ಆರ್ಟಿಮಿಸ್ ಹಾರಿದ್ದು, ಭೂಕಕ್ಷೆಯಿಂದ ಎತ್ತರಕ್ಕೆರಿದ್ದು, ಚಂದಿರನನ್ನೂ ದಾಟಿ ಸಾಗಿದ್ದು, 10 ದಿನಗಳ ಕಾಲ ಸುಮಾರು 6 ಲಕ್ಷ ಕಿ.ಮೀ.ಗಳಷ್ಟು ದೂರ ನಿರ್ವಾತದಲ್ಲಿ ಸುತ್ತಿಬಂದಿದ್ದು... ಇದಾವುದೂ ಮುಖ್ಯವಾಗುವುದೇ ಇಲ್ಲ ಗಗನಯಾನಿಗಳು ಭೂಮಿಗಿಳಿಯುವ ಕೊನೆಯ 8-10 ನಿಮಿಷಗಳ ಕಾಲದ ಮುಂದೆ!
ಅಪಾಯಕಾರಿ ವಿಕಿರಣಗಳೇ ತುಂಬಿರುವ ಚಂದಿರನ ಆಗಸಕ್ಕಿಂತಲೂ ಭೂಮಿಯ ವಾತಾವರಣವೇ ಹೆಚ್ಚು ಜೀವಬೆದರಿಕೆಯನ್ನೊಡ್ಡಿ ಮರಳಿ ಬರುವವರನ್ನು ಕಾಯುತ್ತಿರುತ್ತದೆ! ಹಾಗಾಗಿ ಅವರನ್ನು ಕಳಿಸಿದ್ದಕ್ಕಿಂತ ಕರೆಸಿಕೊಳ್ಳುವುದೇ ಭಾರೀ ಅಪಾಯಕಾರಿ ಕೆಲಸ!
ಕಾರಣವೇನು?:
ಚಂದಿರನನ್ನು ಸುತ್ತಿಬಂದ ಓರಿಯನ್ ನೌಕೆ ಭೂಮಿಗೆ ಸುಮಾರು 130 ಕಿ.ಮೀ. ಆಸುಪಾಸಿನಷ್ಟು ಸಮೀಪಕ್ಕೆ ಬರುವ ವೇಳೆಗೆ ಗಂಟೆಗೆ 38367 ಕಿ.ಮೀ ವೇಗವನ್ನು ತಲುಪಿರುತ್ತದೆ. ಅಂದರೆ ಮೂರೇ ನಿಮಿಷದೊಳಗೆ ಬೆಂಗಳೂರಿನಿಂದ ದಿಲ್ಲಿಯನ್ನು ತಲುಪಿಬಿಡಬಹುದಾದಷ್ಟು ವೇಗ ಇದು!
ಇಂಥ ಭಾರೀ ವೇಗದೊಂದಿಗೆ ನೌಕೆಯು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಉಂಟಾಗುವ ಘರ್ಷಣೆಯಿಂದ ಕಲ್ಲೂ ಕರಗುವಂಥ ಶಾಖ ಉತ್ಪತ್ತಿಯಾಗುತ್ತದೆ. ಇದು ಬೆಂಕಿಕಡ್ಡಿಯನ್ನು ಗೀರುವಂತಹ ಕ್ರಿಯೆ. ಈ ವೇಳೆ 2760 ಡಿಗ್ರಿವರೆಗೆ ಉಷ್ಣತೆ ಹೆಚ್ಚಿ ಓರಿಯನ್ ನೌಕೆ ಬೆಂಕಿಯುಂಡೆಯಂತಾಗುತ್ತದೆ. ಈ ಮಟ್ಟದ ಶಾಖದ ಜ್ವಾಲೆಯಲ್ಲಿ(Plasma) ಮುಳುಗಿರುವ ನೌಕೆಯು ತುಸು ಕಾಲ ಭೂಮಿಯೊಂದಿಗೆ ಸಂಪರ್ಕವನ್ನೇ ಕಡಿದುಕೊಂಡಿರುತ್ತದೆ! ಹಾಗಾಗಿ ಈ ಕೆಲ ನಿಮಿಷಗಳು ಉಸಿರು ನಿಲ್ಲಿಸಿ, ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುವಂಥ ಕಾಲ. ನೌಕೆ ತಯಾರಿಯಲ್ಲಿ ಚಿಕ್ಕ ಲೋಪವಾಗಿದ್ದರೂ ಅದು ಸ್ಫೋಟಗೊಂಡು ಗಗನಯಾತ್ರಿಗಳು ಭೂಮಿ ತಲುಪುವ ಮುಂಚೆಯೇ ಭಸ್ಮವಾಗುತ್ತಾರೆ. ಕಲ್ಪನಾ ಚಾವ್ಲಾ ದುರಂತ ಅಂತ್ಯವೂ ಇಂಥ ಸಂದರ್ಭದಲ್ಲೇ ಆಗಿದ್ದು.
