ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 120 ಮೈಕ್ರಾನ್ ಮತ್ತು ಅದಕ್ಕಿಂತ ಕಡಿಮೆ ಪ್ರಮಾಣದ ಎಲ್ಲ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ನಿರ್ಬಂಧಕ್ಕೆ ನಿರ್ಣಯ ಕೈಗೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 120 ಮೈಕ್ರಾನ್ ಮತ್ತು ಅದಕ್ಕಿಂತ ಕಡಿಮೆ ಪ್ರಮಾಣದ ಎಲ್ಲಾ ರೀತಿಯ ಏಕ ಬಳಕೆ ಪ್ಲಾಸ್ಟಿಕ್ ನಿರ್ಬಂಧಕ್ಕೆ ಪುರಸಭೆ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ. ಪುರಸಭೆ ಅಧ್ಯಕ್ಷರಾದ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂಬಂಧ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಕರಪತ್ರ ಹಂಚುವುದು ವ್ಯಾಪಕ ಪ್ರಚಾರ ಮತ್ತಿತರ ರೀತಿಯಲ್ಲಿ ನಾಗರಿಕರಿಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಕ್ರಮ ಕೈಗೊಳ್ಳುವುದರೊಂದಿಗೆ ಈ ಬಗ್ಗೆ ಅರಿವು ಮೂಡಿಸುವುದು, ಮುಂದಿನ 30 ದಿನಗಳ ಕಾಲ ಅವಕಾಶ ನೀಡಿ ನಂತರ ನಿಯಮ ಉಲ್ಲಂಘನೆ ಆದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಚೇಂಬರ್ ಆಫ್ ಕಾಮರ್ಸ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸಲು ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.ಪುರಸಭೆ ಸೇರಿದಂತೆ ಇತರ ಇಲಾಖೆಗಳ ಸಹಾಯ ದೊಂದಿಗೆ ಕುಶಾಲನಗರದ ಗಡಿ ಭಾಗದಲ್ಲಿ ವಾಹನಗಳಲ್ಲಿ ಪ್ಲಾಸ್ಟಿಕ್ ಗಳ ತಪಾಸಣೆ ಮಾಡುವ ಕಾರ್ಯ ನಿರ್ವಹಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಕುಶಾಲನಗರ ಪುರಸಭೆಯ ಸುಮಾರು 6 ಸಾವಿರಕ್ಕೂ ಅಧಿಕ ಮನೆಗಳಿಗೆ ಒಣ ಮತ್ತು ಹಸಿ ಕಸ ಸಂಗ್ರಹಕ್ಕೆ ಕಸದ ಬುಟ್ಟಿಯನ್ನು ವಿತರಿಸುವ ಕಾರ್ಯ ಸದ್ಯದಲ್ಲೇ ನಡೆಯುವುದಾಗಿ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್ ಮಾಹಿತಿ ನೀಡಿದರು. ಕಸದ ಬುಟ್ಟಿ ಗಳು ಈಗಾಗಲೇ ಕಚೇರಿಗೆ ಬಂದಿದ್ದು ಇವುಗಳ ವಿತರಣೆ ನಡೆಯಲಿದೆ ಎಂದರು.ಮನೆ ಮಾಲೀಕರು ಸೇರಿದಂತೆ ಬಾಡಿಗೆದಾರರಿಗೂ ಈ ಸೌಲಭ್ಯ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಸರ್ಕಾರದ ಸೂಚನೆ ಪರಿಶೀಲಿಸಿ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಕುಡಿಯುವ ನೀರು ಮಾರಾಟ ಬಗ್ಗೆ ಪಟ್ಟಣದಲ್ಲಿ ನಿರ್ಬಂಧ ಹೇರಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ಚರ್ಚೆ ನಡೆಯಿತು.ಪುರಸಭೆ ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಶ್, ಮತ್ತು ಸದಸ್ಯರು ಹಾಗೂ ಅಧಿಕಾರಿ, ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.