಎಪಿಎಂಸಿ ನಿರ್ದೇಶಕ ಶಿವಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಘು, ಕೆಪಿಎಸ್ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಗಂಗಮ್ಮ, ಎಸ್.ಡಿಎಂಸಿ ಸದಸ್ಯರಾದ ಸಿಗ್ಬುತುಲ್ಲಾ, ಸಲೀಂ, ಉದಯ, ದೇವೇಂದ್ರ, ಶಕುಂತಳಾ ಇದ್ದರು.

ಅತಿಥಿಗಳು ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಿರೇನಲ್ಲೂರು ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