ಇದಕ್ಕೆಲ್ಲ ಪರಿಹಾರವೇನು?:
ಇಷ್ಟೆಲ್ಲಾ ಪ್ರತಿಕೂಲಗಳನ್ನು ತಡೆದುಕೊಳ್ಳುವಂತೆಯೇ ನೌಕೆಯನ್ನು ತಯಾರಿಸಿರುತ್ತಾರೆ. ಇದಕ್ಕಾಗಿ ಸಾವಿರಾರು ಡಿಗ್ರಿ ಸೆಲ್ಸಿಯಸ್ ಶಾಖವನ್ನು ತಡೆಯುವ ಶಕ್ತಿಯಿರುವ ಟೈಟಾನಿಯಮ್ ಲೋಹವನ್ನು ನೌಕೆಯ ಹೊರಭಾಗಕ್ಕೆ ಬಳಸಿರುತ್ತಾರೆ. ಅಲ್ಲದೇ ಇದರ ಮೇಲೆ ಸುಮಾರು 3 ಸಾವಿರ ಡಿಗ್ರಿ ಸೆಲ್ಸಿಯಸ್ ಶಾಖ ತಡೆಯುವ ಶಕ್ತಿಯ ‘ಆವ್ಕೋಟ್’ (Avcoat) ಎಂಬ ವಸ್ತುವಿನಿಂದ ಮಾಡಿದ 186 ಬಿಲ್ಲೆಗಳನ್ನು ಇಟ್ಟಿಗೆಗಳಂತೆ ಹೊದಿಸಿರುತ್ತಾರೆ. ಈ ಹೊದಿಕೆ ಒಂದೂವರೆ ಇಂಚಿನಷ್ಟು ದಪ್ಪವಾಗಿರುತ್ತದೆ.
ಆರ್ಟೆಮಿಸ್ -೧ ಅಪಾಯವನ್ನೆದುರಿಸಿತ್ತು:
ಇಷ್ಟೆಲ್ಲಾ ಎಚ್ಚರಿಕೆಯ ಮಧ್ಯೆಯೂ, ಈ ಯೋಜನೆಯ ಮೊದಲ ಹಂತದಲ್ಲಿ ಮಾನವರಹಿತವಾಗಿ ಹೋಗಿಬಂದಿದ್ದ ಇದೇ ಓರಿಯನ್ ನೌಕೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿತ್ತು. ಆಗ ಇದೇ ಶಾಖ ನಿರೋಧಕಆವ್ಕೋಟ್ ಹೊದಿಕೆಗಳ ಮಧ್ಯೆ ಸೇರಿದ್ದ ವಾಯು ಅತಿಯಾಗಿ ಕಾದು ಹಿಗ್ಗಿದ ಪರಿಣಾಮ ಈ ಹೊದಿಕೆಗಳು ಕಿತ್ತುಬಂದಿದ್ದವು! ಆದರೆ ಈ ಬಾರಿ ಯಾನಿಗಳೂ ಒಳಗಿರುವ ಕಾರಣ ದುಪ್ಪಟ್ಟು ಎಚ್ಚರಿಕೆಯನ್ನು ವಹಿಸಲಾಗಿದೆ.
ಇಳಿಯುವ ಕೋನ:
ಆರ್ಟಿಮಿಸ್-1ರ ವೇಳೆ ನೌಕೆಯು ವಾತಾವರಣಕ್ಕೆ ಸಮಾನಾಂತರ ಕೋನದಲ್ಲಿ ಪ್ರವೇಶಿಸಿ ಭೂಕಕ್ಷೆಯಲ್ಲಿ ಸುತ್ತಿ ಇಳಿದಿತ್ತು. ಹೀಗಾದರೆ ಹೆಚ್ಚು ಸಮಯ ವಾತಾವರಣದ ಘರ್ಷಣೆಯಲ್ಲಿ ಇರಬೇಕಾಗುವುದರಿಂದ ಅಪಾಯ ಹೆಚ್ಚು. ಲಂಬ ಕೋನದಲ್ಲಿ ನೆರವಾಗಿ ಇಳಿಸಿದರೂ ಕಡಿಮೆ ಸಮಯದಲ್ಲೇ ಹೆಚ್ಚು ಘರ್ಷಣೆಯಾಗುದರಿಂದ ಆಗಲೂ ಅಪಾಯ ಹೆಚ್ಚು. ಹಾಗಾಗಿ ಇವೆರಡರ ಮಧ್ಯದ ಕೋನವನ್ನು ಈ ಬಾರಿ ಆಯ್ಕೆ ಮಾಡಲಾಗಿದೆ.
