ಮರ ಬೆಳಸಿ, ಧರೆ ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿ: ಶಾಸಕ ಎಚ್.ಎಂ.ಗಣೇಶ ಪ್ರಸಾದ್‌

| Published : Sep 04 2024, 01:52 AM IST

ಮರ ಬೆಳಸಿ, ಧರೆ ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿ: ಶಾಸಕ ಎಚ್.ಎಂ.ಗಣೇಶ ಪ್ರಸಾದ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೂಡುಗೂರು ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮರ ಬೆಳಸಿ, ಧರೆ ಉಳಿಸಿ ಅಭಿಯಾನಕ್ಕೆ ಸಾರ್ವಜನಿಕರು ಕೈ ಜೋಡಿಸಿ, ಅಭಿಯಾನ ಯಶಸ್ಸುಗೊಳಿಸುವ ಕೆಲಸ ಆಗಲಿ ಎಂದು ಶಾಸಕ ಗಣೇಶ ಪ್ರಸಾದ್‌ ಕರೆ ನೀಡಿದರು. ಗುಂಡ್ಲುಪೇಟೆಯಲ್ಲಿ ಮರ ಬೆಳಸಿ ಧರೆ ಉಳಿಸಿ ಅಭಿಯಾನದ ಪ್ರಥಮ ಚರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮೂಡುಗೂರು ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಮರ ಬೆಳಸಿ, ಧರೆ ಉಳಿಸಿ ಅಭಿಯಾನಕ್ಕೆ ಸಾರ್ವಜನಿಕರು ಕೈ ಜೋಡಿಸಿ, ಅಭಿಯಾನ ಯಶಸ್ಸುಗೊಳಿಸುವ ಕೆಲಸ ಆಗಲಿ ಎಂದು ಶಾಸಕ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಚ್.ಎಂ.ಗಣೇಶ ಪ್ರಸಾದ್‌ ಕರೆ ನೀಡಿದರು.

ತಾಲೂಕಿನ ಮೂಡುಗೂರು ಶ್ರೀ ಉದ್ದಾನೇಶ್ವರ ವಿರಕ್ತ ಮಠ ಟ್ರಸ್ಟ್‌ ಆಯೋಜಿಸಿದ್ದ ಮರ ಬೆಳಸಿ ಧರೆ ಉಳಿಸಿ ಅಭಿಯಾನದ ಪ್ರಥಮ ಚರಣದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪರಿಸರ, ಪ್ರಕೃತಿ ಉಳಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.

ಮೂಡುಗೂರು ಶ್ರೀಗಳು ಜಾಗತಿಕ ತಾಪಮಾನ ತಡೆಯುವ ಸದುದ್ದೇಶದಿಂದ ಪಡಗೂರು, ಕಬ್ಬಹಳ್ಳಿ ಮಠದ ಶ್ರೀಗಳು ಸ್ಥಳೀಯರ ಸಹಕಾರದೊಂದಿಗೆ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಈ ಅಭಿಯಾನಕ್ಕೆ ಯಶಸ್ಸು ಸಿಗಲಿ ಎಂದು ಆಶಿಸಿದರು. ಸಸಿ ನೆಟ್ಟು ಬೆಳೆಸುವ ಮೂಲಕ ಪರಿಸರ, ಅರಣ್ಯದ ಜೊತೆಗೆ ಜನರ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯ ಕೆಲಸವಾಗಿದೆ. ಗಿಡ ಮರವಾಗುವ ತನಕ ಪೋಷಿಸುವ ಕೆಲಸ ಆಗಬೇಕಿದೆ ಎಂದು ಪ್ರತಿಪಾದಿಸಿದರು.

ಶುದ್ಧ ಗಾಳಿ ನಗರ ಪ್ರದೇಶಗಳಲ್ಲಿ ಸಿಗುತ್ತಿಲ್ಲ. ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ಆಕ್ಸಿಜನ್‌ ಬಾರ್‌ಗೆ ಹೋಗಿ ಹಣ ಕೊಟ್ಟು ಶುದ್ಧ ಗಾಳಿ ಕುಡಿಯುತ್ತಿದ್ದಾರೆ. ಹಾಗಾಗಿ ಜಾಗತಿಕ ತಾಪಮಾನ ತಡೆಯುವ ಕೆಲಸವಲ್ಲ ಅದು ನಮ್ಮೆಲ್ಲರ ಜವಬ್ದಾರಿ ಎಂದರು.

ಮೈಸೂರು ಮುಡಾ ಮಾಜಿ ಅಧ್ಯಕ್ಷ, ಹಸಿರು ಮೈಸೂರು ಮುಖ್ಯಸ್ಥ ಎಚ್.ವಿ.ರಾಜೀವ್‌ ಮಾತನಾಡಿ, ಪ್ರಸ್ತುತ ಜಾಗತಿಕ ತಾಪಮಾನ ಏರುತ್ತಿದೆ. ಇಂಥ ಸಮಯದಲ್ಲಿ ಮೂಡುಗೂರು ಶ್ರೀ ಮರ ಬೆಳಸಿ, ಧರೆ ಉಳಿಸಿ ಅಭಿಯಾನ ಆರಂಭಿಸಿದ್ದಾರೆ ಇದು ಜಿಲ್ಲೆಯಾದ್ಯಂತ ಪಸರಿಸಲಿ ಎಂದರು. ನಮ್ಮ ಸಂಸ್ಥೆಯಿಂದ ಚಾಮರಾಜನಗರ, ನಂಜನಗೂಡು, ಶ್ರೀರಂಗಪಟ್ಟಣಕ್ಕೆ ತಲಾ ೧ ಸಾವಿರ ಸಸಿಗಳನ್ನು ಉಚಿತವಾಗಿ ನೀಡಿದೆ. ಮೂಡುಗೂರು ಶ್ರೀಗಳು ರಸ್ತೆ ಬದಿ ಸಸಿ ನೆಟ್ಟರೆ ಒಂದು ಸಾವಿರ ಸಸಿಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

