ಲೀಡ್‌ ಗ್ರಾಮಾಂತರಕ್ಕೆ 3.37 ಕೋಟಿ ರು. ಅಭಿವೃದ್ಧಿ ಕಾಮಗಾರಿಗೆ ಚಾಲನೆ

KannadaprabhaNewsNetwork |  
Published : Sep 08, 2026, 01:15 AM IST
53 | Kannada Prabha

ಸಾರಾಂಶ

ಸಿಂಗರಮಾರನಹಳ್ಳಿಯ ಕೆರೆ ತುಂಬುವ ಬೇಡಿಕೆ ಹಲವು ವರ್ಷಗಳಿಂದ ಇತ್ತು.

- ಬಿಳಿಕೆರೆ ವ್ಯಾಪ್ತಿಯಲ್ಲಿ ಶಾಸಕ ಹರೀಶ್‌ಗೌಡರಿಂದ ಉದ್ಘಾಟನೆ

-----------ಕನ್ನಡಪ್ರಭ ವಾರ್ತೆ ಹುಣಸೂರುಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಒಟ್ಟು 3.37 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಡಿ. ಹರೀಶ್ ಗೌಡ ಗುದ್ದಲಿಪೂಜೆ ನೆರವೇರಿಸಿದರು.ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯ ಸಿಂಗರಮಾರನಹಳ್ಳಿ, ಯಲಚನಹಳ್ಳಿ, ಅಸ್ವಾಳು, ದೇವಗಳ್ಳಿ, ಬಸವನಹಳ್ಳಿ, ಹನುಮಂತಪುರ ಗ್ರಾಮಗಳಲ್ಲಿ ಸೋಮವಾರ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಈ ವೇಳೆ ಸಿಂಗರಮಾರನಹಳ್ಳಿಯಲ್ಲಿ ಮಾತನಾಡಿ, ಸಿಂಗರಮಾರನಹಳ್ಳಿಯ ಕೆರೆ ತುಂಬುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಗ್ರಾಮಸ್ಥರು ಹಲವು ಬಾರಿ ನನ್ನಲ್ಲಿ ಕೆರೆ ತುಂಬಿಸಲು ಕ್ರಮವಹಿಸಲು ಕೋರಿದ್ದರು. ಇದೀಗ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 85 ಲಕ್ಷ ರೂ.ಗಳ ವೆಚ್ಚದಡಿ ಕೆರೆ ತುಂಬಿಸಲು ಪೈಪ್ಲೈನ್ ಅಳವಡಿಸಲು ಕ್ರಮವಹಿಸಲಾಗಿದೆ ಎಂದರು.

