ಚಂದ್ರು ಕೊಂಚಿಗೇರಿ
ರೈತರ ಪರಿಹಾರ ಬಿಡುಗಡೆ ಕುರಿತು ಕನ್ನಡಪ್ರಭ ದಿನಪತ್ರಿಕೆ ಸಾಕಷ್ಟು ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. 2008ರಿಂದ ಭೂಮಿ ಕಳೆದುಕೊಂಡಿರುವ ರೈತರು ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿರುವ ರೈತರಿಗೆ ನೀರಾವರಿ ನಿಗಮ ಈಗ ಭೂ ಪರಿಹಾರ ಬಿಡುಗಡೆ ಮಾಡಿದೆ.
ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ಹೊಳಗುಂದಿ, ನಂದಿಹಳ್ಳಿ, ಮುದೇನೂರು ಮತ್ತು ದಾಸರಹಳ್ಳಿ ಗ್ರಾಮಗಳ 92.08 ಎಕರೆ ಜಮೀನಿಗೆ ಸಂಬಂಧಪಟ್ಟ ₹5.99 ಕೋಟಿ ಹಾಗೂ 60 ಹಾಳ್ ತಿಮ್ಲಾಪುರ, 63 ತಿಮ್ಲಾಪುರ, ನವಲಿ ಗ್ರಾಮಗಳ 30.47 ಎಕರೆ ಜಮೀನಿನ ₹2.02 ಕೋಟಿ ಸೇರಿದಂತೆ ಒಟ್ಟು 123.27 ಎಕರೆ ಜಮೀನಿನ ₹8.02 ಕೋಟಿ ಧಾರವಾಡ ನೀರಾವರಿ ನಿಗಮದಿಂದ ಹಣ ಬಿಡುಗಡೆಯಾಗಿದೆ.ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವ ವಿಚಾರವಾಗಿ, ಈ ಹಿಂದಿನ ಸರ್ಕಾರ ರೈತರ ಕಡತಗಳು ಪದೇಪದೇ ಅಸಿಂಧು ಆಗುತ್ತಿದ್ದವು. ಇದನ್ನು ತಪ್ಪಿಸಲು ಬಿಜೆಪಿ ಸರ್ಕಾರ ಕಾರ್ಪಸ್ ಫಂಡ್ ನಿಗದಿಪಡಿಸಿ ಧಾರವಾಡ ನೀರಾವರಿ ನಿಗಮದಲ್ಲಿ ಹಣ ಠೇವಣಿ ಮಾಡಲಾಗಿತ್ತು. ಮತ್ತೆ ರಾಜ್ಯದಲ್ಲಿ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಪರಿಹಾರ ವ್ಯವಸ್ಥೆಯೂ ಬದಲಾಯಿತು. ಪರಿಣಾಮ ಭೂ ಪರಿಹಾರ ಕಡತಗಳ ವಿಲೇವಾರಿಗೆ ಆದ್ಯತೆ ಮೇರೆಗೆ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ.
ತುಂಗಭದ್ರಾ ನದಿಯಿಂದ ಕೂಡ್ಲಿಗಿ ತಾಲೂಕಿನ ಕೆರೆ ತುಂಬಿಸುವ ಯೋಜನೆಗೆ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಗೆ ಭೂಮಿ ಕಳೆದುಕೊಂಡ ಕೊಟ್ಟೂರು, ಚಪ್ಪದರಹಳ್ಳಿ, ಜೋಳದ ಕೂಡ್ಲಿಗಿ ಗ್ರಾಮಗಳ 5.28 ಎಕರೆ, 63 ತಿಮ್ಲಾಪುರ, 60 ತಿಮ್ಲಾಪುರ, ದೇವಗೊಂಡನಹಳ್ಳಿ, ಹುಗಲೂರು, ಸೋಗಿ, ವರಕನಹಳ್ಳಿ, ಮಹಾಜನದಹಳ್ಳಿ, ಮುಸುಕಿನ ಕಲ್ಲಳ್ಳಿ ಗ್ರಾಮಗಳ 43.82 ಎಕರೆ, ಸೂಲದಹಳ್ಳಿ, ಅಪ್ಪಯನಹಳ್ಳಿ, ಶಿವಪುರ, ಬಣವಿಕಲ್ಲು, ತಿಮ್ಲಾಪುರ, ಕೂಡ್ಲಿಗಿ, ಮೊರಬ, ಪಾಲಯ್ಯನ ಕೋಟೆ, ಕ್ಯಾಸನಕೆರೆ ಗ್ರಾಮಗಳ 30.56 ಎಕರೆ ಜಮೀನಿನ ಭೂ ಪರಿಹಾರ ಬಾಕಿ ಉಳಿದುಕೊಂಡಿದೆ.
ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಗಾಗಿ 123.27 ಎಕರೆ ಭೂಮಿ ಕಳೆದುಕೊಂಡ ರೈತರಿಗೆ ನೀರಾವರಿ ನಿಗಮದಿಂದ ₹8.02 ಕೋಟಿ ಪರಿಹಾರ ಬಿಡುಗಡೆಯಾಗಿದೆ. ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯವಾಗುತ್ತಿದೆ ಎನ್ನುತ್ತಾರೆ ವಿಶೇಷ ಭೂಸ್ವಾಧಿಕಾರಿ ಕಚೇರಿ ಎಸ್‌ಡಿಎ ಶೇಕ್ಷಾವಲಿ ಪಾಷ.