ದಾಬಸ್‍ಪೇಟೆ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ನೆಲಮಂಗಲ ತಾಲೂಕಿನ ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು, ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಆಂದೋಲನದಲ್ಲಿ ತೊಡಗಿದ್ದಾರೆ

ದಾಬಸ್‍ಪೇಟೆ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ನೆಲಮಂಗಲ ತಾಲೂಕಿನ ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು, ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಆಂದೋಲನದಲ್ಲಿ ತೊಡಗಿದ್ದಾರೆ.

ಪೋಷಕರಿಗೆ ಮನವರಿಕೆ: ಖಾಸಗಿ ಶಾಲೆಗಳಂತೆಯೇ ಏಪ್ರಿಲ್, ಮೇ ತಿಂಗಳಿನಿಂದಲೆ ವಿದ್ಯಾರ್ಥಿಗಳ ನೋಂದಣಿ ಆರಂಭಿಸಿರುವ ಶಿಕ್ಷಕರು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲಿಯುವುದರಿಂದ ಆಗುವ ಲಾಭ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಜತೆಗೆ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಮೊದಲಾದ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತದೆ. ಸರ್ಕಾರಿ ಶಾಲೆಗಳಿಗೆ ನುರಿತ ಶಿಕ್ಷಕರನ್ನೇ ನೇಮಿಸುವುದರಿಂದ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಪೋಷಕರಿಗೆ ಶಿಕ್ಷಕರು ಮನವರಿಕೆ ಮಾಡಿಕೊಡುತ್ತಿದ್ದಾರೆ. ಜೂನ್ ಮೊದಲ ವಾರದಲ್ಲಿ ಸಾಮಾನ್ಯ ದಾಖಲಾತಿ ಆಂದೋಲನ ನಡೆಸಲಾಗುತ್ತದೆ. ಮತ್ತೆ ಶಾಲೆಯ ಮುಂದೆ ಸರ್ಕಾರಿ ಸವಲತ್ತುಗಳ ಬ್ಯಾನರ್‌ ಕಟ್ಟಿ ಮಕ್ಕಳನ್ನು ಸೆಳೆಯುವ ತಂತ್ರ ಆವ್ಯಾಹತವಾಗಿ ಸಾಗಿದೆ.

ವಿನೂತನ ಪ್ರಯತ್ನ:

ಹಿಂದೆಲ್ಲಾ ಖಾಸಗಿ ಶಾಲಾ ಶಿಕ್ಷಕರು ರಜಾ ದಿನಗಳಲ್ಲೇ ಮನೆಮನೆಗಳಿಗೆ ತೆರಳಿ, ಕರಪತ್ರ ಹಂಚಿ ಪ್ರಚಾರ ಮಾಡಿ ಮಕ್ಕಳನ್ನು ಸೆಳೆಯುತ್ತಿದ್ದರು. ಇದನ್ನು ಮನಗಂಡ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆ ಶಿಕ್ಷಕರೂ ಮೇ ತಿಂಗಳಿನಿಂದಲೇ ವಿಶೇಷ ದಾಖಲಾತಿ ಆಂದೋಲನ ಆರಂಭಿಸಿದೆ. ಇದರ ಅನುಸಾರ ಶಿಕ್ಷಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕರಪತ್ರ, ಬ್ಯಾನರ್‌, ಸ್ಟಿಕ್ಕರ್‌ ಹಂಚಿ ಹಾಗೂ ಜಾಥಾ ನಡೆಸಿ ಸರ್ಕಾರಿ ಸೌಲಭ್ಯಗಳನ್ನು ಮನವರಿಕೆ ಮಾಡಿ ಪೋಷಕರನ್ನು ಸೆಳೆಯುವ ತಂತ್ರ ಕೈಗೊಂಡಿದೆ.

ಶಾಲೆಗಳ ಮುಂದೆ ಬ್ಯಾನರ್ಗಳ ಆರ್ಭಟ:

ಸರ್ಕಾರಿ ಶಾಲೆಗಳಲ್ಲಿ ಏಪ್ರಿಲ್ ತಿಂಗಳ ಆರಂಭದಲ್ಲೇ ಬ್ಯಾನರ್ ಗಳ ರಾರಾಜಿಸುತ್ತಿವೆ. ಸರ್ಕಾರಿ ಶಾಲೆಗಳಿಗೆ ಕನ್ನಡ ಮಾಧ್ಯಮದ ಜತೆಗೆ ಇಂಗ್ಲಿಷ್ ಮಾಧ್ಯಮ ನೀಡಿರುವುದು ದಾಖಲಾತಿಯಲ್ಲಿ ಮತ್ತಷ್ಟು ಪ್ರಗತಿ ಕಾಣಬಹುದು.

