ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಮೈಸೂರು, ಗದಗ, ರಾಯಚೂರು ಸೇರಿ ರಾಜ್ಯದ 6 ಜಿಲ್ಲೆಗಳಲ್ಲಿ ಬುಧವಾರ ಮಳೆಯಾಗಿದೆ. ಮೈಸೂರು ಜಿಲ್ಲೆ ಹುಣಸೂರು, ಎಚ್.ಡಿ.ಕೋಟೆ ಹಾಗೂ ಯಾದಗಿರಿಯಲ್ಲಿ ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು:
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಮೈಸೂರು, ಗದಗ, ರಾಯಚೂರು ಸೇರಿ ರಾಜ್ಯದ 6 ಜಿಲ್ಲೆಗಳಲ್ಲಿ ಬುಧವಾರ ಮಳೆಯಾಗಿದೆ. ಮೈಸೂರು ಜಿಲ್ಲೆ ಹುಣಸೂರು, ಎಚ್.ಡಿ.ಕೋಟೆ ಹಾಗೂ ಯಾದಗಿರಿಯಲ್ಲಿ ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ.ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೊಸಪುರ ಗ್ರಾಮದಲ್ಲಿ ಬುಧವಾರ ಸಂಜೆ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಸಿಡಿಲು ಬಡಿದು ಯಶೋದಮ್ಮ (65) ಎಂಬುವರು ಮೃತಪಟ್ಟಿದ್ದಾರೆ. ಈ ಮಧ್ಯೆ, ಎಚ್.ಡಿ.ಕೋಟೆ ತಾಲೂಕಿನ ಮಾಳದಹಾಡಿಯ ಜಮೀನಿನಲ್ಲಿ ಮೇಕೆ ಮೇಯಿಸುತ್ತಿದ್ದ ವೇಳೆ ಕುರಿಗಾಯಿ, ಸುಬ್ಬ (60) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ. ನೂರಲಕುಪ್ಪೆ ಗ್ರಾಮದಲ್ಲಿ ಸಿಡಿಲಿಗೆ ಹಸುವೊಂದು ಮೃತಪಟ್ಟಿದೆ. ಯಾದಗಿರಿ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಭಾರಿ ಗಾಳಿ, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದ್ದು, ಶಹಾಪುರ ತಾಲೂಕಿನ ರೋಜಾ ಗ್ರಾಮದಲ್ಲಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಸಿಡಿಲು ಬಡಿದು ತೌಕಲ್ ಸಾಬ್ (42) ಎಂಬುವರು ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನಾದ್ಯಂತ ಬುಧವಾರ ಬೆಳಗಿನ ಜಾವ 5 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಲಿಂಗಸುಗೂರು ಸೇರಿ ರಾಯಚೂರು ಜಿಲ್ಲೆಯಾದ್ಯಂತ ಬುಧವಾರ ಬೆಳ್ಳಂಬೆಳ್ಳಿಗೆ ಭಾರಿ ಗಾಳಿ, ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೇ ವೇಳೆ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದೆ.ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಮುನ್ಸೂಚನೆ:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಹಿನ್ನಲೆ, ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರ ಜಾಸ್ತಿಯಾಗುವ ಸಾಧ್ಯತೆ, ಮುಂದಿನ ಮೂರು ದಿನ ಗುಡುಗು ಮಿಂಚು ಸಹಿತ ಭಾರೀ ಗಾಳಿ ಸಹಿತ ಮಳೆ ಬೀಳುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ, ಮಲೆನಾಡು ಸೇರಿ ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ಮಳೆಯಾಗುವ ಸಾಧ್ಯತೆ ಇದೆ.ಬಿರುಗಾಳಿ 40ರಿಂದ 60 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಕೆಲವೆಡೆ ಆಲಿಕಲ್ಲು ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಸಮಯದಲ್ಲಿ ನಾಗರಿಕರು ಮನೆಯಿಂದ ಹೊರಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಹೊರ ಹೋದರೆ ಗುಡುಗು, ಮಿಂಚು ಸಹಿತ ಮಳೆ ಬೀಳುವಾಗ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯುವಂತೆ ಕೋರಲಾಗಿದೆ.ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಹೆಚ್ಚಳವಾಗಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಮುನ್ಸೂಚನೆಗಳಿವೆ.ಬೆಂಗಳೂರು, ಕೋಲಾರ, ತುಮಕೂರು, ಮೈಸೂರು ಭಾಗದಲ್ಲೂ ಮಳೆ ರಭಸ ಮಳೆ ಬೀಳುವ ಸಾಧ್ಯತೆ ಇದೆ. ಮೇ 29 ರಂದು ಗುಡುಗು ಸಹಿತ ಭಾರೀ ಮಳೆಯಾಗುವುದೆಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಮೀನುಗಾರರಿಗೂ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಿದೆ.