- ಆರಗ, ಪ್ರೀತಂ ಗೌಡಗೆ ವಾಜಪೇಯಿ ಅಭಿಮಾನಿ ಬಳಗ, ಹಿರಿಯ ಕಾರ್ಯಕರ್ತರ ಮನವಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಗುಂಪುಗಾರಿಕೆಯಿಂದ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯಾಗಿದೆ. ತಕ್ಷಣವೇ ಪಕ್ಷದಲ್ಲಿ ಬೇರುಬಿಟ್ಟ ಗುಂಪುಗಾರಿಕೆಗೆ ಅಂತ್ಯ ಹಾಡಿ, ಪಕ್ಷವನ್ನು ಹಳೆಯ ಲಯಕ್ಕೆ ತರುವಂತೆ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಪದಾಧಿಕಾರಿಗಳು, ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರಿಂದ ಜಿಲ್ಲಾ ಕೋರ್ ಕಮಿಟಿ ಸಭೆಗೆ ಆಗಮಿಸಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರಿಗೆ ಮನವಿ ಅರ್ಪಿಸಲಾಯಿತು.ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಉಭಯ ನಾಯಕರ ಮೂಲಕ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಪಿ. ಕೃಷ್ಣಮೂರ್ತಿ ಪವಾರ್, ಗೌರವಾಧ್ಯಕ್ಷ ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಲಿಂಗರಾಜ ಇತರರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಕಾರ್ಯಕರ್ತರಿಗೆ ಆಗುತ್ತಿರುವ ನೋವಿನ ಬಗ್ಗೆ ಹೇಳಿಕೊಂಡರು.
ಪಕ್ಷದ ರಾಜ್ಯ ನಾಯಕರು, ರಾಷ್ಟ್ರೀಯ ವರಿಷ್ಠರು ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ಗುಂಪುಗಾರಿಕೆ ಮಾಡಿ, ಪಕ್ಷ ದುರ್ಬಲಗೊಳಿಸುತ್ತಿರುವವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಮೊದಲು ಶಿಸ್ತು ಕ್ರಮ ಕೈಗೊಳ್ಳಬೇಕು. ಸದ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿಯವರು ಸಾವಿರಾರು ಸಂಖ್ಯೆ ಮುಖಂಡರು, ಕಾರ್ಯಕರ್ತರ ಪಡೆಯೇ ಪಕ್ಷಕ್ಕೆ ಇದೆ. ಅಂತಹವರಿಗೆ ಗುರುತಿಸಿ, ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಆರಗ ಜ್ಞಾನೇಂದ್ರ, ಪ್ರೀತಂ ಗೌಡ, ದಾವಣಗೆರೆ ಜಿಲ್ಲೆಯ ಕುರಿತಂತೆ ನೀವು ಸಲ್ಲಿಸಿದ ಮನವಿಯನ್ನು ವರಿಷ್ಠರ ಗಮನಕ್ಕೆ ತರುತ್ತೇವೆ. ಇನ್ನು ಸ್ವಲ್ಪ ದಿನ ಕಾಯುವಂತೆ ಪ್ರತಿಕ್ರಿಯಿಸಿದರು.
- - -