ಶಿವಮೊಗ್ಗ : ಸೋಲಿನ ಭೀತಿ ಎದುರಾಗೆಲ್ಲ ಕಾಂಗ್ರೆಸ್ ಪಕ್ಷ ಇವಿಎಂ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿ ಎದುರಾದಾಗ ಕಾಂಗ್ರೆಸಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಚೊಂಬಿನ ಚಿತ್ರ ಹಾಕಿ ಕಾಂಗ್ರೆಸ್‌ನವರು ಜಾಹೀರಾತು ನೀಡಿ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ ಎಂದು ಅಪಪ್ರಚಾರ ನಡೆಸಿದ್ದಾರೆ. ಜನರಿಗೆ ಆರಂಭದಿಂದಲೂ ಚೊಂಬನ್ನೇ ನೀಡುತ್ತಿರುವ ಅವರು, ಅದಕ್ಕೆ ತಕ್ಕಂತೆ ಜಾಹಿರಾತು ನೀಡುತ್ತಿದ್ದಾರೆ. ಬಡತನವನ್ನು ಪ್ರೀತಿ ಮಾಡಿದರೆ ಬಡವರನ್ನು ಬಡವರಾಗಿ ಇರುವಂತೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಉಳಿಯುತ್ತದೆ ನೋಡೋಣ ಎಂದರು.
ದೇಶದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ನಮ್ಮ ಪಕ್ಷ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಈ ಬಗ್ಗೆ ಅನುಮಾನ ಬೇಡ ಶಿವಮೊಗ್ಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಲೀಡ್‌ನಿಂದ ಬಿಜೆಪಿ ಗೆಲ್ಲಲಿದೆ. ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಇರುವ ಕಾರಣ ಶಕ್ತಿ ಹೆಚ್ಚಿದೆ. ಆ ಪಕ್ಷದ ನಾಯಕರಾದ ಕುಮಾರಸ್ವಾಮಿ ಅವರು, ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಎಲ್ಲರೂ ಸೇರಿ ಕೆಲಸ ಮಾಡುತಿದ್ದು, ನಮಗೆ ಲಾಭವಾಗಲಿದೆ ಎಂದು ಹೇಳಿದರು.
ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ಸ್ವಯಂ ಪ್ರೇರಿತರಾಗಿ ಬಂದ ಜನರ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ. ಅವರೆಲ್ಲ ನಮ್ಮ ಕುಟುಂಬದ ಬಗ್ಗೆ ನಮ್ಮ ಬಗ್ಗೆ ವಿಶ್ವಾಸವಿಟ್ಟು ಹಾರೈಸಲು ಬಂದಿದ್ದಾರೆ. ಬೂತ್ ಮಟ್ಟದಲ್ಲಿ ಮತ್ತಷ್ಟು ಸದೃಢಗೊಳಿಸಲು ಆಂತರಿಕ ಸಭೆ ನಡೆಸುತ್ತವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ನಮ್ಮಲ್ಲಿನ ಶಸ್ತ್ರಗಳನ್ನು ಹದಗೊಳಿಸಬೇಕಾಗುತ್ತದೆ. ಕಳೆದ ಬಾರಿ ಎರಡು ಕಾಲು ಲಕ್ಷ ಮತಗಳ ಅಂತರದಿಂದ ಗೆಲುವು ಸಿಕ್ಕಿತ್ತು. ಈ ಬಾರಿ ಜೆಡಿಎಸ್ ನಮ್ಮ ಜೊತೆಗಿರುವ ಹಿನ್ನೆಲೆ ಈ ಅಂತರ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ ಎಂದರು.
ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಹತ್ಯೆ ಪ್ರಕರಣ ನೋವಿನ ಸಂಗತಿ. ಚಿಕ್ಕ ವಯಸ್ಸಿನಲ್ಲಿಯೇ ಕೊಲೆ ಮಾಡುವ ಮಾನಸಿಕತೆ ಬಂದಿರುವುದು ಗಾಬರಿ ಯಾಗುತ್ತದೆ. ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಚುರುಕಾಗೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ವಾತಾವರಣ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.