ನುರಿತ ಶಿಕ್ಷಕರು:

ಸರ್ಕಾರಿ ಶಾಲೆಗಳಲ್ಲಿನ ಎಲ್ಲಾ ಶಿಕ್ಷಕರು ಟಿಇಟಿ, ಸಿಇಟಿ ಹಾಗೂ ತರಬೇತಿ ಎಂಬ ಮೂರು ಕಡೆ ಶೋಧಿಸಲ್ಪಟ್ಟು ಕೆಲಸಕ್ಕೆ ಆಯ್ಕೆಗೊಂಡಿರುವುದರಿಂದ ಮಕ್ಕಳಿಗೆ ಹೇಗೆ ಕಲಿಸಿಕೊಡಬೇಕು ಎಂಬ ವಿಷಯದಲ್ಲಿ ಪರಿಣತಿ ಹೊಂದಿರುತ್ತಾರೆ. ಅವರನ್ನು ಬಳಸಿಕೊಳ್ಳುವ ಜಾಣ್ಮೆ ಪೋಷಕರು ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳಿಗಿರಬೇಕು. ಸರ್ಕಾರ ಶಿಕ್ಷಕರಿಗೆ ತರಬೇತಿ ನೀಡಿ ಸಂಪದ್ಬರಿತವಾಗಿ ಮಾಡುವ ಜತೆಗೆ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಪಂಚಾಯಿತಿಗೊಂದು ಪಬ್ಲಿಕ್ ಶಾಲೆಯನ್ನು ತೆರೆದು ವಿಷಯಾಧಾರಿತ ಶಿಕ್ಷಕರ ನೇಮಕವಾದಲ್ಲಿ ಪ್ರತೀ ಸಮಸ್ಯೆಗೂ ಮುಕ್ತಿ ಸಿಗಲಿದೆ.

ಕೋಟ್.................

ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ನಿರ್ದೇಶನದಂತೆ ಈಗಾಗಲೇ ಮುಖ್ಯಶಿಕ್ಷಕರ ಸಭೆ ಕರೆದು ಶಿಕ್ಷಕರಿಗೆ ದಾಖಲಾತಿ ಬಗ್ಗೆ ತರಬೇತಿ ನೀಡಿದ್ದೇವೆ. ತಾಲೂಕಿನ ಸರ್ಕಾರಿ ಶಾಲಾ ಶಿಕ್ಷಕರು ಸರ್ಕಾರಿ ಸೌಲಭ್ಯಗಳು ಹಾಗೂ ಶಿಕ್ಷಣದ ಕ್ರಮಗಳನ್ನು ಪೋಷಕರಿಗೆ ಮನವರಿಕೆ ಮಾಡಿ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ.

-ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೆಲಮಂಗಲ

ಕೋಟ್ ............

ಸರ್ಕಾರದ ಸೌಲಭ್ಯಗಳು ಹಾಗೂ ಸರ್ಕಾರಿ ಶಾಲೆಯಲ್ಲಿ ದೊರಕುವ ಗುಣಮಟ್ಟದ ಶಿಕ್ಷಣದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಶಾಲೆಗಳಿಗೆ ಮಕ್ಕಳನ್ನು ದಾಖಲುಗೊಳಿಸುವ ಕಾರ್ಯಕ್ಕೆ ರಜಾದಿನಗಳಿಂದಲೂ ಮುಂದಾಗಿದ್ದೇವೆ. ಪ್ರತಿ ಮನೆಗೂ ಭೇಟಿ ನೀಡಿ ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿ ದಾಖಲು ಮಾಡಿಕೊಳ್ಳುತ್ತಿದ್ದೇವೆ.

-ಪುಟ್ಟರುದ್ರಾರಾಧ್ಯ ಮುಖ್ಯಶಿಕ್ಷಕರು, ಹೊನ್ನೇನಹಳ್ಳಿ ಸರ್ಕಾರಿ ಶಾಲೆ, ನೆಲಮಂಗಲ ತಾಲೂಕು

ಪೋಟೋ 1 * 2 :

ಸೋಂಪುರ ಹೋಬಳಿಯ ವಿವಿಧ ಸರ್ಕಾರಿ ಶಾಲೆಯ ಶಿಕ್ಷಕರು ದಾಖಲಾತಿ ಆಂದೋಲನದಲ್ಲಿ ಪಾಲ್ಗೊಂಡಿರುವುದು

ಪೋಟೋ 3 : ರಮೇಶ್.ಕೆ.ಸಿ. ಬಿಇಒ (ಕೋಟ್ ಗೆ)

ಪೋಟೋ 4 : ಪುಟ್ಟರುದ್ರಾರಾಧ್ಯ ಮುಖ್ಯಶಿಕ್ಷಕರು, ಹೊನ್ನೇನಹಳ್ಳಿ ಶಾಲೆ (ಕೋಟ್ ಗೆ)