ಧಾರವಾಡ: ಅಪ್ಪ ಅಂದರೆ ಆಕಾಶ. ಅಪ್ಪ ಅಂದರೆ ಅನಂತ. ಅದರಲ್ಲೂ ಬಹುತೇಕ ಹೆಣ್ಣುಮಕ್ಕಳಿಗೆ ಅಪ್ಪ ಅಂದರೆ ತೀರಾ ಅಕ್ಕರೆ-ಸಕ್ಕರೆ. ಆದರೆ, ಈ ಒಂದೂವರೆ ವರ್ಷದ ಹೆಣ್ಣು ಮಗುವಿಗೆ ಅಪ್ಪನ ಮೇಲಿನ ಪ್ರೀತಿಯ ಮಾತುಗಳೆಲ್ಲವು ಸುಳ್ಳಾಗಿದೆ. ಈ ಹೆಣ್ಣು ಮಗುವಿನ ಪಾಲಿಗೆ ಅಪ್ಪನೇ ಖಳನಾಯಕನಾಗಿದ್ದು, ಆತನ ಕುಡಿತದ ವ್ಯಸನದಿಂದ ಮಗುವಿನ ಜೀವವೇ ಹೋಗಿದೆ.
ತಾಲೂಕಿನ ಯಾದವಾಡ ಗ್ರಾಮದ ಶಂಭುಲಿಂಗಯ್ಯ ಶಾಪುರಮಠ (35) ತಾನೇ ಹೆತ್ತ ಮಗುವನ್ನು ಗೋಡೆಗೆ ಬಡಿದು ಅಮಾನವೀಯವಾಗಿ ಕೊಲೆ ಮಾಡಿದ ಪಾಪಿ ತಂದೆ.ಗ್ರಾಮದಲ್ಲಿ ಶಂಭುಲಿಂಗಯ್ಯ ತನ್ನ ಪತ್ನಿ ಸವಿತಾ ಹಾಗೂ ಒಂದೂವರೆ ವರ್ಷದ ಮಗಳು ಶ್ರೇಯಾಳೊಂದಿಗೆ ವಾಸವಾಗಿದ್ದ. ಧಾರವಾಡದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆತ ನಿತ್ಯ ಕುಡಿದು ಬಂದು ಗಲಾಟೆ ಮಾಡುವುದು, ಈ ವೇಳೆ ಪತ್ನಿ, ಮಗಳು, ತಾಯಿ, ತಂದೆಯ ಮೇಲೂ ಹಲ್ಲೆ ಮಾಡುತ್ತಿದ್ದನಂತೆ.
ಬುಧವಾರವೂ ಮನೆಯಲ್ಲಿ ವಿನಾಕಾರಣ ಜಗಳ ಶುರು ಮಾಡಿಕೊಂಡ ಶಂಭುಲಿಂಗಯ್ಯ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಮಗಳು ಶ್ರೇಯಾ ಅಳಲು ಶುರು ಮಾಡಿದ್ದಾಳೆ. ಎಷ್ಟೇ ರಮಿಸಿದರೂ ಮಗು ಸುಮ್ಮನಾಗಿಲ್ಲ. ಇದರಿಂದ ಸಿಟ್ಟಿಗೆದ್ದ ಶಂಭುಲಿಂಗಯ್ಯ ಮಗುವಿನ ಕಾಲುಗಳನ್ನು ಹಿಡಿದು ಗೋಡೆಗೆ ಬಡಿದಿದ್ದಾನೆ. ಇದರಿಂದ ಮಗು ತೀವ್ರವಾಗಿ ಗಾಯಗೊಂಡಿದೆ. ಕೂಡಲೇ ಸ್ಥಳೀಯರು ಮಗುವನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಶ್ರೇಯಾ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ.ಗ್ರಾಮದ ಹೊರಭಾಗದಲ್ಲಿರುವ ಮನೆಯಲ್ಲಿ ವಾಸವಾಗಿದ್ದ ಶಂಭುಲಿಂಗಯ್ಯ ಮತ್ತು ಸವಿತಾಗೆ ನಾಲ್ಕು ವರ್ಷಗಳ ಹಿಂದಷ್ಟೇ ಮದುವೆಯಾಗಿತ್ತು. ಮೊದಲನೆಯದ್ದು ಗಂಡು ಮಗು. ಅದಕ್ಕೆ ಈಗ ಮೂರು ವರ್ಷ. ಎರಡನೇ ಮಗು ಶ್ರೇಯಾಗೆ ಒಂದೂವರೆ ವರ್ಷ. ನಿತ್ಯ ಕುಡಿದು ಗಲಾಟೆ ಮಾಡುತ್ತಿರುವ ಕಾರಣಕ್ಕೆ ಇತ್ತೀಚೆಗೆ ಶಂಭುಲಿಂಗಯ್ಯನ ತಂದೆ-ತಾಯಿ ತಮ್ಮದೇ ಮನೆಯ ಪಕ್ಕದಲ್ಲಿರುವ ಸಣ್ಣ ಮನೆಯಲ್ಲಿ ಪ್ರತ್ಯೇಕವಾಗಿ ಇರುತ್ತಿದ್ದರು.
