ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಗುರುವಾರ ಸಂಜೆ ಗುಡುಗು, ಮಿಂಚು, ಗಾಳಿ ಸಹಿತ ಜೋರು ಮಳೆಯಾಗಿದ್ದು ಅನೇಕ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ನಿಧಾನವಾಗಿತ್ತು. ಕೆಲವೆಡೆ ಮರಗಳು ಬಿದ್ದ ಕಾರಣ ವಾಹನ ಸಂಚಾರ ವ್ಯತ್ಯಯಗೊಂಡಿತ್ತು.

ಬಸವನಗುಡಿ, ಬನಶಂಕರಿ, ಜಯನಗರ, ಜೆ.ಪಿ.ನಗರ, ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ, ಬೇಗೂರು, ಅರೆಕೆರೆ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಮೆಜೆಸ್ಟಿಕ್ ಸುತ್ತಲಿನ ಪ್ರದೇಶಗಳಲ್ಲಿ ಹಗುರ ಮಳೆಯಾಗಿದೆ.

ಬಿಳೇಕಹಳ್ಳಿ, ಹೊಸೂರು ರಸ್ತೆಯಲ್ಲಿ ಡಬ್ಬಲ್ ಡೆಕ್ಕರ್ ಡೌನ್‌ ರ್‍ಯಾಂಪ್‌ ಬಳಿ, ಚಾಮರಾಜಪೇಟೆ ಉಮಾ ಚಿತ್ರಮಂದಿರ, ಸಿಲ್ಕ್ ಬೋರ್ಡ್ ಜಂಕ್ಷನ್, ಮಡಿವಾಳ ಅಂಡರ್‌ಪಾಸ್, ಹುಳಿಮಾವು ಗೇಟ್, ಕುಬೇರ ಜಂಕ್ಷನ್, ಸಾರಕ್ಕಿ ಸಿಗ್ನಲ್‌ ಬಳಿ ರಸ್ತೆಯಲ್ಲಿ ಮಳೆ ನೀರು ನಿಂತ ಕಾರಣ ವಾಹನಗಳ ಸಂಚಾರ ನಿಧಾನವಾಗಿತ್ತು. ತಾವರೆಕೆರೆ ಜಂಕ್ಷನ್, ಜೆ.ಪಿ.ನಗರ 100 ಅಡಿ ರಸ್ತೆ, ಆರ್.ವಿ. ಡೆಂಟಲ್ ಕಾಲೇಜು, ಸೌತ್ ಎಂಡ್ ಸರ್ಕಲ್, ಹೊಸ ರಸ್ತೆ ಜಂಕ್ಷನ್‌ ಬಳಿ ರಸ್ತೆಗೆ ಮರ ಬಿದ್ದ ಪರಿಣಾಮ ವಾಹನ ಸಂಚಾರ ವ್ಯತ್ಯಯವಾಯಿತು. ಗುರುವಾರ ಸಂಜೆ ದಕ್ಷಿಣ ಭಾಗದ ವಿವಿಧೆಡೆ ಸರಾಸರಿ 20 ಮಿ.ಮೀ ನಿಂದ 40 ಮಿ.ಮೀವರೆಗೆ ಮಳೆಯಾಗಿದೆ. ಜೂನ್ 1ರವರೆಗೆ ಮಳೆಯಾಗಲಿದೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.