ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಪರಿಷ್ಕರಣೆಗೂ (ಎಸ್‌ಐಆರ್) ಮುನ್ನ, ಅಂದರೆ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಒಟ್ಟು ಮತದಾರರ ಸಂಖ್ಯೆ 10,53,236 ಇತ್ತು. ಪರಿಷ್ಕರಣೆಯ ನಂತರ, ಮೃತರು, ಬೇರೆಡೆ ಹೋದವರು, ಎರಡೆರೆಡು ಬಾರಿ ಮತಪಟ್ಟಿಯಲ್ಲಿದ್ದವರು, ಪತ್ತೆಯಾಗದವರು ಹಾಗೂ ವಿವಿಧ ಕಾರಣಗಳ ಸೇರಿದಂತೆ ಒಟ್ಟು 1,89,233 ಮತದಾರರ ಹೆಸರುಗಳನ್ನು (ಶೇ.17.97) ಡಿಲೀಟ್ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಯಾದಗಿರಿ ಸೇರಿದಂತೆ ಜಿಲ್ಲೆಯ ಶೋರಾಪುರ (ಸುರಪುರ), ಶಹಾಪುರ ಹಾಗೂ ಗುರುಮಠಕಲ್, ನಾಲ್ಕು ವಿಧಾನಸಭಾ ಮತಕ್ಷೇತ್ರಗಳ ಒಟ್ಟಾರೆ ವಿವರಗಳನ್ನು ನೀಡಿ, ಅವರು ಮಾತನಾಡುತ್ತಿದ್ದರು.ಈ ಹಿಂದಿದ್ದ ಒಟ್ಟು 10,53,233 ಹೆಸರುಗಳ ಪೈಕಿ, 29,026 ಮೃತರು, 1,16,937 ಕಾಯಂ ಸ್ಥಳಾಂತರಗೊಂಡವರು, 22,507 ಈಗಾಗಲೇ ನೋಂದಣಿ ಮಾಡಿಸಿದ್ದವರು, ಪತ್ತೆಯಿಲ್ಲದವರು 17,306 ಹಾಗೂ ಇತರೆ 3,457 ಸೇರಿದಂತೆ ಒಟ್ಟು 1,89,233 ಹೆಸರುಗಳನ್ನು ಕೈಬಿಡಲಾಗಿದೆ. ಈ ಕರಡು ಪಟ್ಟಿಯಲ್ಲಿನ ಒಟ್ಟು 8,64,005 ಪೈಕಿ, ಹೆಸರು ಹೊಂದಾಣಿಕೆ ಹಾಗೂ ತಿದ್ದುಪಡಿ ವಿವಿಧ ಕಾರಣಗಳಿಂದ ಅಂತಿಮಗೊಳ್ಳದ 55,062 ಹೆಸರುಗಳು ಪರಿಶೀಲನೆಗೊಳಪಡಲಿವೆ. ನಂತರದಲ್ಲಿ ನೋಟೀಸ್ ಹಾಗೂ ಖಾತರಿ ಮಾಡಿಕೊಂಡ ನಂತರ ಖಾತರಿಪಡಿಸಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ರಮೇಶ ಕೋಲೂರು ಹಾಗೂ ಸಹಾಯಕ ಆಯುಕ್ತ ಶ್ರೀಧರ ಗೋಟೂರು ಸೇರಿದಂತೆ ಚುನಾವಣಾ ಪ್ರಕ್ರಿಯೆ ಸಿಬ್ಬಂದಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶೋರಾಪುರ (ಸುರಪುರ) ಮತಕ್ಷೇತ್ರದ ವಿವರ: ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಶೋರಾಪುರ (ಸುರಪುರ) ವಿಧಾನಸಭಾ ಮತಕ್ಷೇತ್ರ ಬರುತ್ತದೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಸುರಪುರ ತಾಲೂಕು ಹಾಗೂ ಹುಣಸಗಿ ತಾಲೂಕಿನ ಕೆಲವು ಗ್ರಾಮಗಳೂ ಬರುತ್ತವೆ. ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಸುರಪುರ ಮತಕ್ಷೇತ್ರದಲ್ಲಿ 2,86,404 ಮತದಾರರು ಇದ್ದರು. ಪ್ರಕ್ರಿಯೆ ನಂತರ, 7,482 ಮೃತರ, 24,280 ಕಾಯಂ ಸ್ಥಳಾಂತರಗೊಂಡ, 5,837 ಮೊದಲೇ ನೋಂದಣಿಯಾದ, 5,173 ಗೈರು ಹಾಗೂ ಇತರ 102 ಸೇರಿದಂತೆ 42,874 ಹೆಸರುಗಳನ್ನು ಕೈಬಿಡಲಾಗಿದೆ. ಸುರಪುರ ತಾಲೂಕಿನ 1,20,451 ಹಾಗೂ ಹುಣಸಗಿ ತಾಲೂಕಿನ 1,23,079 ಮತದಾರರು ಸಹಿತ, ಅ.24ರವರೆಗೆ ಸುರಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,43,530 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟಗೊಂಡಿವೆ. ಸುರಪುರ ತಾಲೂಕಿನಲ್ಲಿ 151, ಹುಣಸಗಿ ತಾಲೂಕಿನಲ್ಲಿ 166 ಮತಗಟ್ಟೆಗಳು ಸೇರಿದಂತೆ ಸುರಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 317 ಮತಗಟ್ಟೆಗಳಿವೆ.
