ಕನ್ನಡಪ್ರಭ ವಾರ್ತೆ ಸರಗೂರುತಾಲೂಕಿನ ಸಾಗರೆ ಮಾರಮ್ಮನವರ ಜಾತ್ರೆ ಹಾಗೂ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.ಸಾಗರೆ ಮಾರಮ್ಮ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಮದುವನ ಗಿತ್ತಿಯಂತೆ ಸಿಂಗರಿಸಲಾಗಿತ್ತು. ಇಡೀ ಸಾಗರೆ ಗ್ರಾಮವು ವಿದ್ಯುತ್ ದೀಪಗಳಿಂದ ಗಮಗಮಿಸುತಿತ್ತು.ಬೆಳಗ್ಗೆ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಪುಣ್ಯಹ, ಗಣಪತಿ ಪೂಜೆ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿತು. ಕೊಂಡಕ್ಕೆ ಕಗ್ಗಲಿ ಸೌದೆಯನ್ನು ಸಂಪ್ರದಾಯದಂತೆ ಸಾಗರೆ ಪುಟ್ಟೇಗೌಡರ (ಸಕಲೇಶ) ಇವರ ಮನೆಯಿಂದ 12 ಎತ್ತಿನ ಗಾಡಿಗಳಲ್ಲಿ ಸೌದೆ ತುಂಬಿ ಪೂಜೆ ಸಲ್ಲಿಸಿ ಇಲ್ಲಿಂದ ವಾದ್ಯಗೋಷ್ಠಿ, ನಂದಿಕಂಬ, ಸತ್ತಿಗೆ ಇನ್ನಿತರ ವಾದ್ಯಗೋಷ್ಠಿ ಯೊಂದಿಗೆ ಇಲ್ಲಿನ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಅಮ್ಮನವರ ಸನ್ನಿಧಾನಕ್ಕೆ ತಂದು ಹಾಕಿರುತ್ತಾರೆ. ನಂತರ ಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಕೊಂಡ ಹಚ್ಚಲಾಯಿತು.ಮಧ್ಯಾಹ್ನ 12ಕ್ಕೆ ಕಪಿಲಾ ನದಿಯಲ್ಲಿ ಗಂಗೆ ಪೂಜೆ ಸಲ್ಲಿಸಿ ಅಮ್ಮನವರ ವಿಗ್ರಹ ಹಾಗೂ ಮಡೆ ಅಳಗೆ ಅನ್ನ ತಂದು ಅಮ್ಮನವರ ಸನ್ನಿದಿಗೆ ತರುತ್ತಾರೆ, ಪೂಜೆ ಸಲ್ಲಿಸಿದ ನಂತರ ಕೊಂಡದ ಸುತ್ತಾ ಮಡೆ ಅನ್ನ ಇಟ್ಟು ಪೂಜೆ ಮಾಡಲಾಯಿತು. ಮಧ್ಯಾಹ್ನ 1.30ಕ್ಕೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವಾದ್ಯಗೋಷ್ಠಿ ಯೊಂದಿಗೆ ತೆರಳಿ ಅಮ್ಮನವರಿಗೆ ಅಲಂಕಾರ ಮಾಡಲು ಹೂವು, ಹೊಂಬಾಳೆ ತೆಗೆದುಕೊಂಡು ಬಂದು ಸಮರ್ಪಿಸಿದರು.ಮಧ್ಯಾಹ್ನ 2ಕ್ಕೆ ಅಮ್ಮನವರ ಸನ್ನಿಧಿಯಿಂದ ಮಂಗಳ ವಾದ್ಯ, ಸತ್ತಿಗೆ, ನಂದಿ ಕಂಬ ಇನ್ನಿತರ ಕಲಾ ತಂಡದೊಂದಿಗೆ ಮೆರವಣಿಗೆಯಲ್ಲಿ ಹೊರಟು ಸಾಗರೆ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಅರ್ಚಕರ ಮನೆಯಿಂದ ಅಮ್ಮನವರ ಸನ್ನಿಧಿಗೆ ಮಡೆ ಅನ್ನ ತಂದು ನಂತರ ಅರಕೆ ಹೊತ್ತ ನೂರಾರು ಭಕ್ತರು ಕಪಿಲಾ ನದಿಯಲ್ಲಿ ಸ್ನಾನಮಾಡಿಕೊಂಡು ಬಂದು ನೂರಾರು ಭಕ್ತರು ಪುರುಷರು, ಮಹಿಳೆಯ ರೆನ್ನದೆ ಕೊಂಡವನ್ನು ಹಾಯ್ದು ಹರಕೆ ತೀರಿಸಿದರು.ದೇವಾಲಯದಲ್ಲಿ 4.45 ಕ್ಕೆ ಮಾರಮ್ಮ ನವರ ಮುಂದೆ ಎಳನೀರಿನಲ್ಲಿ ಹಸಿ ಬಾಳೆ ನಾರು ಹಾಕಿ ದೀಪ ಹಚ್ಚಲಾಯಿತು. ಈ ಜ್ಯೋತಿಯನ್ನು ನೋಡಲು ರಾಜ್ಯದ ನಾನಾ ಕಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.