ಅಲ್ಲದೇ 40 ಲಕ್ಷ ರೂ. ವೆಚ್ಚದಡಿ ಸಿಸಿ ರಸ್ತೆ, 25 ಲಕ್ಷ ರೂ.ಗಳ ವೆಚ್ಚದಡಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಅಸ್ವಾಳು ಗ್ರಾಮದಲ್ಲಿ 40ಲಕ್ಷ ರೂ.ಗಳ ವೆಚ್ಚದಡಿ ಸಿಸಿ ರಸ್ತೆ, ಬಸವನಹಳ್ಳಿಯಲ್ಲಿ 40 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ, ಯಲಚನಹಳ್ಳಿಯಲ್ಲಿ 40 ಲಕ್ಷ ರೂ.ಗಳ ವೆಚ್ಚದಲ್ಲಿ ಅಂಬೇಡ್ಕರ್ ಭವನ, ಮತ್ತು 15 ಲಕ್ಷ ರೂ.ಗಳ ವೆಚ್ಚದಡಿ ಬಸ್ ನಿಲ್ದಾಣ, ದೇವಗಳ್ಳಿಯಲ್ಲಿ 7 ಲಕ್ಷ ರೂ.ವೆಚ್ಚದಡಿ ಶುದ್ಧ ಕುಡಿಯುವ ನೀರಿನ ಘಟಕ, ಹನುಮಂತಪುರದಲ್ಲಿ 45 ಲಕ್ಷ ರೂ.ವೆಚ್ಚದಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಸಮುದಾಯ ಭವನವನ್ನು ನಿರ್ಮಿಸಿಕೊಳ್ಳಲು ಆದ್ಯತೆ ನೀಡಬೇಕು. ಭವನಗಳು ನಿರ್ಮಾಣ ಮಾಡಿ ಅವನ್ನು ಹಾಗೇ ಬಿಡುವುದಲ್ಲ, ಸಮುದಾಯ ಕಾರ್ಯಕ್ರಮಗಳಿಗೆ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು. ನೀರನ್ನು ಮಿತವಾಗಿ ಬಳಸಿ:ಈ ಬಾರಿ ಮಳೆ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ನೀರಿನ ಅಭಾವ ಆಗಲಿದೆ. ಬೆಳೆಗಳನ್ನು ಬಿತ್ತನೆ ಮಾಡುವಾಗ ನೀರಿನ ಮಟ್ಟವನ್ನು ಅರಿತು ಬಿತ್ತನೆ ಮಾಡಿ. ಈಗಾಗಲೇ ಎರಡು ಬಾರಿ ತಾಲ್ಲೂಕಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ರೂ. 34 ಕೋಟಿ ಬೆಳೆ ನಷ್ಟವಾಗಿದೆ ಎಂಬ ವರದಿ ಸಲ್ಲಿಸಿದ್ದಾರೆ. ಈಗಾಗಲೇ ಕೆರೆಗಳಲ್ಲಿ ಶೇಖರಣೆಯಾಗಿರುವ ನೀರನ್ನು ಮುಂದಿನ ಬೇಸಿಗೆ ಕಾಲಕ್ಕೆ ಜನಜಾನುವಾರುಗಳಿಗೆ ಅನುಕೂಲವಾಗುವಂತೆ ಎಚ್ಚರಿಕೆ ವಹಿಸಿ ಮಿತವಾಗಿ ಬಳಸಬೇಕೆಂದು ಸಲಹೆ ನೀಡಿದರು.ಇದೇ ವೇಳೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ನಿವೇಶನ ಕೊಡುಗೆ ನೀಡಿದ ದೇವಗಳ್ಳಿ ಗ್ರಾಮದ ನಿವಾಸಿ ನಾಗರಾಜ ಅರಸು ಅವರನ್ನು ಗ್ರಾಮಸ್ಥರ ಪರವಾಗಿ ಶಾಸಕರು ಸಾರ್ವಜನಿಕ ಸಭೆಯಲ್ಲಿ ಗೌರವಿಸಿ ತಾಲೂಕು ಆಡಳಿತದ ಪರವಾಗಿ ಕೃತಜ್ಞತೆ ಸಲ್ಲಿಸಿದರು.ಜಿಪಂ ಮಾಜಿ ಸದಸ್ಯ ಎಂ.ಬಿ. ಸುರೇಂದ್ರ, ತಾಪಂ ಮಾಜಿ ಸದಸ್ಯ ಪ್ರಭಾಕರ್, ಜೆಡಿಎಸ್ ಮುಖಂಡರಾದ ಅಸ್ವಾಳ ಕೆಂಪೇಗೌಡ, ಸತೀಶ್ ಪಾಪಣ್ಣ, ಗಾಗೇನಹಳ್ಳಿ ರಾಜೇಶ್, ಗ್ರಾಮದ ಗ್ರಾ.ಪಂ.ಮಾಜಿ ಅದ್ಯಕ್ಷ ದೇವರಾಜ್, ಸದಸ್ಯರಾದ ಅಂಕೇಗೌಡ, ಕುಮಾರ್, ವೆಂಕಟೇಶ್, ಮುಖಂಡರಾದ ಕುಟ್ಟವಾಡಿ ಎಪಿಎಂಸಿ ಮಾಜಿ ನಿರ್ದೇಶಕ ರವೀಂದ್ರ, ನಿರ್ಮಿತಿ ಕೇಂದ್ರದ ಅಧಿಕಾರಿ ನಿರಂಜನ್ ಪ್ರಸಾದ್, ಪಿಡಿಓ ಎಂ. ಮಂಜುಳ, ಮುಖಂಡರು, ಕಾರ್ಯಕರ್ತರು ಇದ್ದರು. ಪಿಡಿಒಗೆ ತರಾಟೆ: ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಗ್ರಾಪಂ ಸಹಕರಿಸುತ್ತಿಲ್ಲವೆಂದು ಗ್ರಾಮಸ್ಥರು ದೂರಿದಾಗ ಅನುದಾನ ಬರುತ್ತಿಲ್ಲ, ನಾವೇನು ಮಾಡೋಣ ಪಿಡಿಒ ಮಂಜುಳಾ ಉತ್ತರ ನೀಡಿದ್ದು, ಶಾಸಕ ಹರೀಶ್ ಗೌಡ ಅವರನ್ನು ಕೆರಳಿಸಿತು. ಶಾಸಕರಾದ ನಮಗೂ ಅನುದಾನ ಬರುತ್ತಿಲ್ಲ, ಆದರೆ ಸಾರ್ವಜನಿಕ ಸೇವೆಗಾಗಿ ಇರುವ ನಾವು ಇಂತಹ ಮಾತುಗಳನ್ನು ಹೇಳುವುದು ತರವಲ್ಲ, ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದು ತರಾಟೆಗೆ ತಗೆದುಕೊಂಡು, ಸ್ಥಳದಲ್ಲೇ ಜಿಪಂ ಸಿಇಒ ಯುಕೇಶ್ ಕುಮಾರ್ರಿಗೆ ಫೋನಾಯಿಸಿ ಪರಿಸ್ಥಿತಿಯನ್ನು ಅರುಹಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಲು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳು ಧರ್ಮ-ಸಂಸ್ಕಾರದಿಂದ ದೂರ: ಎಲೆರಾಂಪುರ ಶ್ರೀ
ಗುತ್ತಿಗೆದಾರರ ಸಂಘಕ್ಕೆ ಕಾಟಿಹಳ್ಳಿ ಕರಿಯಪ್ಪ ಅಧ್ಯಕ್ಷ