ಮಂಗಳೂರು: ಸಿಂಗಲ್ ಸೈಟ್ ಹಾಗೂ 9/11 ಅರ್ಜಿಗಳನ್ನು ಅನಗತ್ಯ ವಿಳಂಬ ಮಾಡದೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವಂತೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಳ್ಳಾಲ ತಾಲೂಕಿನ 9/11 ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಏಕನಿವೇಶನಕ್ಕೆ ಸಂಪರ್ಕ ರಸ್ತೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇರಬೇಕು. ಸರ್ಕಾರಿ ರಸ್ತೆ ಅಥವಾ ಖಾಸಗಿ ರಸ್ತೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನಮೂದಿಸಬೇಕು ಎಂದು ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ದೀಪಾ ಚೋಳನ್ ಮಾತನಾಡಿ, ಏಕನಿವೇಶನ ಅರ್ಜಿಗಳಲ್ಲಿ ರಸ್ತೆ ಬಗ್ಗೆ ಅಫಿದವಿತ್ ತೆಗೆದುಕೊಂಡು 9/11 ನೀಡುವ ಬಗ್ಗೆ ಶೀಘ್ರ ಸುತ್ತೋಲೆ ಹೊರಡಿಸಲಾಗುವುದು. 9/11 ಅರ್ಜಿಗಾಗಿ ಪದೇ ಪದೇ ವಿವಿಧ ಕಚೇರಿಗೆ ತೆರಳುವ ಬದಲು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಒಂದು ಸಲ ಅನುಮೋದನೆ ನೀಡಿದ ಬಳಿಕ ಸಂಬಂಧಿಸಿದ ಗ್ರಾಮ ಪಂಚಾಯ್ತಿಗಳಿಗೆ ಕಳುಹಿಸಿಕೊಡಲಾಗುವುದು. ಇದರಿಂದ 2ನೇ ಬಾರಿ ಮೂಡಾ ಅಥವಾ ನಗರ ಯೋಜನಾ ಸಮಿತಿಗಳಿಗೆ ಬರುವ ಅಗತ್ಯ ಇರುವುದಿಲ್ಲ ಎಂದು ತಿಳಿಸಿದರು.ರಸ್ತೆ ಅಗಲೀಕರಣ ಉದ್ದೇಶವಿದ್ದರೆ ಅದನ್ನು 9/11ನಲ್ಲಿ ನಮೂದಿಸಲಾಗುವುದು. ಗುಡ್ಡಗಾಡು ಪ್ರದೇಶದಲ್ಲಿ 3.65 ಮೀ. ಅಗಲದ ರಸ್ತೆ ಅವಕಾಶವಿದ್ದು, ಇದನ್ನು ಕರಾವಳಿ ಮತ್ತು ಮಲೆನಾಡಿಗೆ ಅನ್ವಯಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.ಇನ್ನು ಮುಂದೆ ಪ್ರತಿ ತಿಂಗಳು ತಾಲೂಕೊಂದರಲ್ಲಿ ಅದಾಲತ್ ನಡೆಸಿ ಏಕ ನಿವೇಶನ ಮತ್ತು 9/11 ಸಾರ್ವಜನಿಕ ಅರ್ಜಿಯನ್ನು ಇತ್ಯರ್ಥ ಪಡಿಸಲಾಗುವುದು ಎಂದೂ ಹೇಳಿದರು.
94ಸಿ ಅಡಿ ಮಂಜೂರಾದ ನಿವೇಶನಗಳಲ್ಲಿ ಮನೆ ಕಟ್ಟಲು 9/11 ದಾಖಲೆಗಳನ್ನು 15 ದಿನದೊಳಗೆ ನೀಡಲು ಆನ್‍ಲೈನ್‍ನಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಾಗರಿಕರು ನೇರವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ನಗರ ಯೋಜನಾ ಆಯುಕ್ತ ವೆಂಕಟಾಚಲ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಮತ್ತಿತರರು ಇದ್ದರು.