ಮಾರುಕಟ್ಟೆಯಲ್ಲಿ ಬೇಡಿಕೆ ತಂದ ಸಿಂದೂರ ಸೀರೆ!

KannadaprabhaNewsNetwork |  
Published : May 10, 2025, 01:07 AM IST
ನಾರಿಯರ ಮನ ಗೆದ್ದ ಸಿಂದೂರ ಸೀರೆ, ನೇಕಾರಿಗೆ ತುಂಬಿತು ಉಸಿರು! | Kannada Prabha

ಸಾರಾಂಶ

ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದರಿಂದ ದೇಶದೆಲ್ಲೆಡೆ ವಿಜಯೋತ್ಸವ ಆಚರಿಸುತ್ತಿದ್ದಾರೆ. ಆದರೆ, ಸಿಂದೂರ ಹೆಸರಿನಲ್ಲಿ ನಡೆಸಿದ ಈ ಕಾರ್ಯಾಚರಣೆ ಈಗ ಹೊಸದೊಂದು ಅಲೆಯನ್ನೇ ಸೃಷ್ಟಿಸಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ಬಕವಿ-ಬನಹಟ್ಟಿ

ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದರಿಂದ ದೇಶದೆಲ್ಲೆಡೆ ವಿಜಯೋತ್ಸವ ಆಚರಿಸುತ್ತಿದ್ದಾರೆ. ಆದರೆ, ಸಿಂದೂರ ಹೆಸರಿನಲ್ಲಿ ನಡೆಸಿದ ಈ ಕಾರ್ಯಾಚರಣೆ ಈಗ ಹೊಸದೊಂದು ಅಲೆಯನ್ನೇ ಸೃಷ್ಟಿಸಿದೆ.

ಜತೆಗೆ ಜವಳಿ ಉದ್ಯಮಿದಲ್ಲಿ ಅದರಲ್ಲೂ ಸೀರೆ ತಯಾರಿಕೆಯಲ್ಲಿ ಸಿಂದೂರ ಹೆಸರಿನಲ್ಲಿ ಸೀರೆಗಳು ಮಾರುಕಟ್ಟೆಗೆ ಹೊಸ ಉತ್ಸಾಹದೊಂದಿಗೆ ಹೆಜ್ಜೆ ಇಡುತ್ತಿದ್ದು, ಈಗ ಭಾರೀ ಬೇಡಿಕೆಯಾಗಿ ಪರಿಣಮಿಸಿದೆ. ಮೊದಲೇ ಮಾರುಕಟ್ಟೆಯಲ್ಲಿ ನೆಲೆಯಿಲ್ಲದೇ ಕಂಗಾಲಾಗಿದ್ದ ಜವಳಿ ಉದ್ಯಮಕ್ಕೆ ಇದೀಗ ಸಿಂದೂರ ಹೆಸರಿನ ಸೀರೆಗಳು ಹೊಸ ಉತ್ಸಾಹದೊಡನೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಅವಳಿ ನಗರಗಳು ಜವಳಿ ಉದ್ಯಮಕ್ಕೆ ಹೆಸರುವಾಸಿ. ಆದರೆ ಕಳೆದ 6-7 ವರ್ಷಗಳಿಂದ ನೂಲು, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸರ್ಕಾರಗಳ ನಿರಾಸಕ್ತಿ, ಕಡಿಮೆ ದರದಲ್ಲಿ ಅನ್ಯ ರಾಜ್ಯಗಳ ಸೀರೆಗಳ ದಾಂಗುಡಿಯಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡ ಜವಳಿ ಕ್ಷೇತ್ರ ಜೀವಂತ ಶವದಂತಿತ್ತು. ಆದರೀಗ ಪಾಕ್ ಕುಕೃತ್ಯಕ್ಕೆ ಪ್ರತಿಯಾಗಿ ಆರಂಭಗೊಂಡ ಸಿಂದೂರ ಕಾರ್ಯಾಚರಣೆ ಸಮರವಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ನೇಕಾರರು ಸಿಂದೂರ ಹೆಸರಡಿ ಉತ್ತಮ ವಿನ್ಯಾಸ, ಗುಣಮಟ್ಟದ ಸೀರೆಗಳ ನೇಯ್ಗೆಗೆ ಮುಂದಾಗಿದೆ. ಜತೆಗೆ ಈ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿರುವುದು ಬಸವಳಿದಿದ್ದ ನೇಕಾರಿಕೆಗೆ ಆಮ್ಲಜನಕ ಸಿಕ್ಕಂತಾಗಿದೆ.ಕೇವಲ ಎರಡೇ ದಿನಗಳಲ್ಲಿ ಕುಂಕುಮ ಬಣ್ಣದ ಸೀರೆಗಳು ಹತ್ತಾರು ವಿನ್ಯಾಸಗಳೊಡನೆ ವಿವಿಧ ನಕ್ಷೆಗಳಡಿ ಸಿಂದೂರ ಹೆಸರಲ್ಲಿ ಉತ್ಪಾದನೆಗೆ ಸಜ್ಜಾಗಿದ್ದು, ಬೇಡಿಕೆ ಹೆಚ್ಚಿರುವ ಕಾರಣ ಮಾರುಕಟ್ಟೆಗೆ ಲಗ್ಗೆಯಿಡಲು ತವಕದಲ್ಲಿವೆ. ₹೬೦೦ ರಿಂದ ₹೮೦೦ ಮೌಲ್ಯದ ಉತ್ಕೃಷ್ಠ ಗುಣಮಟ್ಟ ಮತ್ತು ವಿವಿಧ ವಿನ್ಯಾಸಗಳ ಸೀರೆಗಳು ಮಾರುಕಟ್ಟೆಯಲ್ಲಿ ವನಿತೆಯರ ಮನ ಗೆದ್ದಿದ್ದು, ಸೀರೆಗಳಿಗೆ ಬೇಡಿಕೆ ಹೆಚ್ಚಿಸಿದೆ.

