ಹೂವಿನಹಡಗಲಿ: ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನ ನೀರಿನ ಸಂಗ್ರಹಣಾ ಮಟ್ಟವನ್ನು 506.80 ಮೀಟರ್‌ನಿಂದ 507.50 ಮೀಟರ್ ವರೆಗೂ ಸಾಮರ್ಥ್ಯ ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದ ಬ್ಯಾರೇಜ್‌ನಲ್ಲಿ 2.26 ಟಿಎಂಸಿ ನೀರು ಸಂಗ್ರಹವಾಗುತ್ತಿದೆ.
ಈ ಕುರಿತು 2024ರ ಜೂನ್ 25ರಂದು ಗದಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿದಂತೆ, ಬ್ಯಾರೇಜಿನ ಹಿನ್ನೀರಿನಿಂದ ಸಂಗ್ರಹವಾಗುವ ನೀರಿನಿಂದ, ಗದಗ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಅವಲಂಬಿತವಾಗಿರುವ, ಮುಂಡರಗಿ ಪಟ್ಟಣ, ಮುಂಡರಗಿ-ಗದಗ ಮಾರ್ಗದಲ್ಲಿ ಬರುವ 16 ಗ್ರಾಮಗಳು ಹಾಗೂ ಗದಗ-ಬೆಟಗೇರಿ ಅವಳಿ ನಗರ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕೆ ಸರಬರಾಜು ಮಾಡಲಾಗುತ್ತಿದ್ದು, ಪ್ರಸಕ್ತ ಬೇಸಿಗೆಯಲ್ಲಿ ಗದಗ ಜಿಲ್ಲೆ ಹಾಗೂ ವಿಜಯನಗರ ಜಿಲ್ಲೆಯ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ, ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದ್ದು, ಜನ ನೀರಿನ ಕೊರತೆಯ ಸಮಸ್ಯೆಯನ್ನು ಎದುರಿಸಿರುತ್ತಾರೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ, ನಿರ್ಮಾಣ ಮಾಡಿರುವ ಬ್ಯಾರೇಜಿನ ನೀರು ಸಂಗ್ರಹಣಾ ಮಟ್ಟವನ್ನು 506.80 ಮೀಟರ್‌ನಿಂದ 507.50 ಮೀಟರ್ ವರೆಗೆ ಹೆಚ್ಚಿಸಿದಲ್ಲಿ ಬ್ಯಾರೇಜಿನಲ್ಲಿ 2.26 ಟಿಎಂಸಿ ನೀರು ಸಂಗ್ರಹವಾಗಲಿದೆ. ಬ್ಯಾರೇಜಿನ ಪೂರ್ಣ ಸಂಗ್ರಹಣಾ ಸಾಮರ್ಥ್ಯದ ಒಟ್ಟು 3.12 ಟಿಎಂಸಿ ಹಿನ್ನೀರು ಮುಳುಗಡೆ ಪ್ರದೇಶಗಳಾದ, ಹಮ್ಮಿಗಿ, ಬಿದರಹಳ್ಳಿ ಮತ್ತು ಗುಮ್ಮಗೋಳ ಗ್ರಾಮಗಳಡಿ ಮುಳುಗಡೆಯಾದ, ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸಂತ್ರಸ್ತರಿಗೆ ಪರಿಹಾರವನ್ನು ವಿತರಿಸಲಾಗಿರುತ್ತದೆ. ಅದರಂತೆ, ಬ್ಯಾರೇಜಿನ ಹಿನ್ನೀರು ಮಟ್ಟವನ್ನು 507.50 ಮೀಟರ್‌ಗೆ ಹಂತ- ಹಂತವಾಗಿ ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿಯ, ಬ್ಯಾರೇಜಿನ ನೀರಿನ ಸಂಗ್ರಹಣಾ ಮಟ್ಟವನ್ನು ಹೆಚ್ಚಿಸಿದಲ್ಲಿ, ಮುಂದಿನ ದಿನಮಾನದ ಬೇಸಿಗೆ ಕಾಲದಲ್ಲಿ ಗದಗ ಜಿಲ್ಲೆಯ ಮುಂಡರಗಿ ಮತ್ತು ಗದಗ ತಾಲೂಕುಗಳ ಹಾಗೂ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನೀರು ಸರಬರಾಜು ಯೋಜನೆಗಳಿಗೆ ಉಂಟಾಗಬಹುದಾದ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದೆಂಬ ಸದುದ್ದೇಶದಿಂದ ಬ್ಯಾರೇಜಿನ ನೀರು ಸಂಗ್ರಹಣಾ ಮಟ್ಟವನ್ನು 507.50 ಮೀಟರ್‌ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.ಈ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜಿನ ಸಂಗ್ರಹಣಾ ಮಟ್ಟವನ್ನು 506.80 ಮೀಟರ್‌ನಿಂದ 507.50 ಮೀಟರ್ ವರೆಗೆ ಹಂತ-ಹಂತವಾಗಿ ಹೆಚ್ಚಿಸಲು ಅನುವಾಗುವಂತೆ, ಜು.11, 2024ರಿಂದ ಬ್ಯಾರೇಜಿನ ಗೇಟುಗಳನ್ನು ಇಳಿಸಲು ಕ್ರಮ ಜರುಗಿಸಲಾಗುತ್ತಿದೆ.