ಯಾವಾಗ ತಂದೆ-ತಾಯಿ ಪ್ರತ್ಯೇಕವಾಗಿ ಉಳಿದರೋ ಶಂಭುಲಿಂಗಯ್ಯನಿಗೆ ಮತ್ತಷ್ಟು ಸ್ವತಂತ್ರ ಸಿಕ್ಕಿತು. ಬುಧವಾರ ಮಧ್ಯರಾತ್ರಿ ಮನೆಯಲ್ಲಿ ಜೋರು ಗಲಾಟೆಯಾಗಿದೆ. ಇದೆಲ್ಲ ನಿತ್ಯವೂ ಇದ್ದಿದ್ದೇ ಎಂದುಕೊಂಡ ಸ್ಥಳೀಯರು ಅಷ್ಟಾಗಿ ಗಮನ ಹರಿಸಿಲ್ಲ. ಪಕ್ಕದಲ್ಲೇ ಇದ್ದ ಈತನ ತಂದೆ-ತಾಯಿ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ. ಮಗುವನ್ನು ಗೋಡೆಗೆ ಬಡಿದ ಬಳಿಕ ಒಳ ಪೆಟ್ಟಾಗಿದ್ದರಿಂದ ಮಗುವಿನ ತಾಯಿ ಸವಿತಾ ಸಹ ಗಂಭೀರವಾಗಿ ಪರಿಗಣಿಸರಲಿಲ್ಲ. ಆದರೆ, ಮರುದಿನ ನೋವು ಉಲ್ಬಣಗೊಂಡಾಗ ಮಗು ತೊಂದರೆ ಅನುಭವಿಸಿದೆ. ಆಗ ಅಕ್ಕಪಕ್ಕದವರು ಸೇರಿ, ಸ್ಥಿತಿ ಅರಿತು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವಿಧಿಯಾಟದ ಮುಂದೆ ಮಗು ಬದುಕಿ ಉಳಿಯಲೇ ಇಲ್ಲ. ಮಗುವಿನ ತಾಯಿ, ಅಜ್ಜ-ಅಜ್ಜಿ ದುಃಖದ ಮಡುವಿನಲ್ಲಿದ್ದರು. ಘಟನೆಯ ಮಾಹಿತಿ ಅರಿತು ಕೂಡಲೇ ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಶಂಭುಲಿಂಗಯ್ಯನನ್ನು ಬಂಧಿಸಿದ್ದಾರೆ.ಕುಡಿತದ ದಾಸನಾದರೆ ಏನೆಲ್ಲ ಅನಾಹುತ ಸಂಭವಿಸುತ್ತದೆ ಎನ್ನುವುದಕ್ಕೆ ಈ ಪ್ರಕರಣ ಒಂದು ಉದಾಹರಣೆ. ಒಟ್ಟಿನಲ್ಲಿ ಪ್ರೀತಿ ತೋರಬೇಕಾದ ತಂದೆಯೇ ಸಿಟ್ಟಿನಲ್ಲಿ ಮಗುವನ್ನು ಕೊಂದು ಹಾಕಿರುವುದು ವಿಪರ್ಯಾಸವೇ ಸರಿ.