ಸಿಂಧನೂರು: ಹೋಳಿ ಹಬ್ಬದ ನಿಮಿತ್ತ ನಗರದೆಲ್ಲೆಡೆ ಬಣ್ಣದ ಓಕುಳಿಯಾಟದಲ್ಲಿ ಜನತೆ ಮಂಗಳವಾರ ಮಿಂದೆದ್ದು ಸಂಭ್ರಮಿಸಿದರು.
ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ಹೋಳಿ ಹಬ್ಬದ ನಿಮಿತ್ತ ಬಣ್ಣದಾಟ ನಗರದೆಲ್ಲೆಡೆ ಆರಂಭಗೊಂಡಿತು. ಚಿಕ್ಕ ಮಕ್ಕಳು, ಯುವತಿಯರು, ಮಹಿಳೆಯರು ಮನೆಗಳ ಮುಂದೆ ಗುಲಾಮಿ, ಹಸಿರು ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರೆ, ಯುವಕರು ಗುಂಪು ಗುಂಪಾಗಿ ಸ್ನೇಹಿತರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಮುಖ ಸೇರಿದಂತೆ ಮೈತುಂಬ ಬಣ್ಣ ಹಚ್ಚಿದರು. ಕೆಲ ಯುವಕರು ಬಣ್ಣ ಹಚ್ಚುವ ಜೊತೆಗೆ ಬಟ್ಟೆ ಹರಿದು, ತಲೆಗೆ ಮೊಟ್ಟೆ ಹೊಡೆದು, ಕೇಕೇ, ಸಿಳ್ಳೆ ಹಾಕಿ ಸಂತಸಪಟ್ಟರು.
ಮಧ್ಯಾಹ್ನ 2 ಗಂಟೆಯವರೆಗೆ ಯುವಕರು ಗುಂಪು ಗುಂಪಾಗಿ ನಗರದ ವಿವಿಧ ಓಣಿಗಳಲ್ಲಿ ಬೈಕ್‌ಗಳ ಸೈಲೆನ್ಸರ್ ಕಿತ್ತಿ ಸಂಚಾರ ನಡೆಸಿದರು. ನಂತರ ಮೈತೊಳೆದುಕೊಳ್ಳಲು ಹಳ್ಳ, ಕಾಲುವೆ, ಹೊಳೆಗಳತ್ತ ಸಾಗಿದರು. ಅವುಗಳಲ್ಲೂ ನೀರಿಲ್ಲದ ವಿಷಯ ತಿಳಿದು ಬಹುತೇಕರು ಮನೆಗಳಲ್ಲಿಯೇ ಮೈತೊಳೆದುಕೊಂಡ ದೃಶ್ಯಗಳು ಕಂಡು ಬಂದಿತು.