ವಿವೇಕ ಸಿರಿ ಸೌಹರ್ದ ಸಹಕಾರಿ ಸಂಘದ ಅಧ್ಯಕ್ಷ ಸ್ವಾಮಿ ಮರಳಾಪುರ ಮಾತನಾಡಿ, ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಸುತ್ತಲೂ ಕಾಡಿದ್ದರೂ ನೀರಿನ ಬರ ತಪ್ಪಿಲ್ಲ ಕಾರಣ ಜಾಗತೀಕರಣದ ಪರಿಣಾಮದಿಂದ ಹಳ್ಳಿಗಳಲ್ಲಿ ರೆಸಾರ್ಟ್‌ಗಳ ತಲೆ ಎತ್ತುತ್ತಿವೆ ಇದು ದುಸ್ಥಿತಿಯಲ್ಲವೆ ಎಂದರು.

ಚಾಮುಲ್‌ ನಿರ್ದೇಶಕ ಎಂ.ಪಿ.ಸುನೀಲ್‌ ಮಾತನಾಡಿ, ತಾಲೂಕಿನಲ್ಲಿ ಗಣಿಗಾರಿಕೆ ಹೆಚ್ಚುತ್ತಿದೆ ಮುಂದೊಂದು ದಿನ ಬಳ್ಳಾರಿಯನ್ನು ಇದು ಮೀರಲಿದೆ. ಸದ್ಯ ಮೂಡುಗೂರು ಸುತ್ತ ಮುತ್ತ ಗಣಿಗಾರಿಕೆ ಇಲ್ಲ ಎಂಬುದು ನೆಮ್ಮದಿ ಸಂಗತಿ ಎಂದರು. ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ, ಮೂಡುಗೂರು ವಿರಕ್ತ ಮಠಾಧೀಶ ಇಮ್ಮಡಿ ಉದ್ದಾನಸ್ವಾಮೀಜಿ, ಕಬ್ಬಹಳ್ಳಿ ಜಂಗಮ ಮಠದ ಗುರುಸಿದ್ಧಸ್ವಾಮೀಜಿ ಮಾತನಾಡಿ ಆಶೀರ್ವಚನ ನೀಡಿದರು.ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್) ಪ್ರಾಸ್ತಾವಿಕವಾಗಿ ಮಾತನಾಡಿದರು.

ಪರಿಸರ ರಕ್ಷಕ ಪ್ರಶಸ್ತಿ

ಸಮಾರಂಭದಲ್ಲಿ ಲಕ್ಕೂರು ನಟರಾಜ್‌, ರಾಜಪ್ಪ ಪಡಗೂರು, ಲೀಲಾ ವೆಂಕಟೇಶ್‌, ವಿಶ್ವನಾಥ್‌ ಶಂಕರಪ್ಪ, ಪ್ರಮೀತ್‌ ಕುಮಾರ್‌ಗೆ ಮೂಡುಗೂರು ಉದ್ದಾನೇಶ್ವರ ವಿರಕ್ತ ಮಠ ಟ್ರಸ್ಟ್‌ ವತಿಯಿಂದ ಪರಿಸರ ರಕ್ಷಕ ಪ್ರಶಸ್ತಿ ನೀಡಿ ಶ್ರೀಗಳು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಗೌರವಿಸಿದರು.

ಸಮಾರಂಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಕೆ.ಸಿ.ಮಧು, ವೀರಶೈವ ಮಹಾಸಭಾ ತಾಲೂಕು ನಿರ್ದೇಶಕ ಬಿ.ಸಿ.ಮಹದೇವಸ್ವಾಮಿ, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ, ಗ್ರಾಪಂ ಸದಸ್ಯ ಅಭಿಷೇಕ್‌ ಇಂಗಲವಾಡಿ ಹಾಗೂ ಹೂರದಹಳ್ಳಿ ಪ್ರಸಾದ್‌, ಮೂಡುಗೂರು ರೇವಣ್ಣ, ಸ್ಕೌಟ್‌ ಆ್ಯಂಡ್‌ ಗೈಡ್ಸ್‌ನ ಅನ್ನಪೂರ್ಣ ಇದ್ದರು. ಹಾರ, ಶಾಲಿನ ಬದಲು

ಸಸಿ, ಪುಸ್ತಕ ವಿತರಣೆ

ಮರ ಬೆಳಸಿ, ಧರೆ ಉಳಿಸಿ ಅಭಿಯಾನದ ಪ್ರಥಮ ಚರಣದ ಸಮಾರೋಪ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸನ್ಮಾನಿತರಿಗೆ ಹಾರ, ಶಾಲಿನ ಬದಲು ಸಸಿ ಹಾಗೂ ಪುಸ್ತಕ ನೀಡಿದರು. ಮೂಡುಗೂರು ವಿರಕ್ತ ಮಠ ಟ್ರಸ್ಟ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂಡುಗೂರು ಶ್ರೀಗಳು ಗಣ್ಯರು, ಸನ್ಮಾನಿತರಿಗೆ ಟ್ರಸ್ಟ್‌ ಹೆಸರಿನಲ್ಲಿ ಸಸಿ ಕೊಟ್ಟು, ಪುಸ್ತಕ ನೀಡಿ ಗೌರವಿಸುವ ಮೂಲಕ ಸಮಾರಂಭಕ್ಕೆ ಹೊಸ ಕಳೆ ತಂದರು.