ಗುರುಮಠಕಲ್ ಮತಕ್ಷೇತ್ರದ ವಿವರ: ಗುಲ್ಬರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರ ಬರುತ್ತದೆ. ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಗುರುಮಠಕಲ್ ತಾಲೂಕು ಹಾಗೂ ಯಾದಗಿರಿ ತಾಲೂಕಿನ ಕೆಲ ಗ್ರಾಮಗಳೂ ಬರುತ್ತವೆ. ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಗುರುಮಠಕಲ್ ಮತಕ್ಷೇತ್ರದಲ್ಲಿ 2,59,470 ಮತದಾರರು ಇದ್ದರು. ಪ್ರಕ್ರಿಯೆ ನಂತರ, 8,121ಮೃತರ, 34,818 ಕಾಯಂ ಸ್ಥಳಾಂತರಗೊಂಡ, 6,420 ಮೊದಲೇ ನೋಂದಣಿಯಾದ, 1,606 ಗೈರು ಹಾಗೂ ಇತರೆ 579 ಸೇರಿದಂತೆ 51,544 ಹೆಸರುಗಳನ್ನು ಕೈಬಿಡಲಾಗಿದೆ. ಗುರುಮಠಕಲ್ ತಾಲೂಕಿನ 1,04,356 ಹಾಗೂ ಯಾದಗಿರಿ ತಾಲೂಕಿನ 1,03,570 ಮತದಾರರು ಸೇರಿದಂತೆ, ಅ.24ರವರೆಗೆ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 2,07,928 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟಗೊಂಡಿವೆ. ಗುರುಮಠಕಲ್ ತಾಲೂಕಿನಲ್ಲಿ 145 ಹಾಗೂ ಯಾದಗಿರಿ ತಾಲೂಕಿನಲ್ಲಿ 139 ಮತಗಟ್ಟೆಗಳು ಸೇರಿದಂತೆ ಗುರುಮಠಕಲ್ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳಿವೆ.
4,34,255 ಪುರುಷರು, 4,29,692, ಮಹಿಳೆಯರು 58 ತೃತೀಯ ಲಿಂಗಿಗಳು: ಎಸ್ಐಆರ್ ಪ್ರಕ್ರಿಯೆಯ ಮೊದಲ ಹಂತದ ಅಂತಿಮದ ನಂತರ, ಆ.24 ರಂದು ಪ್ರಕಟಗೊಂಡ ಕರಡು ಪಟ್ಟಿಯಲ್ಲಂತೆ, ಯಾದಗಿರಿ ಜಿಲ್ಲೆಯಲ್ಲಿ 4,34,255 ಪುರುಷರು ಹಾಗೂ 4,29,692 ಮಹಿಳೆಯರು ಹಾಗೂ 58 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 8,64,003 ಮತದಾರರು ಇದ್ದಾರೆ. ಯಾದಗಿರಿ ಮತಕ್ಷೇತ್ರದಲ್ಲಿ 1,03,669 ಪುರುಷರು ಹಾಗೂ 1,03,138 ಮಹಿಳೆಯರು ಹಾಗೂ 19 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,06,826 ಮತದಾರರು ಇದ್ದಾರೆ. ಅದೇ ತೆರನಾಗಿ, ಸುರಪುರ ಮತಕ್ಷೇತ್ರದಲ್ಲಿ 1,23,242 ಪುರುಷರು ಹಾಗೂ 1,20,267 ಮಹಿಳೆಯರು ಹಾಗೂ 21 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,43,530 ಮತದಾರರು ಇದ್ದಾರೆ. ಶಹಾಪುರ ಮತಕ್ಷೇತ್ರದಲ್ಲಿ 1,03,543 ಪುರುಷರು ಹಾಗೂ 1,02,166 ಮಹಿಳೆಯರು ಹಾಗೂ 12 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,05,721 ಮತದಾರರು ಇದ್ದಾರೆ. ಗುರುಮಠಕಲ್ ಮತಕ್ಷೇತ್ರದಲ್ಲಿ 1,03,801 ಪುರುಷರು ಹಾಗೂ 1,04,121 ಮಹಿಳೆಯರು ಹಾಗೂ 6 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2,07,928 ಮತದಾರರು ಇದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 8,64,005 ಮತದಾರರು ಇದ್ದಾರೆ. ಇನ್ನು, 2026ರ ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಯುವ ಮತದಾರರು ಹೆಸರು ಸೇರ್ಪಡೆಗೆ ಅವಕಾಶವಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27 ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಹೇಳಿದರು.