ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ- ರುದ್ರಪ್ಪ ಲಮಾಣಿ

KannadaprabhaNewsNetwork |  
Published : Oct 28, 2026, 02:00 AM IST
ರುದ್ರಪ್ಪ ಲಮಾಣಿ | Kannada Prabha

ಸಾರಾಂಶ

ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಆಶಯ. ಅದಕ್ಕಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ರೈತರು ಮತ್ತು ಕಾರ್ಖಾನೆಯವರೊಂದಿಗೆ ಸತತವಾಗಿ ಸಭೆ ನಡೆಸಿ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಆಶಯ. ಅದಕ್ಕಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ರೈತರು ಮತ್ತು ಕಾರ್ಖಾನೆಯವರೊಂದಿಗೆ ಸತತವಾಗಿ ಸಭೆ ನಡೆಸಿ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿ ಚರ್ಚಿಸಲಾಗಿದೆ. ರೈತರು ಎಸ್‌ಎಪಿ ಟನ್‌ಗೆ ೧,೦೦೦ ರು. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಹಣಕಾಸಿನ ಲಭ್ಯತೆ ಸೇರಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಿ ರೈತರಿಗೆ ಅನುಕೂಲ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.

ಅ.೨೯ರಂದು ಕೇಂದ್ರದ ಸಮಿತಿ ರಾಜ್ಯಕ್ಕೆ: ಕಬ್ಬು ಹಾಗೂ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳ ಕುರಿತು ಚರ್ಚಿಸಲು ಅ. ೨೯ರಂದು ಕೇಂದ್ರ ಸರ್ಕಾರದ ಸಮಿತಿ ರಾಜ್ಯಕ್ಕೆ ಆಗಮಿಸಲಿದೆ. ಸಮಿತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಬಳಿಕ ರೈತರು, ಕಾರ್ಖಾನೆಗಳ ಸಮಸ್ಯೆ ಹಾಗೂ ಕೇಂದ್ರ ಸರ್ಕಾರದ ನಿಲುವುಗಳನ್ನು ಒಟ್ಟಾಗಿ ಪರಿಗಣಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೆಲವು ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಾರ್ಖಾನೆ ನಡೆಸಲು ಸಾಧ್ಯವಾಗುತ್ತಿಲ್ಲ, ಬಾಡಿಗೆ ಪಾವತಿಸಲು ಆಗುತ್ತಿಲ್ಲ ಸೇರಿದಂತೆ ಹಲವು ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದ್ದಾರೆ. ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಆದಷ್ಟು ಬೇಗ ಕಾರ್ಖಾನೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತೂಕದಲ್ಲಿ ಮೋಸಕ್ಕೆ ಕಡಿವಾಣ: ಕಬ್ಬು ತೂಕ ಮಾಡುವ ಸಂದರ್ಭದಲ್ಲಿ ರೈತರಿಗೆ ಮೋಸವಾಗುತ್ತಿರುವ ಆರೋಪಗಳ ಬಗ್ಗೆ ಮಾತನಾಡಿದ ಸಚಿವ ರುದ್ರಪ್ಪ ಲಮಾಣಿ, ರೈತರು ಬೆಳೆದ ಕಬ್ಬಿನಲ್ಲಿ ಎರಡು-ಮೂರು ಟನ್‌ಗಳಷ್ಟು ತೂಕದಲ್ಲಿ ವ್ಯತ್ಯಾಸವಾದರೂ ಅದು ರೈತರಿಗೆ ದೊಡ್ಡ ನಷ್ಟವಾಗಲಿದೆ. ಹೀಗಾಗಿ ತೂಕದಲ್ಲಿ ಮೋಸ ತಡೆಯಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಕಲಿ ಮತದಾನ ತಪ್ಪು: ವಿಧಾನಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ವೇಳೆ ಸಚಿವರೊಂದಿಗೆ ತೆರಳಿದ್ದ ಮಹಿಳೆಯೊಬ್ಬರು ಮತ್ತೊಬ್ಬರ ಹೆಸರಿನಲ್ಲಿ ಮತದಾನ ಮಾಡಿದ್ದಾರೆಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ನನ್ನ ಮತವನ್ನು ಮಾತ್ರ ಚಲಾಯಿಸಿದ್ದೇನೆ. ನನ್ನ ಬಳಿಯಿದ್ದ ಮಹಿಳೆಯದ್ದು ಮತ ಇರಬಹುದು ಎಂದುಕೊಂಡಿದ್ದೆ. ಪ್ರಕರಣದ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಯಾರೇ ತಪ್ಪು ಮಾಡಿದರೂ ತಪ್ಪೇ. ಅದನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರೂ ನಕಲಿ ಮತದಾನ ಮಾಡಿದ್ದಾರೆ ಎಂಬ ಆರೋಪವಿದೆ. ಈ ಕುರಿತು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪಡೆದು ಮಾತನಾಡುತ್ತೇನೆ. ವೋಟ್ ಚೋರಿ ಆಗಬಾರದು. ಚುನಾವಣೆಯಲ್ಲಿ ಎಲ್ಲರೂ ನಿಯಮ ಪಾಲಿಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈನ್ ಬಸದಿಯ ಬಾಗಿಲು ತೆರೆಸುವಂತೆ ಮನವಿ
ಲೈಂಗಿಕ ದೌರ್ಜನ್ಯ ತಡೆ ಅಗತ್ಯ: ನ್ಯಾಯಾಧೀಶ ಭರತ್