ನೌಕೆಯು ೨೬೫೦೦ ಅಡಿಗಳಷ್ಟು ಎತ್ತರದಲ್ಲಿದ್ದಾಗ ವೇಗ ಸಾಕಷ್ಟು ತಗ್ಗಿರುತ್ತದೆ ಅಂದುಕೊಂಡರೂ ಇನ್ನೂ ಗಂಟೆಗೆ 523 ಕಿ.ಮೀ.ನಷ್ಟು ವೇಗ ಉಳಿದಿರುತ್ತದೆ. ಈ ಸಮಯದಲ್ಲಿ ಇಳಿಸುವ ಜವಾಬ್ದಾರಿ ಹೊತ್ತಿರುವ ತಜ್ಞರು ಮೊದಲ ಹಂತವಾಗಿ7 ಅಡಿ ವ್ಯಾಸದ 3 ಚಿಕ್ಕ ಪ್ಯಾರಾಶೂಟ್‌ಗಳನ್ನು ಹಾರಿಸುತ್ತಾರೆ.
26500 ಅಡಿಗಳಷ್ಟು ಹತ್ತಿರಕ್ಕೆ ಬಂದಾಗ ನೌಕೆಯ ಸಮತೋಲನವನ್ನು ಕಾಪಾಡಲು 23 ಅಡಿ ವ್ಯಾಸದ ಎರಡು ದೊಡ್ಡ ಪ್ಯಾರಾಶೂಟ್‌ಗಳನ್ನು ಹಾರಿಸಲಾಗುತ್ತದೆ. 9500 ಅಡಿಗಳಷ್ಟು ಕೆಳಕ್ಕೆ ಬಂದಾಗ ಮುಖ್ಯ ಪ್ಯಾರಾಶೂಟ್‌ಗಳು ಬಿಚ್ಚಿಕೊಳ್ಳಲಾರಂಭಿಸುತ್ತವೆ. ಇದು ಹೆಚ್ಚು ಸಂಕೀರ್ಣವಾದ ಕ್ರಿಯೆ. ಮೊದಲು ಹನ್ನೊಂಡಿ ಅಡಿ ವ್ಯಾಸದ ಮೂರು ‘ಪೈಲಟ್ ಚೂಟ್’ಗಳು ಹಾರುತ್ತವೆ. ಇವು ಕೊನೆಯ ಮೂರು ಪ್ರಮುಖ ಪ್ಯಾರಾಶೂಟ್‌ಗಳನ್ನು ಎಳೆಯುತ್ತವೆ. 116 ಅಡಿಯಷ್ಟು ವ್ಯಾಸವುಳ್ಳ ಈ ಬೃಹತ್ ತೇಲುಕೊಡೆಗಳು ನೌಕೆಯ ವೇಗವನ್ನು ಅತಿಯಾಗಿ (32 ಕಿ.ಮೀ. ಗಂಟೆಗೆ) ತಗ್ಗಿಸುತ್ತವೆ. ಆಗ ಪ್ಯಾರಾಶೂಟ್‌ನಿಂದ 265 ಅಡಿಗಳಷ್ಟು ಕೆಳಗೆ ತೂಗಾಡುತ್ತಿರುವ ನೌಕೆಯು ಯಾವ ಅಪಾಯವಿಲ್ಲದೇ ನೌಕೆ ಪೆಸಿಫಿಕ್ ಜಲರಾಶಿಯನ್ನು ಸ್ಪರ್ಷಿಸುತ್ತದೆ.
ನೌಕೆ ಇಳಿವ ಸ್ಥಳದಿಂದ ಸುರಕ್ಷಿತ ದೂರದಲ್ಲಿ ಈ ಮೊದಲೇ ರಕ್ಷಣಾ ಸಿಬ್ಬಂದಿ ಎಲ್ಲಾ ವ್ಯವಸ್ಥೆಯೊಂದಿಗೆ ಹಾಜರಿರುತ್ತಾರೆ. ತುಸುಕಾಲ ನೌಕೆ ತಣಿಯಲು ಬಿಟ್ಟು ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಮರಳಿಬಂದ ಸಾಹಸಿಗಳನ್ನು ಸುರಕ್ಷಿತವಾಗಿ ನೆಲಕ್ಕೆ ಕರೆತರುತ್ತಾರೆ.