ಹತ್ತಾರು ವಿನ್ಯಾಸಗಳಲ್ಲಿ ದೇಶಾಭಿಮಾನ ಹಾಗೂ ಕುಂಕುಮ ವರ್ಣಗಳ ಈ ಸೀರೆಗಳಿಗೆ ಸಿಂದೂರ ಸೀರೆ ಎಂದು ಕರೆಯಲಾಗುತ್ತಿದೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ರಾಜ್ಯಾದ್ಯಂತ ಮಾರುಕಟ್ಟೆಗಳಿಂದ ಬೇಡಿಕೆ ಬಂದಿದ್ದು, ಅಲ್ಲಿಗೆ ಪೂರೈಕೆಯಾಗಲು ಸನ್ನದ್ಧವಾಗಿದೆ. ಗುಣಮಟ್ಟದೊಡನೆ ಹೊಸ ವಿನ್ಯಾಸದಲ್ಲಿ ಬಂದಿರುವ ಕಾರಣ ಅಲ್ಪ ಪ್ರಮಾಣದಲ್ಲಿ ಸೀರೆಗಳು ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಸೀರೆಗಳ ಸಂಗ್ರಹ ಮಾಡಿಕೊಂಡು ರಫ್ತು ಮಾಡಲಾಗುವುದೆಂದು ಉದ್ಯಮಿ ರವಿ ಕರ್ಲಟ್ಟಿ ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ ಆರೇಳು ವರ್ಷಗಳಿಂದ ಇಳಿಕೆ ಕಂಡಿದ್ದ ಜವಳಿ ಉದ್ಯಮಕ್ಕೆ ಹೊಸ ಬೆಳಕು ಕಂಡಂತಾಗಿದೆ. ನೇಕಾರಿಗೆ ಬಲ ತುಂಬಿ, ಉದ್ಯಮ ಮತ್ತೆ ಸುವರ್ಣ ಯುಗದತ್ತ ಸಾಗುವ ಆಶಾಭಾವನೆ ಬಂದಿದೆ ಎಂದು ಜಯಪ್ರಕಾಶ ಸೊಲ್ಲಾಪುರ, ರವಿ ದೇಸಾಯಿ, ಪ್ರಶಾಂತ ಪಾಲಭಾಂವಿ, ವಿನೋದ ಸಿಂದಗಿ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್